ಸುಚನಾ ಸೇಠ್
ಚಿತ್ರದುರ್ಗ: ಉತ್ತರ ಗೋವಾದ ಕಲ್ಲಂಗೂಟ್ ಠಾಣೆಯ ಪೊಲೀಸರ ನಿರ್ದೇಶನದ ಮೇರೆಗೆ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇಠ್‌ಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
‘ಗೋವಾ ಪೊಲೀಸರ ಮಾಹಿತಿ ಮೇರೆಗೆ ಐಮಂಗಲ ಠಾಣೆಯ ಪೊಲೀಸರು ಸೋಮವಾರ ಸಂಜೆ ಕಾರೊಂದನ್ನು ತಪಾಸಣೆ ಮಾಡಿದ್ದರು. ಕಾರಿನ ಲಗೇಜ್ ಬ್ಯಾಗಿನಲ್ಲಿ ನಾಲ್ಕು ವರ್ಷದ ಬಾಲಕನ ಮೃತದೇಹ ಪತ್ತೆಯಾಯಿತು. ತಕ್ಷಣ ಮಹಿಳೆಯನ್ನು ವಶಕ್ಕೆ ಪಡೆಯಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
‘ಚಿತ್ರದುರ್ಗಕ್ಕೆ ಧಾವಿಸಿದ ಗೋವಾ ಪೊಲೀಸರು ಹೆಚ್ಚಿನ ತನಿಖೆಗೆ ಕರೆದೊಯ್ದಿದ್ದಾರೆ. ಬಾಲಕನ ಶವವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಮೂಲತಃ ಕೋಲ್ಕತ್ತದ ಸುಚನಾ ಸೇಠ್ 2008ರಲ್ಲಿ ಬೆಂಗಳೂರಿಗೆ ಬಂದಿದ್ದಳು. ತಮಿಳುನಾಡಿನ ವೆಂಕಟರಮಣ ಪರಿಚಯವಾಗಿದ್ದು, 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ಮಗ ಚಿನ್ಮಯ್ ಜನಿಸಿದ ಬಳಿಕ ಸೇಠ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ದಂಪತಿಗಳಿಬ್ಬರು ಪರಸ್ಪರ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರತಿ ಭಾನುವಾರ ಮಗನೊಂದಿಗೆ ತಂದೆ ಮಾತನಾಡಲು ಕೋರ್ಟ್ ಅವಕಾಶ ಮಾಡಿಕೊಟ್ಟಿತ್ತು. ಇದು ಸುಚನಾ ಸೇಠ್‌ಗೆ ಇಷ್ಟವಿರಲಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
‘ಗೋವಾ ಹೋಟೆಲ್‌ನಲ್ಲಿ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪಿ, ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಮಗನ ಕೊಲೆಯ ಬಳಿಕ ಕೈ ಕೊಯ್ದುಕೊಂಡಿದ್ದಳು. ಭಯದಲ್ಲಿ ಆತ್ಮಹತ್ಯೆ ತೀರ್ಮಾನದಿಂದ ಹಿಂದೆ ಸರಿದು ಬೆಂಗಳೂರಿಗೆ ಮರಳುತ್ತಿದ್ದಳು’ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.