ADVERTISEMENT

ಸಿಇಟಿ ಪರೀಕ್ಷೆ: ಬದಲಾದ ರಸ್ತೆ ಹೆಸರು, ವಿದ್ಯಾರ್ಥಿಗಳಿಗೆ ಗೊಂದಲ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 6:43 IST
Last Updated 29 ಏಪ್ರಿಲ್ 2019, 6:43 IST
ಸಿಇಟಿ ಪರೀಕ್ಷೆಗೆ ಬಂದಿರುವ ವಿದ್ಯಾರ್ಥಿಗಳು– ಸಾಂದರ್ಭಿಕ ಚಿತ್ರ
ಸಿಇಟಿ ಪರೀಕ್ಷೆಗೆ ಬಂದಿರುವ ವಿದ್ಯಾರ್ಥಿಗಳು– ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಸಿಇಟಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ರಸ್ತೆ ಮಾರ್ಗ ತಪ್ಪಾಗಿ ಮುದ್ರಿತವಾಗಿರುವ ಕಾರಣ ಸೋಮವಾರ ಇಲ್ಲಿನ ಕೇಂದ್ರವೊಂದಕ್ಕೆ 15ಕ್ಕೂ ಅಧಿಕ ವಿದ್ಯಾರ್ಥಿಗಳು ಐದತ್ತು ನಿಮಿಷ ತಡವಾಗಿ ಬಂದರಲ್ಲದೆ, ಗಾಬರಿಯಿಂದ ಒಳಗೆ ಪ್ರವೇಶಿಸಿದರು.

ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ನೂರಾರು ವಿದ್ಯಾರ್ಥಿಗಳು ಅರ್ಧಗಂಟೆ ಮುಂಚಿತವಾಗಿಯೇ (ಬೆಳಿಗ್ಗೆ 10ಕ್ಕೆ) ಬಂದಿದ್ದರು. ಅದರಲ್ಲಿ ಕೆಲವರು ಮಾತ್ರ ತಡವಾಗಿ ಬಂದರಾದರೂ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಯಿತು.

ಗೊಂದಲಕ್ಕೆ ಕಾರಣ: ವಿದ್ಯಾರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಸ ನಗರಸಭೆ ಕಚೇರಿ ಸಮೀಪ, ಬಿ.ಡಿ.ರಸ್ತೆ ಮಾರ್ಗ ಬದಲಿಗೆ ಗಾರೆಹಟ್ಟಿ ರಸ್ತೆ ಮಾರ್ಗ ಎಂದುಮುದ್ರಿತವಾಗಿರುವುದೇ ಗೊಂದಲಕ್ಕೆ ಕಾರಣವಾಗಿದೆ.

ADVERTISEMENT

ಜಿಲ್ಲೆಯ ವಿವಿಧೆಡೆಯಿಂದ ಬಂದ ವಿದ್ಯಾರ್ಥಿಗಳು, ಅವರ ಪೋಷಕರು ಕೇಂದ್ರ ಎಲ್ಲಿದೆ ಎಂದು ಸುಮಾರು 20 ನಿಮಿಷ ಇಡೀ ಗಾರೆಹಟ್ಟಿಯ ರಸ್ತೆ ತುಂಬಾ ಹುಡುಕಾಡಿದ್ದಾರೆ. ಸಿಗದ ಕಾರಣ ಗಾಬರಿಗೊಂಡಿದ್ದರು.ಬಿ.ಡಿ.ರಸ್ತೆ ಮಾರ್ಗದ ಕೇಂದ್ರವೆಂದು ಗೊತ್ತಾದ ನಂತರ ಇಲ್ಲಿಗೆ ಬರಲು ಮುಂದಾಗಿದ್ದಾರೆ. ಇದೇ ವೇಳೆ ರೈಲು ಬರುತ್ತಿದ್ದ ಕಾರಣ ಗಾರೆಹಟ್ಟಿ ಸಮೀಪದ ರೈಲ್ವೆ ಹಳಿ ಗೇಟ್ ಮುಚ್ಚಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಐದತ್ತು ನಿಮಿಷ ತಡವಾಗಿ ಕೇಂದ್ರದತ್ತ ಬಂದು ಒಳಗೆ ಪ್ರವೇಶಿಸಿದರು.

ಹೊರಗೆ ನಿಂತಿದ್ದ ಪೋಷಕರು ತಪ್ಪು ಮುದ್ರಣದಿಂದಾಗಿಯೇ ಈ ಗೊಂದಲ ಉಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.