ADVERTISEMENT

ಚಳ್ಳಕೆರೆ: ಮನರೇಗಾ ಯೋಜನೆ ಮರುಜಾರಿಗೆ ಒಗ್ಗಟಿನ ಹೋರಾಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:29 IST
Last Updated 1 ಫೆಬ್ರುವರಿ 2026, 7:29 IST
ಚಳ್ಳಕೆರೆಯಿಂದ ತಾಲ್ಲೂಕಿನ ದೊಡ್ಡೇರಿಯಿಂದ ಚಳ್ಳಕೆರೆ ಅಂಬೇಡ್ಕರ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಮನರೇಗಾ ಬಚಾವ್ ಸಂಗ್ರಾಮ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು
ಚಳ್ಳಕೆರೆಯಿಂದ ತಾಲ್ಲೂಕಿನ ದೊಡ್ಡೇರಿಯಿಂದ ಚಳ್ಳಕೆರೆ ಅಂಬೇಡ್ಕರ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಮನರೇಗಾ ಬಚಾವ್ ಸಂಗ್ರಾಮ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು   

ಚಳ್ಳಕೆರೆ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಮರುಜಾರಿ ಮಾಡುವ ಜೊತೆಗೆ ಗಾಂಧಿ ಹೆಸರನ್ನು ಮತ್ತೆ ಯೋಜನೆಗೆ ಇಡುವಂತೆ ಪಕ್ಷ ಭೇದ ಮರೆತು ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದು ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.

ನರೇಗಾ ಯೋಜನೆ ಮರುಜಾರಿಗೆ ಆಗ್ರಹಿಸಿ ದೊಡ್ಡೇರಿಯಿಂದ ಚಳ್ಳಕೆರೆ ಅಂಬೇಡ್ಕರ್ ವೃತ್ತದವರೆಗೆ ಹಮ್ಮಿಕೊಂಡಿದ್ದ ಮನರೇಗಾ ಬಚಾವ್ ಸಂಗ್ರಾಮ ಜನಜಾಗೃತಿ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘2005ರಲ್ಲಿ ಮನಮೋಹನ ಸಿಂಗ್ ಅವರು ಬಡವರು, ಕೂಲಿ ಕಾರ್ಮಿಕರು, ಮಹಿಳೆಯರಿಗೆ, ಗ್ರಾಮೀಣ ಭಾಗದ ಜನರಿಗೆ ಉಪಯೋಗ ಆಗಲಿ ಎಂಬ ಸದುದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್‌ ಬಡವರಿಗೆಂದು ಜಾರಿಗೆ ತಂದಿದ್ದ ಯೋಜನೆಗಳ ಹೆಸರು ಬದಲಾವಣೆ ಮಾಡಿ ಶ್ರೀಮಂತರಿಗೆ ರೆಡ್ ಕಾರ್ಪೆಟ್ ಹಾಕುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಬಡವರ ಏಳಿಗೆ ಬಯಸುವ ಜನಪ್ರತಿನಿಧಿಗಳು ಯಾರೇ ಇರಲಿ ಕೇಂದ್ರ ಸರ್ಕಾರದ ನಡೆಯನ್ನು ಒಪ್ಪುವುದಿಲ್ಲ. ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳು ಎಷ್ಟು ಮುಖ್ಯವೋ ನರೇಗಾ ಯೋಜನೆಯು ದೇಶದ ಜನರಿಗೆ ಅಷ್ಟೇ ಮುಖ್ಯ’ ಎಂದರು.

ADVERTISEMENT

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಸೂದೆ ಕೂಲಿ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರವಾಗಿದೆ. ಕೂಲಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಜೊತೆಗೆ ಬಡವರ ಏಳಿಗೆ ಸಹಿಸದೇ ಕೇಂದ್ರ ಸರ್ಕಾರ ನರೇಗಾ ಯೋಜನೆ ಹೆಸರು ಬದಲಿಸಿದೆ. ಕಾಂಗ್ರೆಸ್ ಪಕ್ಷದ ಮೇಲಿನ ಸಿಟ್ಟಿಗೆ ಗಾಂಧಿ ಹೆಸರನ್ನು ತೆಗೆದು ಹಾಕಿ ಅಪಮಾನ ಮಾಡುತ್ತಿದೆ. ಈ ಯೋಜನೆ ಹೆಸರು ಬದಲಾವಣೆ ಹಿಂದೆ ಆರ್‌ಎಸ್‌ಎಸ್ ಪಾತ್ರ ಇದೆ’ ಎಂದು ಕಿಡಿಕಾರಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ ಪೀರ್, ಬ್ಲಾಕ್ ಕಾಂಗ್ರೆಸ್ ಪರುಶುರಾಂಪುರ ಘಟಕದ ಅಧ್ಯಕ್ಷ ಜಿ.ಟಿ. ಶಶಿಧರ್, ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ವೀರಭದ್ರಪ್ಪ, ಸಿ.ವೀರಭದ್ರ ಬಾಬು, ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.