ಚಳ್ಳಕೆರೆ: ವರ್ಷಿತಾ ಕೊಲೆ ಪ್ರಕರಣ ಖಂಡಿಸಿ ತಾಲ್ಲೂಕು ದಲಿತ ಪರ ಸಂಘಟನೆ ಕಾರ್ಯಕರ್ತರು ಹಾಗೂ ವಿವಿಧ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೋಮವಾರ ನಗರದ ಪ್ರಮುಖ ಬೀದಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿಗೆ ತೆರಳಿ ಧರಣಿಸಿ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ದಲಿತಪರ ಸಂಘಟನೆಯ ತಾಲ್ಲೂಕು ಒಕ್ಕೂಟದ ಮುಖಂಡ ಎಸ್.ಟಿ. ವಿಜಯಕುಮಾರ್ ಮಾತನಾಡಿ, ಸ್ವಾತಂತ್ರ್ಯ ಬಂದು ಹಲವು ವರ್ಷ ಆಗಿದ್ದರೂ ದೇಶದ ಅಸಹಾಯಕ ಹೆಣ್ಣುಮಕ್ಕಳ ಮೇಲೆ ಶೋಷಣೆ, ಅತ್ಯಾಚಾರ, ಲೈಗಿಂಕ ದೌರ್ಜನ್ಯ, ಕೊಲೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಚೆಗೆ ಚಿತ್ರದುರ್ಗದಲ್ಲಿ ನಡೆದ ವರ್ಷಿತಾ ಅವರ ಕೊಲೆಗೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ವಿವಿಧ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ದಲಿತ ಮುಖಂಡ ದ್ಯಾವರನಹಳ್ಳಿ ಬಿ. ಆನಂದಕುಮಾರ್ ಮಾತನಾಡಿ, ಕೊಲೆ ಆರೋಪಿಯನ್ನು ರೋಗಿ ಎಂದು ಪರಿಗಣಿಸದೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಸ್ವೀಕರಿಸಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಹಶೀಲ್ದಾರ್ ರೇಹಾನ್ ಪಾಷ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಮಾದಿಗ ದಂಡೋರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಹೊನ್ನೂರುಸ್ವಾಮಿ, ಕಾಂತರಾಜ, ಹೊನ್ನೂರು ಮಾರಣ್ಣ, ನೆಲಗೆತ್ತನಹಟ್ಟಿ ನಾಗರಾಜ, ರಂಗಸ್ವಾಮಿ ಮಾತನಾಡಿದರು.
ಕಾರ್ಯಕರ್ತ ಸುರೇಶ್, ಭೀಮಣ್ಣ, ನಗರಂಗೆರೆ ಜಗದೀಶ್, ಮಹಾಂತೇಶ್, ಚೌಳೂರು ಮಂಜುನಾಥ್, ತಿಪ್ಪೇರುದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.