ADVERTISEMENT

ಚಿತ್ರದುರ್ಗ | ಕರ್ತವ್ಯ ಲೋಕ; ಚಳ್ಳಕೆರೆ ಎಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 16:18 IST
Last Updated 15 ಆಗಸ್ಟ್ 2024, 16:18 IST
<div class="paragraphs"><p>ಅಮಾನತು</p></div>

ಅಮಾನತು

   

ಚಿತ್ರದುರ್ಗ: ಮಹಿಳೆಯೊಬ್ಬರ ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಯ ಎಎಸ್‌ಐ ಮುಷ್ಟೂರಪ್ಪ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್‌ ಮೀನಾ ಆದೇಶಿಸಿದ್ದಾರೆ.

ಚಳ್ಳಕೆರೆಯ ಪೃಥ್ವಿರಾಜ್ (27) ನಾಪತ್ತೆ ಸಂಬಂಧ ಅವರ ತಾಯಿ ರತ್ನಮ್ಮ ಅವರು ಜುಲೈ 21ರಂದು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು, ಆದರೆ ಪೊಲೀಸರು ದೂರು ಸ್ವೀಕಾರ ಮಾಡದೇ ವಾಪಸ್‌ ಕಳುಹಿಸಿದ್ದರು. ನಂತರ ಪತ್ತೆಯಾಗಿದ್ದ ಪೃಥ್ವಿರಾಜ್‌ ಪೊಲೀಸ್‌ ಠಾಣೆಗೆ ತೆರಳಿ ತನ್ನ ತಾಯಿಯ ದೂರು ಏಕೆ ಸ್ವೀಕಾರ ಮಾಡಿಲ್ಲ ಎಂದು ಪ್ರಶ್ನಿಸಿ ಗಲಾಟೆ ಮಾಡಿದ್ದ.

ADVERTISEMENT

ಪೊಲೀಸರು ತನಗೆ ಥಳಿಸಿ ಮೊಬೈಲ್‌ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ಪೃಥ್ವಿರಾಜ್‌ ವಿಡಿಯೊ ಮಾಡಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ‘ನ್ಯಾಯ ಕೇಳಿದರೆ ಠಾಣೆಯಲ್ಲಿ ತಾಯಿ ಎದುರಿನಲ್ಲೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನಾನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡಿದ್ದೇನೆ. ಇಡೀ ಬೆಂಗಳೂರು ಭೂಪಟ ನನ್ನ ಬಳಿ ಇದೆ. ಭಾರತೀಯ ವಿಜ್ಞಾನ ಸಂಸ್ಥೆ, ನಮ್ಮ ಮೆಟ್ರೊ, ಡಿಆರ್‌ಡಿಒ, ಇಸ್ರೊ,  ವಿಧಾನಸೌಧ, ರಾಜಭವನಕ್ಕೆ ಎಲ್ಲಿಂದ ವಿದ್ಯುತ್‌ ಬರುತ್ತದೆ ಎಂಬುದು ಗೊತ್ತಿದೆ. ಎಲ್ಲಿ ಚುಚ್ಚಿದರೆ ಎಲ್ಲಿ ಸ್ಫೋಟವಾಗುತ್ತದೆ ಎಂಬುದು ನನಗೆ ಗೊತ್ತು. ನಾನು ಏನು ಬೇಕಾದರೂ ಮಾಡುತ್ತೇನೆ’ ಎಂದು ಕೂಗಾಡಿದ್ದ.

ನಂತರ ಪೊಲೀಸರು ಈತನನ್ನು ಪೊಲೀಸ್‌ ಠಾಣೆಗೆ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಈ ನಡುವೆ ಆ.14ರಂದು ಬೆಂಗಳೂರಿಗೆ ತೆರಳಿದ್ದ ಪೃಥ್ವಿರಾಜ್‌  ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿ ದುರ್ವರ್ತನೆ ತೋರಿದ್ದ. ವಿಧಾನಸೌಧ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದರು.

ರತ್ನಮ್ಮ ಅವರ ದೂರು ಸ್ವೀಕಾರ ಮಾಡದಿರುವ ವಿಷಯ ಕುರಿತಂತೆ ಡಿವೈಎಸ್‌ಪಿ ರಾಜಣ್ಣ ವರದಿ ನೀಡಿದ್ದರು. ವರದಿಯಲ್ಲಿ ಕರ್ತವ್ಯ ಲೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಎಸ್‌ಐ ಅವರನ್ನು ಅಮಾನತುಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.