ADVERTISEMENT

ಚಂದ್ರವಳ್ಳಿಯಲ್ಲಿ ಜಲಲ.. ಜಲಧಾರೆ... ಧುಮ್ಮಿಕ್ಕಿ ಹರಿಯುತ್ತಿರುವ ನೀರು

ಧುಮ್ಮಿಕ್ಕಿ ಹರಿಯುತ್ತಿರುವ ನೀರು; ಪ್ರವಾಸಿಗರ ಭೇಟಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 4:47 IST
Last Updated 21 ನವೆಂಬರ್ 2021, 4:47 IST
ಚಿತ್ರದುರ್ಗದ ಚಂದ್ರವಳ್ಳಿ ಕೆರೆಯ ಬಂಡೆಯಿಂದ ನೀರು ಜಲಧಾರೆಯಂತೆ ಹರಿಯುತ್ತಿರುವುದು
ಚಿತ್ರದುರ್ಗದ ಚಂದ್ರವಳ್ಳಿ ಕೆರೆಯ ಬಂಡೆಯಿಂದ ನೀರು ಜಲಧಾರೆಯಂತೆ ಹರಿಯುತ್ತಿರುವುದು   

ಚಿತ್ರದುರ್ಗ: ಇಲ್ಲಿಯ ಐತಿಹಾಸಿಕ ‘ಚಂದ್ರವಳ್ಳಿ’ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಮಳೆಯಿಂದಾಗಿ ಕೋಡಿ ಬಿದ್ದಿದ್ದು, ನೀರಿನ ಹರಿವು ಹೆಚ್ಚಳವಾಗಿದೆ. ಜಲಧಾರೆಯಂತೆ ಧುಮ್ಮಿಕ್ಕಿ ಹರಿಯುತ್ತಿದೆ.

ಮಳೆಯಿಂದಾಗಿ ಸಾವಿರಾರು ಎಕರೆ ಭೂಮಿ ನೀರು ಪಾಲಾಗಿ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಮತ್ತೊಂದೆಡೆ ಚಂದ್ರವಳ್ಳಿಯಲ್ಲಿ ನೀರು ಹರಿಯುತ್ತಿರುವ ಸುಂದರ ಕ್ಷಣ ಕಣ್ತುಂಬಿಕೊಳ್ಳಲು ನಾಗರಿಕರು ಭೇಟಿ ನೀಡುತ್ತಿದ್ದಾರೆ.

ಸತತ ಒಂದು ವಾರದಿಂದಲೂ ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ನಗರ ವ್ಯಾಪ್ತಿಯ ಕೆಲ ಹೊಂಡಗಳು ತುಂಬುವ ಹಂತ ತಲುಪಿವೆ. ಚಂದ್ರವಳ್ಳಿ ಕೆರೆ ದಶಕದ ನಂತರ ಮೂರನೇ ಬಾರಿ ಕೋಡಿ ಬಿದ್ದಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ADVERTISEMENT

ಇದಕ್ಕೆ ಸಾಕ್ಷಿ ಎಂಬಂತೆ ಕೋಡಿ ಬಿದ್ದ ನೀರು ಜಲಪಾತದಂತೆ ಬಂಡೆ ಮೇಲಿಂದ ಧುಮ್ಮಿಕ್ಕಿ ಹಾಲಿನಂತೆ ಹರಿಯುತ್ತಿದೆ. ಈ ಹಿಂದೆ 2017ರಲ್ಲಿ ಬಂಡೆಯಿಂದ ನೀರು ಹರಿಯುವ ವೇಳೆ ಯುವಕರು, ಯುವತಿಯರು, ಮಕ್ಕಳು ಸಂಭ್ರಮದಲ್ಲಿ ತೇಲಾಡಿದ್ದರು. ಆದರೆ, ಒಂದೆರಡು ವರ್ಷದ ಹಿಂದೆ ಯುವಕನೊಬ್ಬ ಬಂಡೆಯಿಂದ ಬಿದ್ದು, ಮೃತಪಟ್ಟ ನಂತರ ಬಂಡೆಯನ್ನು ಏರಿ ಸಂಭ್ರಮಿಸಲು ಇಲ್ಲಿ ಯಾರಿಗೂ ಅವಕಾಶ ನೀಡುತ್ತಿಲ್ಲ. ಆದ್ದರಿಂದ ನೀರು ಹರಿಯುವ ದೃಶ್ಯವನ್ನು ಮಾತ್ರ ನೋಡಲು ಜನ ಮುಂದಾಗುತ್ತಿದ್ದಾರೆ.

ಗುರುವಾರ ರಾತ್ರಿ ಸುರಿದ ಮಳೆಗೆ ಚಂದ್ರವಳ್ಳಿ ಕೆರೆ ತುಂಬಬಹುದು ಎಂಬ ನಿರೀಕ್ಷೆ ಬಹುತೇಕ ನಾಗರಿಕರಲ್ಲಿ ಇತ್ತು. ಶುಕ್ರವಾರ ಸುರಿದ ಮಳೆಯಿಂದಾಗಿ ತುಂಬಿ ಕೋಡಿ ಬಿದ್ದಿದೆ. ಇದನ್ನು ನೋಡಲು ಜನ ಸೇರಿದ್ದರು. ಸುಂದರ ಚಿತ್ರಗಳನ್ನು ತೆಗೆಯಲು ಕೂಡ ಕೆಲವರು ಹರಸಾಹಸಪಟ್ಟರು.

ನಗರ ವ್ಯಾಪ್ತಿಯಲ್ಲಿನ ಐತಿಹಾಸಿಕ ಕೋಟೆಯ ಮೇಲಿನ ಮೆಟ್ಟಿಲುಗಳಿಂದ ಕೂಡ ನೀರು ಹರಿಯುತ್ತಿದೆ. ಬಿರುಸಿನ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಆದರೆ, ಮಳೆ ಬಿಟ್ಟ ಕಾರಣ ಶನಿವಾರ ಹೊಂಡ, ಕೆರೆಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.