ADVERTISEMENT

ಹೊಸದುರ್ಗ: ಚನ್ನಕೇಶವಸ್ವಾಮಿ ರಥೋತ್ಸವ 7ಕ್ಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 4:52 IST
Last Updated 6 ಮಾರ್ಚ್ 2023, 4:52 IST
ಹೊಸದುರ್ಗದ ಬಾಗೂರಿನಲ್ಲಿರುವ ಹೊಯ್ಸಳರ ಕಾಲದ ಚನ್ನಕೇಶವಸ್ವಾಮಿ ದೇವಾಲಯ
ಹೊಸದುರ್ಗದ ಬಾಗೂರಿನಲ್ಲಿರುವ ಹೊಯ್ಸಳರ ಕಾಲದ ಚನ್ನಕೇಶವಸ್ವಾಮಿ ದೇವಾಲಯ   

ಹೊಸದುರ್ಗ: ತಾಲ್ಲೂಕಿನ ಬಾಗೂರಿನ ಚನ್ನಕೇಶವಸ್ವಾಮಿಯ ರಥೋತ್ಸವ ಮಾರ್ಚ್‌ 7ರಂದು ವಿಜೃಂಭಣೆಯಿಂದ ನಡೆಯಲಿದೆ.

968 ವರ್ಷ ಹಳೆಯದಾದ ಈ ದೇವಾಲಯ 16 ಎಕರೆ ಪ್ರದೇಶದಲ್ಲಿದೆ. ಮುಂಭಾಗದಲ್ಲಿ 57 ಅಡಿ ಎತ್ತರದ ಗರುಡ ಸ್ತಂಭವಿದೆ. ಅದರ ಮುಂದೆ ಒಂದು ದೀಪ ಸ್ತಂಭವಿದೆ. ಪ್ರತಿ ಕಾರ್ತಿಕ ಮಾಸದಂದು ಇಲ್ಲಿ ದೀಪ ಹಚ್ಚುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದೇವಾಲಯವನ್ನು ವಿಶಿಷ್ಟಾದ್ವೈತ ಪ್ರತಿಪಾದಕ ರಾಮಾನುಜಾಚಾರ್ಯರು ಹಿಂದೂ ಧರ್ಮದ ಪ್ರಚಾರಕ್ಕಾಗಿ ನಿರ್ಮಿಸಿದರು ಎಂಬ ಐತಿಹ್ಯ ಇದೆ.

ರಥೋತ್ಸವ ಅಂಗವಾಗಿ ದೇವರಿಗೆ ಹಂಸವಾಹನ, ಶೇಷವಾಹನ, ಆಂಜನೇಯವಾಹನ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಬೇಲೂರಿನ ಚನ್ನಕೇಶವಸ್ವಾಮಿಯ ಜಾತ್ರೆಯಂದು ಇಲ್ಲಿ ಉತ್ಸವ ನಡೆಯುತ್ತದೆ.

ADVERTISEMENT

ರಥೋತ್ಸವದ ಮುನ್ನ ದಿನ ಕಡಲೆ ಗರುಡೋತ್ಸವ ನಡೆಯಲಿದೆ. ರಥೋತ್ಸವಕ್ಕೂ ಮುನ್ನ ದೇವರಿಗೆ ಅಭಿಷೇಕ, ಸಿಂಹವಾಹನೋತ್ಸವ, ಗರುಡ ಪಟ ಪ್ರತಿಷ್ಠೆ, ಶೇಷ ವಾಹನೋತ್ಸವ, ಕಡಲೆ ಗರುಡೋತ್ಸವ, ಕಲ್ಯಾಣೋತ್ಸವ, ಗಜಾರೋಹಣ, ಕೃಷ್ಣಗಂಧೋತ್ಸವ ನಂತರ ಬ್ರಹ್ಮ ರಥೋತ್ಸವ ಜರುಗುತ್ತದೆ. ಅಶ್ವಾರೋಹಣ, ಶಯನೋತ್ಸವ, ಸೀತಾರಾಮೋತ್ಸವ, ಆಂಜನೇಯೋತ್ಸವ ಜರುಗುತ್ತದೆ.

ಈ ದೇವಾಲಯದಲ್ಲಿ ಪತ್ತೆಯಾಗಿರುವ ಶಿಲಾಶಾಸನ ಪೂರ್ವದ ಹಳೆಗನ್ನಡದಲ್ಲಿದ್ದು, ಅದರಲ್ಲಿ ಬಾಗೂರಿನ ಇತಿಹಾಸ, 101 ಬಾವಿ ಮತ್ತು 101 ದೇವಾಲಯಗಳಿರುವ ವಿಶೇಷತೆ ಹಾಗೂ ಚನ್ನಕೇಶವಸ್ವಾಮಿ ದೇವಾಲಯ ನಿರ್ಮಿಸಿದವರ ಹೆಸರು ಹಾಗೂ ರಥೋತ್ಸವದಂದು ಪಕ್ಕದ ಹಳೇಕುಂದೂರಿನ ಜನ ದೇವರಿಗಾಗಿ ತರುವ ಬಾಳೆಹಣ್ಣು, ಬಾಳೆಎಲೆ, ಪಂಚಾಮೃತಕ್ಕೆ ಬೇಕಾಗುವ ಸಾಮಗ್ರಿಗಳನ್ನು ವಿವರಿಸಲಾಗಿದೆ ಎಂದು ಸಂಶೋಧಕ ಬಾಗೂರು ಆರ್.‌ ನಾಗರಾಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.