
ಹೊಳಲ್ಕೆರೆ: ತಾಲ್ಲೂಕಿನ ಕುಮ್ಮಿನ ಘಟ್ಟದಲ್ಲಿ ಶಾಸಕ ಎಂ.ಚಂದ್ರಪ್ಪ ₹ 2.10 ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಮಳೆಗಾಲದಲ್ಲಿ ಕಾಡಿನ ನೀರು ಹರಿದು ವ್ಯರ್ಥವಾಗಿ ಹೋಗುತ್ತದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಅರಣ್ಯ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸುವುದರಿಂದ ಹೆಚ್ಚು ನೀರು ಸಂಗ್ರಹಿಸಬಹುದು. ಆಗ ಅಂತರ್ಜಲ ವೃದ್ಧಿಸಿ ತೋಟಗಳಿಗೆ ಅನುಕೂಲ ಆಗಲಿದೆ’ ಎಂದು ಹೇಳಿದರು.
‘ತಾಲ್ಲೂಕಿನಲ್ಲಿ ಹೆಚ್ಚು ಅಡಿಕೆ ತೋಟಗಳಿದ್ದು, ಅಡಿಕೆ ಬೆಲೆಯೂ ಉತ್ತಮವಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಲು ಅಡಿಕೆ ತೋಟಗಳೇ ಆಧಾರವಾಗಿದ್ದು, ಅವರು ನೀರನ್ನು ಮಾತ್ರ ನಿರೀಕ್ಷಿಸುತ್ತಾರೆ. ಕುಮ್ಮಿನಘಟ್ಟ ಗ್ರಾಮದ ಪಕ್ಕದಲ್ಲಿರುವ ಅರಣ್ಯದ ತುಸೋಬಯ್ಯನ ಕಟ್ಟೆ ಸಮೀಪ ದೊಡ್ಡ ಬ್ಯಾರೇಜ್ ನಿರ್ಮಿಸುತ್ತಿದ್ದು, ಸುತ್ತಲಿನ ಹತ್ತಾರು ಹಳ್ಳಿಗಳ ರೈತರಿಗೆ ಅನುಕೂಲ ಆಗಲಿದೆ’ ಎಂದರು.
‘ಕಳೆದ ವರ್ಷ ಮಳೆ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿ ಹೋಗಿ ಅಡಿಕೆ ತೋಟಗಳು ಒಣಗುವ ಹಂತಕ್ಕೆ ಬಂದಿದ್ದವು. ರೈತರು ಒಡವೆ ಅಡವಿಟ್ಟು, ಸಾಲ ಮಾಡಿ ಕೊಳವೆ ಬಾವಿ ಕೊರೆಯಿಸಿದ್ದರು. ಕೆಲವರು ದುಬಾರಿ ಹಣ ಕೊಟ್ಟು ಟ್ಯಾಂಕರ್ ನೀರು ಹಾಕಿಸಿದ್ದರು. ಈ ವರ್ಷ ಹೆಚ್ಚು ಮಳೆ ಬಂದಿರುವುದರಿಂದ ಕೆರೆ ಕಟ್ಟೆಗಳು ತುಂಬಿವೆ. ಅಂತರ್ಜಲವೂ ಹೆಚ್ಚಿದೆ’ ಎಂದು ಹೇಳಿದರು.
‘ತಾಲ್ಲೂಕಿನ ಕೆರೆಗಳಿಗೆ ಇನ್ನು ಆರು ತಿಂಗಳಲ್ಲಿ ಭದ್ರಾ ನೀರು ಹರಿಯಲಿದೆ. ₹ 500 ಕೋಟಿ ವೆಚ್ಚದ ವಿದ್ಯುತ್ ಯೋಜನೆಯೂ ಮಂಜೂರಾಗಿದೆ. ವಾಣಿವಿಲಾಸ ಸಾಗರದಿಂದ ತಾಲ್ಲೂಕಿನ ಪ್ರತಿ ಹಳ್ಳಿಗೂ ಕುಡಿಯುವ ನೀರು ವಿತರಿಸುವ ₹ 375 ಕೋಟಿ ವೆಚ್ಚದ ಯೋಜನೆಯೂ ಪೂರ್ಣಗೊಳ್ಳುವ ಹಂತದಲ್ಲಿದೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ, ಸದಸ್ಯ ನಟರಾಜ್, ಸಣ್ಣ ನೀರಾವರಿ ಇಲಾಖೆಯ ಎಇಇ ನಾಗರಾಜ್, ತಮ್ಮಣ್ಣ, ಚಂದ್ರಪ್ಪ, ಲೋಕೇಶ್, ಹಾಲೇಶಪ್ಪ, ತಿಮ್ಮಪ್ಪ, ರುದ್ರಪ್ಪ, ಮಂಜುನಾಥ, ಕರಿಯಪ್ಪ, ಬಸವರಾಜ್, ರಾಜಪ್ಪ, ವೆಂಟಕೇಶ್, ಗಿರೀಶ್, ಕರಿಬಸಪ್ಪ, ಶರಣಪ್ಪ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.