ADVERTISEMENT

ಆಂಜನೇಯಸ್ವಾಮಿ, ಬಸವೇಶ್ವರ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:29 IST
Last Updated 10 ಫೆಬ್ರುವರಿ 2026, 5:29 IST
ಚಿಕ್ಕಜಾಜೂರು ಸಮೀಪದ ಸಾಸಲು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕೆಂಡಾರ್ಚನೆ ಸೇವೆ ನಡೆಯಿತು
ಚಿಕ್ಕಜಾಜೂರು ಸಮೀಪದ ಸಾಸಲು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕೆಂಡಾರ್ಚನೆ ಸೇವೆ ನಡೆಯಿತು   

ಚಿಕ್ಕಜಾಜೂರು: ಸಮೀಪದ ಸಾಸಲು ಗ್ರಾಮದಲ್ಲಿ ಸೋಮವಾರ ಆಂಜನೇಯಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು.

ಸೋಮವಾರ ಮುಂಜಾನೆಯಿಂದಲೇ ಆಂಜನೇಯ ಹಾಗೂ ಬಸವೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಬೆಳಿಗ್ಗೆ ಸಣ್ಣ ರಥದಲ್ಲಿ (ಉಚ್ಛಾಯ) ಇಡಲಾದ ಆನೆ ಮಾದರಿಯ ಮೇಲೆ ಉತ್ಸವ ಮೂರ್ತಿಗಳನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು. ಊರಿನ ಹೊರ ವಲಯದವರೆಗೆ ಉಚ್ಛಾಯ ರಥವನ್ನು ಎಳೆದು ತರಲಾಯಿತು. ಅಲ್ಲಿ ಧೂಪ ಸೇವೆಯನ್ನು ನಡೆಸಿ, ರಥವನ್ನು ಮರಳಿ ದೇವಸ್ಥಾನದ ಬಳಿ ಎಳೆದು ತರಲಾಯಿತು.

ಕೆಂಡಾರ್ಚನೆ: ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಅಗ್ನಿ ಕುಂಡದಲ್ಲಿ ಬೆಂಕಿಯನ್ನು ಹಾಕಿ, ಅಗ್ನಿ ಕುಂಡದ ಸುತ್ತ ಹರಿಶಿನ, ಕುಂಕುಮಗಳಿಂದ ಅಲಂಕಾರ ಮಾಡಲಾಗಿತ್ತು. ಅರ್ಚಕರು ಅಷ್ಟ ದಿಕ್ಕುಗಳಿಗೂ ಎಡೆ ಹಾಗೂ ಹಣ್ಣು ಕಾಯಿಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ನಂತರ, ವೀರಭದ್ರಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಹೊತ್ತ ಭಕ್ತರು ಕೆಂಡವನ್ನು ಹಾಯ್ದರು. ಬಳಿಕ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಹಾಗೂ ನೀಲಮ್ಮ ದೇವಿಯರ ಮದುವೆ ಶಾಸ್ತ್ರವನ್ನು ನಡೆಸಲಾಯಿತು.

ADVERTISEMENT

ರಥೋತ್ಸವ: ಸಂಜೆ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಗ್ರಾಮದ ರಸ್ತೆಗಳಲ್ಲಿ ನಂದಿಕೋಲು ಕುಣಿತ, ಡೊಳ್ಳುಕುಣಿತಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಸುಂದರವಾಗಿ ಅಲಂಕರಿಸಲ್ಪಟ್ಟ ರಥಕ್ಕೆ ದೊಡ್ಡೆಡೆ ಸೇವೆ ಸಲ್ಲಿಸಿ, ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದಲ್ಲಿ ಕೂರಿಸಲಾಯಿತು. ನೂರಾರು ಭಕ್ತರು ತೆಂಗಿನ ಕಾಯಿ ಒಡೆದು, ಗ್ರಾಮದ ಹೊರ ವಲಯದವರೆಗೆ ಎಳೆದು ನಿಲ್ಲಿಸಿದರು. ಅಲ್ಲಿ ಭೂತೇಶ್ವರ ದೇವಸ್ಥಾನಕ್ಕೆ ತೆರಳಿದ ಅರ್ಚಕರು ಭೂತ ಸೇವೆಯನ್ನು ನಡೆಸಿದರು. ಬಳಿಕ ರಥವನ್ನು ಮರಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಎಳೆದು ತರಲಾಯಿತು.

ಮಂಗಳವಾರ ಸಂಜೆ, ಓಕುಳಿಯನ್ನು ನಡೆಸಲಾಗುವುದು. ನಂತರ, ಬಸವೇಶ್ವರ ಸ್ವಾಮಿ ಮತ್ತು ನೀಲಮ್ಮ ದೇವಿಯರ ಮಾಮನೆ ಶಾಸ್ತ್ರ ನಡೆಸುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಗ್ರಾಮದ ಮುಖಂಡರು ತಿಳಿಸಿದರು.

ಚಿಕ್ಕಜಾಜೂರು ಸಮೀಪದ ಸಾಸಲು ಗ್ರಾಮದಲ್ಲಿ ಸೋಮವಾರ ಸಂಜೆ ಆಂಜನೇಯಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.