ಚಳ್ಳಕೆರೆ: ‘ಸ್ಥಳೀಯ ಇತಿಹಾಸ ಪರಂಪರೆ ಮತ್ತು ಸ್ಮಾರಕಗಳ ಮಾಹಿತಿಯನ್ನು ಮಕ್ಕಳಿಗೆ ತಪ್ಪದೇ ತಿಳಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಚಿತ್ರದುರ್ಗ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಾಚ್ಯಪ್ರಜ್ಞೆ ಮತ್ತು ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಾಡಿನ ನೈಜ ಚರಿತ್ರೆ ನಿರೂಪಿಸುವ ಆಯಾ ಗ್ರಾಮದ ಐತಿಹಾಸಿಕ ದೇವಸ್ಥಾನದ ಮೂರ್ತಿ ಶಿಲ್ಪಗಳು, ಶಾಸನ, ವೀರಗಲ್ಲು, ಮಾಸ್ತಿಕಲ್ಲು, ಕೋಟೆ-ಕೊತ್ತಲು ದುರಸ್ತಿ ಜತೆಗೆ ಅವುಗಳ ಸುರಕ್ಷತೆಗೆ ಗ್ರಾಮ ಆಡಳಿತ ಮುಂದಾಗಬೇಕು. ಪ್ರಾಚ್ಯವಸ್ತು ಸಂಗ್ರಹದ ಬಗ್ಗೆ ಪ್ರತಿಯೊಬ್ಬ ಮಕ್ಕಳಲ್ಲಿಯೂ ಅರಿವು ಮೂಡಿಸಬೇಕು’ ಎಂದು ಹೇಳಿದರು.
‘ಸರ್ಕಾರದ ಯೋಜನೆಗಳ ಅನುದಾನದಲ್ಲಿ ಇಂತಿಷ್ಟು ಹಣ ಸ್ಮಾರಕ ರಕ್ಷಣೆಗೆ ಮೀಸಲಿರಿಸಬೇಕು. ರಾಜರ ಸಾಧನೆ ಮತ್ತು ಯುದ್ಧದ ಬಗೆಗಿನ ಮಾಹಿತಿಗಿಂತ ಜನಸಾಮಾನ್ಯರ ಬದುಕಿನ ಚರಿತ್ರೆ ಕಡೆಗೆ ಹೆಚ್ಚಿನ ಗಮನಹರಿಸಬೇಕು’ ಎಂದು ಸಹ ಶಿಕ್ಷಕಿ ರೂಪಾ ಹೇಳಿದರು.
ಶಿಕ್ಷಕರಾದ ಶಿವಮೂರ್ತಿ, ಪಾವನಾ ಮಾತನಾಡಿದರು.
ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ನಡೆಸಲಾಯಿತು.
ಮುಖ್ಯಶಿಕ್ಷಕ ಡಿ.ಎಸ್.ಪಾಲಯ್ಯ, ಶಿಕ್ಷಣ ಸಂಯೋಜಕ ರವಿಶಂಕರ್, ಮಾರುತಿ ಭಂಡಾರಿ, ದಾಪಪೀರ್, ಶಿವಣ್ಣ, ಈಶ್ವರಪ್ಪ, ಜಗದೀಶ್, ಸವಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.