ADVERTISEMENT

ಚಿತ್ರದುರ್ಗ: ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ

ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆ, ಹೂ ನೀಡಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು, ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:25 IST
Last Updated 17 ಮೇ 2022, 4:25 IST
ಚಿತ್ರದುರ್ಗ ತಾಲ್ಲೂಕಿನ ಗುತ್ತಿನಾಡು ಕುವೆಂಪು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.
ಚಿತ್ರದುರ್ಗ ತಾಲ್ಲೂಕಿನ ಗುತ್ತಿನಾಡು ಕುವೆಂಪು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.   

ಚಿತ್ರದುರ್ಗ: ‘ಶಾಲಾ ಪ್ರಾರಂಭೋತ್ಸವ‌’ವನ್ನು ಸೋಮವಾರ ಜಿಲ್ಲೆಯಾದ್ಯಂತ ಹಬ್ಬದಂತೆ ಆಚರಿಸಲಾಯಿತು. ಕೊರೊನಾ ಕಾರಣಕ್ಕೆ ಕಳೆಗುಂದಿದ್ದ ಸಂಭ್ರಮ 2022–23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪುನಃ ಕಳೆಗಟ್ಟಿತು.

ಶನಿವಾರವೇ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದರಿಂದ ಸೋಮವಾರ ಬೆಳಿಗ್ಗೆ 8.30ಕ್ಕೆ ಶಾಲಾ ಸಿಬ್ಬಂದಿ ತಳಿರು ತೋರಣ, ಹೂವಿನ ಹಾರಗಳನ್ನು ಕಟ್ಟಿ ಶಾಲೆ ಮುಖ್ಯದ್ವಾರಗಳನ್ನು ಸಿಂಗರಿಸಿದರು. ಶಾಲೆಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಿ ಸಮಾರಂಭ ನಡೆಸಿದ್ದು ಸಾಮಾನ್ಯವಾಗಿತ್ತು.

ಚಿತ್ರದುರ್ಗ ನಗರದ ವಿಪಿ ಬಡಾವಣೆ, ಬಾರ್‌ಲೈನ್‌ ಶಾಲೆ, ಐಯುಡಿಪಿ ಬಡಾವಣೆ, ಎಂಕೆ ಹಟ್ಟಿ, ಮಲ್ಲಾಪುರ ಸೇರಿ ವಿವಿಧೆಡೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ADVERTISEMENT

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಸಿರು ನೆಲ ಹಾಸಿನ ಮೇಲೆ ಹೂಗಳನ್ನು ಚೆಲ್ಲಿ ವಿದ್ಯಾರ್ಥಿನಿಯರನ್ನು ಬರ ಮಾಡಿಕೊಳ್ಳಲಾಯಿತು. ಶಾಲಾ ದ್ವಾರಕ್ಕೆ ಮಕ್ಕಳು ಪ್ರವೇಶಿಸುತ್ತಿದ್ದಂತೆ ಶಿಕ್ಷಕರು ಹೂವನ್ನು ನೀಡಿ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು.

ವಿದ್ಯಾರ್ಥಿಗಳು ಸಹ ಹೊಸ ಬಟ್ಟೆ ತೊಟ್ಟು ಶಾಲೆಗೆ ಬಂದಿದ್ದರು. ಗ್ರಾಮೀಣ ಭಾಗದಲ್ಲಿ ಅಲಂಕೃತ ಎತ್ತಿನ ಬಂಡಿಯಲ್ಲಿ ಮಕ್ಕಳನ್ನು ಕರೆ ತಂದ ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ದಾಖಲಾತಿ ಆಂದೋಲನ ನಡೆಸಿದರು.

ಚಿತ್ರದುರ್ಗ ತಾಲ್ಲೂಕಿನ ಜೆ.ಎನ್‌. ಕೋಟೆ, ಡಿಎಸ್‌ ಹಳ್ಳಿ, ಜೋಡಿಚಿಕ್ಕೇನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ, ಬಾಲೇನಹಳ್ಳಿ, ಜೆಸಿ ಹಳ್ಳಿ, ಗೊಲ್ಲರಹಟ್ಟಿ, ಪಲ್ಲವಗೆರೆ, ಗೊಲ್ಲನಕಟ್ಟೆ, ದಂಡಿನಕುರುಬರಹಟ್ಟಿ, ಮದಕರಿಪುರ, ಕುಂಚಿಗನಾಳ್‌, ಇಂಗಳದಾಳ್‌ ಸೇರಿ ವಿವಿಧ ಹಳ್ಳಿಗಳಲ್ಲಿ ಗ್ರಾಮಸ್ಥರೇ ಮಕ್ಕಳನ್ನು ಸ್ವಾಗತಿಸಿ, ಸಿಹಿ ವಿತರಿಸಿದರು.

ಶಿಕ್ಷಣ ಇಲಾಖೆ ಸೂಚನೆಯಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟಕ್ಕೆ ಸಿಹಿ ಅಡುಗೆ ಮಾಡಿಸಿದ್ದರು. ಅನುದಾನರಹಿತ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಕಂಡುಬರಲಿಲ್ಲ. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸಂಭ್ರಮವಿದ್ದರೂ ಮಕ್ಕಳ ಸಂಖ್ಯೆ ಮಾತ್ರ ವಿರಳವಾಗಿತ್ತು.

ಪ್ರಾರಂಭೋತ್ಸವದ ಕ್ಷಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಎಸ್‍ಡಿಎಂಸಿ ಸದಸ್ಯರು ಹಾಗೂ ಶಾಲೆಗಳ ಹಳೇ ವಿದ್ಯಾರ್ಥಿಗಳುಕೈ ಜೋಡಿಸಿದ್ದರು.

ಎತ್ತಿನ ಬಂಡಿ ಮೆರವಣಿಗೆ
ಚಿತ್ರದುರ್ಗ ತಾಲ್ಲೂಕಿನ ಗುತ್ತಿನಾಡು ಕುವೆಂಪು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾಡಳಿತ ಸಾಕ್ಷಿಯಾಯಿತು.

ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಲಾಯಿತು. ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಡಿಡಿಪಿಐ ಕೆ.ರವಿಶಂಕರ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನರಸಿಂಹರಾಜು ಹಾಗೂ ಗ್ರಾಮಸ್ಥರು ಪೂರ್ಣ ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿನಿಯರ ಜತೆ ಹೆಜ್ಜೆ ಹಾಕಿದರು.

ಬೊಂಬೆ ಹೇಳುತೈತೆ..
ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಶಾಲಾ ಪ್ರಾರಂಭೋತ್ಸವದಲ್ಲಿ ಅಕ್ಷರಶಃ ಶಿಕ್ಷಕಿಯಾಗಿದ್ದರು. ‘ನೀನು ಯಾವ ತರಗತಿ, ನಿನಗೆ ಯಾವ ವಿಷಯ ಇಷ್ಟ, ಮುಂದೆ ಏನಾಗುತ್ತಿಯಾ’ ಎಂದು ವಿದ್ಯಾರ್ಥಿಗಳ ಜತೆ ಮಾತನಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ..ಮತ್ತೆ ಹೇಳುತೈತೆ.. ನೀನೆ ರಾಜಕುಮಾರ’ ಎಂಬ ಗೀತೆಯನ್ನು ಹಾಡಿದರು. ಇದಕ್ಕೆ ವಿದ್ಯಾರ್ಥಿಗಳು ಧ್ವನಿಗೂಡಿಸಿದರು. ಒಂದನೇ ತರಗತಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ, ಅಕ್ಷರಾಭ್ಯಾಸ ಮಾಡಿಸಿದರು.

*
ಯಾವುದೇ ವೃತ್ತಿ ಆದರೂ ಅದರಲ್ಲಿ ಪ್ರಾಮಾಣಿಕವಾಗಿ ದುಡಿಯಬೇಕು. ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು.
–ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾಧಿಕಾರಿ

*
ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ವಿರುದ್ಧ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ 1098 ಸಹಾಯವಾಣಿ ಮಹತ್ವ ತಿಳಿಸಲಾಗಿದೆ.

–ಡಾ.ಕೆ.ನಂದಿನಿದೇವಿ, ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.