ಎಂ.ಕಾರ್ತಿಕ್
ಚಿತ್ರದುರ್ಗ ಎಂದ ತಕ್ಷಣ ನೆನಪಾಗುವ ಸ್ಥಳಗಳೆಂದರೆ ಕಲ್ಲಿನ ಕೋಟೆ, ರಾಜವೀರ ಮದಕರಿ ನಾಯಕ, ವೀರವನಿತೆ ಒನಕೆ ಓಬವ್ವ, ಚಂದ್ರವಳ್ಳಿ, ಮುರುಘಾ ವನ ಇನ್ನೂ ಹಲವಾರು ಐತಿಹಾಸಿಕ ಸ್ಥಳಗಳು. ಆದರೆ ಇವೆಲ್ಲವಕ್ಕೂ ಮಿಗಿಲಾದ ಒಂದು ಪ್ರಪಂಚವೇ ಇಲ್ಲಿನ ಪರಿಸರದಲ್ಲಿದೆ. ಅದೇ ನಮ್ಮ ವನ್ಯ ಜೀವಿ ಪ್ರಪಂಚ. ಅದರಲ್ಲೂ ಪಕ್ಷಿಗಳ ದೊಡ್ಡ ಸಾಮ್ರಾಜ್ಯವೇ ಅಡಗಿದೆ.
ಭೂಮಿಯ ಮೇಲಿನ ಅದ್ಭುತ ಸೃಷ್ಟಿಗಳಲ್ಲಿ ಪಕ್ಷಿ ಕೂಡ ಒಂದು. ಇಂತಹ ಪಕ್ಷಿಗಳಿಗೆ ಸ್ವರ್ಗವಾಗಿರುವ ಅನೇಕ ಸ್ಥಳಗಳು ಜಿಲ್ಲೆಯಲ್ಲಿವೆ. ಜೋಗಿಮಟ್ಟಿ ವನ್ಯಧಾಮ, ಆಡುಮಲ್ಲೇಶ್ವರ ಕಿರು ಮೃಗಾಲಯ, ತಿಮ್ಮಣ್ಣ ನಾಯಕ ಕೆರೆ, ದೊಡ್ಡಸಿದ್ದವ್ವನಹಳ್ಳಿ ಕೆರೆ, ಮಲ್ಲಾಪುರ ಕೆರೆ, ಗೋನೂರು ಕೆರೆ, ಈರಜ್ಜನಹಟ್ಟಿ, ಕುರುಮರಡಿಕೆರೆ, ಇಂಗಳದಾಳ್ ಗ್ರಾಮದ ಸುತ್ತಲಿನ ಪ್ರದೇಶ ಪಕ್ಷಿಗಳ ಅಚ್ಚುಮೆಚ್ಚಿನ ತಾಣ.
ಸುಮಾರು 200ಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳನ್ನು ಚಿತ್ರದುರ್ಗದಲ್ಲೇ ನೋಡಬಹುದಾಗಿದೆ. ಅದರಲ್ಲಿ ವಿಶೇಷ ಬಣ್ಣಗಳುಳ್ಳು ಪಕ್ಷಿಗಳು, ಅತಿ ಅಪರೂಪದ ಪಕ್ಷಿಗಳನ್ನೂ ಇಲ್ಲಿ ಕಾಣಬಹುದು. ಏಷಿಯಾ ಖಂಡದ ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ‘ಯೆಲ್ಲೋ ಥ್ರೋಟೆಡ್ ಬುಲ್‌ಬುಲ್’ ಚಿತ್ರದುರ್ಗದ ಸ್ಥಳೀಯ ಪಕ್ಷಿಯಾಗಿರುವುದು ಹೆಮ್ಮೆಯ ಸಂಗತಿ. ಸ್ಪಾಟ್ ಬಿಲ್ಡ್ ಡಕ್, ಗ್ಲಾಸಿ ಐಬಿಸ್, ಬ್ಲಾಕ್ ಹೆಡೆಡ್ ಐಬಿಸ್, ಪೈಂಟೆಡ್ ಸ್ಟಾರ್ಕ್, ರಿವರ್ ಟರ್ನ್, ಕಾಮನ್ ಗ್ರೀನ್ ಶ್ಯಾಂಕ್, ಆರೆಂಜ್ ಹೆಡೆಡ್ ಬುಲ್‌ಬುಲ್, ವರ್ನಲ್ ಹ್ಯಾಂಗಿಂಗ್ ಪ್ಯಾರೆಟ್ ಇನ್ನೂ ಹಲವು ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ.
ಸ್ಥಳೀಯ ಪಕ್ಷಿಗಳಲ್ಲಿ ಗೋಲ್ಡನ್ ಓರಿಯೋಲೆ, ಗ್ರೇಟ್ ಟಿಟ್, ಕಾಮನ್ ಟೈಲರ್ ಬರ್ಡ್, ವ್ಯಾಬ್ಲರ್, ಬಯಾ ವೀವರ್, ಬ್ಲಾಕ್ ಡ್ರೋಂಗೋ, ವೈಟ್ ಥ್ರೋಟೆಡ್ ಬುಲ್ ಬುಲ್, ಸ್ಪಾಟೆಡ್ ಡವ್, ಕಾಮನ್ ಪಿಜನ್, ಇಂಡಿಯನ್ ರಾಬಿನ್ ಇನ್ನೂ ನೂರಾರು ಪಕ್ಷಿಗಳಿಗೆ ಚಿತ್ರದುರ್ಗದ ನೆಲ ಆಸರೆಯಾಗಿದೆ. ಕರ್ನಾಟಕದ ಪ್ರಮುಖ ಪಕ್ಷಿಯಾದ ‘ಇಂಡಿಯನ್ ರೋರಲ್’ ಸಹ ಹಲವು ಬಾರಿ ಚಿತ್ರದುರ್ಗದಲ್ಲಿ ದರ್ಶನ ನೀಡಿದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಆಗುತ್ತಿರುವ ಕೆಲಸ ಪಕ್ಷಿ ಸಂಕುಲಕ್ಕೆ ಅಪಾಯ ತಂದೊಡ್ಡಿವೆ. ಹಲವು ಕೆರೆಗಳ ಹೂಳು ಎತ್ತುವ ನೆಪದಲ್ಲಿ ಪಕ್ಷಗಳ ಆವಾಸ ತಾಣವನ್ನು ಹಾಳು ಮಾಡಲಾಗಿದೆ. ಇದರಿಂದ ಅನೇಕ ಪಕ್ಷಗಳು ಇಲ್ಲಿಗೆ ವಲಸೆ ಬರುವುದನ್ನು ನಿಲ್ಲಿಸಿವೆ. ವಿಶೇಷವಾಗಿ ಎಲ್ಲರ ಅಚ್ಚುಮೆಚ್ಚಿನ ಗುಬ್ಬಚ್ಚಿ (ಹೌಸ್ ಸ್ಪಾರೋ) ಸಹ ಈ ಕಾಂಕ್ರೀಟ್ ಕಾಡಿನ ಮಧ್ಯೆ ಕಣ್ಮರೆಯಾಗುತ್ತಿರುವುದು ವಿಷಾದನೀಯ.
ಇಂತಹ ಅದ್ಭುತ ಪಕ್ಷಿಗಳ ಪ್ರಪಂಚವನ್ನು ಕಳೆದುಕೊಳ್ಳುತ್ತಿದ್ದೇವೆ. ಆರೋಗ್ಯಕರ ಅಭಿವೃದ್ಧಿಯಿಂದ ನಾಡು-ಕಾಡು ಎರಡು ಬೆಳೆಯುತ್ತದೆ. ಈ ಭೂಮಿಯ ಮೇಲೆ ಕೇವಲ ಮನುಷ್ಯನಿಗೆ ಮಾತ್ರ ಅಲ್ಲ - ಸಕಲ ಜೀವ ರಾಶಿಗಳಿಗೂ ಸಮಾನ ಹಕ್ಕು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.