ADVERTISEMENT

ಚಿತ್ರದುರ್ಗ | ‘ಮಾತು ಕೊಟ್ಟಂತೆ ಗೌರವಧನ ಹೆಚ್ಚಿಸಿ‘

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಘಟಕ ಆಗ್ರಹ – ಅಹೋರಾತ್ರಿ ಧರಣಿ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:15 IST
Last Updated 13 ಆಗಸ್ಟ್ 2025, 7:15 IST
ಚಿತ್ರದುರ್ಗ ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು
ಚಿತ್ರದುರ್ಗ ನಗರದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು   

ಚಿತ್ರದುರ್ಗ: 7 ತಿಂಗಳ ಹಿಂದೆ ಸರ್ಕಾರ ಮಾತು ಕೊಟ್ಟಂತೆ ಮಾಸಿಕ ಗೌರವ ಧನವನ್ನು ₹ 10 ಸಾವಿರಕ್ಕೆ ನಿಗದಿಗೊಳಿಸಬೇಕು. ಜತೆಗೆ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಘಟಕದಿಂದ ಮಂಗಳವಾರ ಅಹೋರಾತ್ರಿ ಧರಣಿ ಪ್ರಾರಂಭಿಸಲಾಯಿತು.

ನಗರದ ಹಳೇ ಮಾಧ್ಯಮಿಕ ಶಾಲೆ ಆವರಣದಿಂದ ಹೊರಟ ಮೆರವಣಿಗೆಗೆ ಎಐಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥ್‌ ಕೈದಾಳೆ ಚಾಲನೆ ನೀಡಿದರು. ಕೈಯಲ್ಲಿ ಭಿತ್ತಿಪತ್ರ, ಸಂಘದ ನಾಮಫಲಕ, ಕೆಂಪು ಬಾವುಟ ಹಿಡಿದು ಘೋಷಣೆ ಕೂಗುತ್ತಾ ಆಶಾ ಕಾರ್ಯಕರ್ತೆಯರು ಮಹಾತ್ಮಗಾಂಧಿ ವೃತ್ತದ ಮೂಲಕ ಓಬವ್ವ ವೃತ್ತದ ಧರಣಿ ಸ್ಥಳದಲ್ಲಿ ಸಮಾವೇಶಗೊಂಡರು.

‘ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣವಾಗಿದ್ದಾರೆ. ಸರ್ಕಾರದ ನಿರೀಕ್ಷೆಯಂತೆ ತಮ್ಮ ಸೇವೆಯಿಂದ ಕಟ್ಟಕಡೆಯ ಜನರನ್ನೂ ಆರೋಗ್ಯವಂತರನ್ನಾಗಿಡಲು ಹಗಲು–ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ, ಇವರು ತಮ್ಮ ಸೇವೆಗೆ ನಿಗದಿತ ಗೌರವಧನಕ್ಕೆ ಆಗ್ರಹಿಸಿ ಜನವರಿಯಲ್ಲಿ ಸತತ 4 ದಿನ ಬೆಂಗಳೂರಿನಲ್ಲಿ ಧರಣಿ ನಡೆಸಿದಾಗ ಸರ್ಕಾರ ಏಪ್ರಿಲ್‌ನಿಂದ ಜಾರಿಗೆ ಬರುವಂತೆ ಆಶಾಗಳಿಗೆ ಮಾಸಿಕ ಕನಿಷ್ಠ ₹ 10 ಸಾವಿರ ಗೌರವಧನ ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ಈವರೆಗೂ ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ಮಂಜುನಾಥ್‌ ಕೈದಾಳೆ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೆಲಸಕ್ಕೆ ಸೂಕ್ತ ಗೌರವಧನ ಕೇಳಿದರೆ ಅವೈಜ್ಞಾನಿಕವಾಗಿ ಅವರ ಮೇಲೆ ಕಾರ್ಯನಿರ್ವಹಣಾ ಮೌಲ್ಯಮಾಪನವನ್ನು ಹೇರಿದ್ದಾರೆ. ಜೊತೆಗೆ ಮೌಲ್ಯಮಾಪನವನ್ನಾಧರಿಸಿ ಕರ್ತವ್ಯದಿಂದ ತೆಗೆದು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ತಮ್ಮದು ಮಹಿಳಾ ಪರ, ದಮನಿತರ ಪರ ಸರ್ಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಯವರು ರಾಜ್ಯದ ಜನತೆಯ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಆಶಾಗಳ ನ್ಯಾಯ ಸಮ್ಮತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು’ ಎಂದು ಆಗ್ರಹಿಸಿದರು.

‘ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಬೇಕು. ಜೊತೆಗೆ ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರ ಆಶಾಗಳಿಗೆ ₹ 2000 ಗೌರವಧನ ಹೆಚ್ಚಿಸಬೇಕು. 2025 ಜೂನ್–ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ‌ಎಸ್‌. ಆಕಾಶ್‌ ಮನವಿ ಸ್ವೀಕರಿಸಿದರು. ಎಐಯುಟಿಯುಸಿ ಜಿಲ್ಲಾ ಘಟಕದ ಸಂಚಾಲಕ ರವಿಕುಮಾರ್, ಆಶಾ ಸಂಘದ ಜಿಲ್ಲಾ ಘಟದ ಅಧ್ಯಕ್ಷೆ ಗಿರಿಜಮ್ಮ, ಮುಖಂಡರಾದ ಮಂಜುಳಮ್ಮ, ಲಕ್ಷ್ಮಿಬಾಯಿ, ಗುರುಶಾಂತ, ನಾಗವೇಣಿ, ಪಾರ್ವತಮ್ಮ, ರಾಜಮ್ಮ, ಮಮತ, ಸವಿತ, ಪುಟ್ಟಮ್ಮ, ನೇತ್ರಾವತಿ, ವಸಂತಮ್ಮ, ವೀಣಾ, ಓಂಕಾರಮ್ಮ, ನಿಂಗಮ್ಮ, ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀ ಕಾಂತ್‌ ಇದ್ದರು.

ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ₹1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.

–ಮಂಜುನಾಥ್‌ ಕೈದಾಳೆ ಉಪಾಧ್ಯಕ್ಷ ಎಐಯುಟಿಯುಸಿ ರಾಜ್ಯ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.