ADVERTISEMENT

ಚಿತ್ರದುರ್ಗ | ಬದುಕಿನ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ: ಬಸವ ಕುಮಾರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:01 IST
Last Updated 6 ಸೆಪ್ಟೆಂಬರ್ 2025, 5:01 IST
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ದಾಂಪತ್ಯಕ್ಕೆ ಕಾಲಿಟ್ಟ ವಧು–ವರರು
ಚಿತ್ರದುರ್ಗದ ಮುರುಘಾ ಮಠದಲ್ಲಿ ಶುಕ್ರವಾರ ದಾಂಪತ್ಯಕ್ಕೆ ಕಾಲಿಟ್ಟ ವಧು–ವರರು   

ಚಿತ್ರದುರ್ಗ: ‘ಸರಳವಾದ ಬದುಕು ನಮ್ಮದಾಗಿದ್ದಾರೆ ನೆಮ್ಮದಿಯು ಹುಡುಕಿಕೊಂಡು ಬರುತ್ತದೆ. ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ಸುಂದರ ಬದುಕು ಕಟ್ಟಿಕೊಳ್ಳಿ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ಸಲಹೆ ನೀಡಿದರು.

ನಗರದ ಮುರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು.

‘ದುಡಿಯದೆ ಇರುವ ದುಡ್ಡು ನಮಗೆ ಶ್ರೀಮಂತಿಕೆ ಕೊಡಬಹುದು. ಆದರೆ ಅದರಿಂದ ನೆಮ್ಮದಿ ಸಿಗುವುದಿಲ್ಲ. ಚಿತ್ರದುರ್ಗದವರೇ ಆದ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪನವರು ತಮಗಾಗಿ ಏನೂ ಮಾಡಿಕೊಳ್ಳದೆ ಮಾದರಿಯಾಗಿದ್ದಾರೆ. ಇಂತಹ ನ್ಯಾಯಯುತ ಬದುಕು ನಮ್ಮದಾಗಬೇಕು’ ಎಂದು ತಿಳಿಸಿದರು.

‘ಬಸವಣ್ಣನವರು ಹೇಳುವಂತೆ ಪರ ಧನಕ್ಕೆ ಅಂಜಬೇಕು. ಹಣ, ಅಧಿಕಾರ, ಬಂಗಾರವನ್ನು ತಿನ್ನಲು ಸಾಧ್ಯವಿಲ್ಲ. ಹಸಿವಾದಾಗ ಅನ್ನವನ್ನೇ ಸೇವಿಸಬೇಕು. ನವ ವಧು-ವರರು ಸತ್ಯಶುದ್ಧ ಕಾಯಕ ಮಾಡುತ್ತ ಸರಳವಾದ ಜೀವನ ಮಾಡಬೇಕು’ ಎಂದರು.

‘ಶಿಕ್ಷಕರು ನಮ್ಮ ಜೀವನದ ಶಿಲ್ಪಿಗಳು. ಪ್ರತಿಯೊಬ್ಬರ ಬದುಕನ್ನು ಉದ್ಧರಿಸುವ ವೃತ್ತಿ ಪವಿತ್ರವಾದುದು’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

7 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು. ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ, ಚಿನ್ಮಯ ದೇವರು, ಟಿ.ಪಿ. ಜ್ಞಾನಮೂರ್ತಿ ಇದ್ದರು.

ಅತ್ತೆ ಮತ್ತು ಸೊಸೆ ತಾಯಿ-ಮಗಳಂತೆ ಇರಬೇಕು. ಜೀವನದಲ್ಲಿ ಸುಖವೇ ಬರಲಿ ದುಃಖವೇ ಘಟಿಸಲಿ ಸಮಾಧಾನವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಜೀವನ ಏರುಪೇರಾಗುತ್ತದೆ. ಒಬ್ಬರನ್ನೊಬ್ಬರು ಪರಸ್ಪರ ಅರಿತು ನಡೆಯಬೇಕು.
ಬಸವಪ್ರಭು ಸ್ವಾಮೀಜಿ ದಾವಣಗೆರೆ ವಿರಕ್ತಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.