ADVERTISEMENT

ಬಳ್ಳಾರಿಯತ್ತ ಹೊರಟ ಜೋಡೊ ಯಾತ್ರೆ: ಉತ್ಸಾಹದಲ್ಲಿ ಹೆಜ್ಜೆ ಹಾಕಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 2:09 IST
Last Updated 14 ಅಕ್ಟೋಬರ್ 2022, 2:09 IST
ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೊ ಪಾದಯಾತ್ರೆ ಆರಂಭವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತ್ ಜೋಡೊ ಪಾದಯಾತ್ರೆ ಆರಂಭವಾಗಿದೆ.   

ರಾಂಪುರ (ಚಿತ್ರದುರ್ಗ): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಚಿತ್ರದುರ್ಗ ಜಿಲ್ಲೆಯ ಗಡಿ ತಲುಪಿದ್ದು, ಬಳ್ಳಾರಿ ಜಿಲ್ಲೆಯತ್ತ ಹೊರಟಿದೆ. ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಿಂದ ಶುಕ್ರವಾರ ಕಾಲ್ನಡಿಗೆ ಆರಂಭವಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಜಿಲ್ಲೆಯಲ್ಲಿ ಐದನೇ ದಿನ ನಡೆಯುತ್ತಿದೆ. ನಿಗದಿಯಂತೆ ಬೆಳಿಗ್ಗೆ 6.30ಕ್ಕೆ ಆರಂಭವಾಗಬೇಕಿದ್ದ ಪಾದಯಾತ್ರೆ 45 ನಿಮಿಷ ವಿಳಂಬವಾಗಿ ಹೊರಟಿದೆ. ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯ ಕಣಕುಪ್ಪೆ ತಲುಪಲಿದ್ದು, ಅಲ್ಲಿಂದ ಆಂಧ್ರಪ್ರದೇಶದ ಗ್ರಾಮವೊಂದರ ಮೂಲಕ ಬೆಳಿಗ್ಗೆ10 ಗಂಟೆಗೆ ಬಳ್ಳಾರಿ ಜಿಲ್ಲೆ ಪ್ರವೇಶಿಸಲಿದೆ.

ಜೋಡೊ ಯಾತ್ರೆ ಸಾಗುವ ಮಾರ್ಗ ಸಿಂಗಾರಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಲ್ಲಿ ಹೆಜ್ಜೆ ಹಾಕಿದರು. ನಸುಕಿನಲ್ಲೇ ಸೇರಿದ ಅಪಾರ ಪ್ರಮಾಣದ ಜನರು ರಾಹುಲ್ ಪರ ಘೋಷಣೆ ಮೊಳಗಿಸಿದರು. ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಹಸಿರು ಶಾಲು ಹೊದ್ದು ಕಾಲ್ನಡಿಗೆಯಲ್ಲಿ ಸಾಗಿದರು.

ADVERTISEMENT

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ಹಲವು ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲಕ ಅ.10ರಂದು ಯಾತ್ರೆ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿತ್ತು. ಹಿರಿಯೂರು, ಚಳ್ಳಕೆರೆ ತಾಲ್ಲೂಕಿನ ಮೂಲಕ ಗುರುವಾರ ಮೊಳಕಾಲ್ಮುರು ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.