ADVERTISEMENT

ಚಿತ್ರದುರ್ಗ: ಗಡಿ ಬಳಿ 18 ಚೆಕ್‌ಪೋಸ್ಟ್‌ ನಿಗಾ

ತುರ್ತು, ಅಗತ್ಯ ವಸ್ತುಗಳ ಸಾಗಣೆಗಷ್ಟೇ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 14:44 IST
Last Updated 3 ಏಪ್ರಿಲ್ 2020, 14:44 IST

ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಹೊರ ಜಿಲ್ಲೆಯ ಜನರು ಹಾಗೂ ವಾಹನ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿರುವ ಜಿಲ್ಲಾಡಳಿತ, ಈ ಬಗ್ಗೆ ನಿಗಾ ಇಡಲು ಜಿಲ್ಲೆಯ ಗಡಿಯಲ್ಲಿ 18 ಚೆಕ್‌ಪೋಸ್ಟ್‌ಗಳನ್ನು ತೆರೆದಿದೆ.

ತುರ್ತು ಸೇವೆಯ ವಾಹನ, ಸಿಬ್ಬಂದಿ, ಅಗತ್ಯ ವಸ್ತು ಸಾಗಣೆಯ ವಾಹನಗಳಿಗೆ ಮಾತ್ರ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಉತ್ಪನ್ನ, ತರಕಾರಿ, ಹಣ್ಣು ಸೇರಿ ಇತರ ವಸ್ತುಗಳ ಸಾಗಣೆಗೆ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ರಸ್ತೆಯನ್ನು ಸಂಪರ್ಕಿಸುವ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಚೆಕ್‌ಪೋಸ್ಟ್‌ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಮೂರು ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಚೆಕ್‌ಪೋಸ್ಟ್‌ಗೆ ನಿಯೋಜನೆಗೊಂಡ ಪ್ರತಿಯೊಬ್ಬ ಸಿಬ್ಬಂದಿಯೂ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿ, ಪೊಲೀಸ್‌ ಕಾನ್‌ಸ್ಟೆಬಲ್‌ ಹಾಗೂ ಇತರ ಸಿಬ್ಬಂದಿಯನ್ನು ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿದೆ.

ADVERTISEMENT

ಚೆಕ್‌ಪೋಸ್ಟ್‌ಗೆ ಬರುವ ಪ್ರತಿ ವಾಹನವನ್ನು ತಪಾಸಣೆ ಮಾಡಲಾಗುತ್ತದೆ. ಅನಗತ್ಯ ವ್ಯಕ್ತಿಗಳ ಸಂಚಾರಕ್ಕೆ ಕಡಿವಾಣ ಹಾಕಲಾಗುತ್ತದೆ. ಬೇರೆ ಜಿಲ್ಲೆಯಿಂದ ಯಾವುದೇ ವ್ಯಕ್ತಿ ಜಿಲ್ಲೆ ಪ್ರವೇಶಿಸಿದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು. ಅಂತಹ ವ್ಯಕ್ತಿಯನ್ನು ಗೃಹ ಕ್ವಾರಂಟೈನ್‍ಗೆ ಸೂಚನೆ ನೀಡಲಾಗುತ್ತದೆ.

ಚಿತ್ರದುರ್ಗ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ– 13 ರ ಬೊಗಳೇರಹಟ್ಟಿ, ಹಾಗೂ ರಾಷ್ಟ್ರೀಯ ಹೆದ್ದಾರಿ–4 ರಲ್ಲಿ ಎಮ್ಮೆಹಟ್ಟಿ, ಹಿರಿಯೂರು ತಾಲ್ಲೂಕಿನ ಜೆ.ಜಿ.ಹಳ್ಳಿ ಹಾಗೂ ಪಿ.ಡಿ.ಕೋಟೆ, ಚಳ್ಳಕೆರೆ ತಾಲ್ಲೂಕಿನ ಟಿ.ಕೋಟೆ, ಹಿರೇಹಳ್ಳಿ, ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್, ಮಲ್ಲಸಮುದ್ರ, ದೊಡ್ಡಚೆಲ್ಲೂರು, ತೊರೆ ಕೋಲಮ್ಮನಹಳ್ಳಿ. ಹೊಳಲ್ಕೆರೆ ತಾಲ್ಲೂಕಿನ ಕಣಿವೆಹಳ್ಳಿ, ದುಮ್ಮಿ ಹಾಗೂ ಅಂದನೂರು. ಹೊಸದುರ್ಗ ತಾಲ್ಲೂಕಿನ ಗಡಿ ಅಹ್ಮದ್‍ ನಗರ ಹಾಗೂ ಹೆಗ್ಗೆರೆ, ಮೊಳಕಾಲ್ಮೂರು ತಾಲ್ಲೂಕಿನ ಎದ್ದಲ ಬೊಮ್ಮಯ್ಯನಹಟ್ಟಿ ಹಾಗೂ ತಮ್ಮೇನಹಳ್ಳಿಯಲ್ಲಿ ಚೆಕ್‌ಪೋಸ್ಟ್‌ ಕಾರ್ಯನಿರ್ವಹಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.