
ಚಿತ್ರದುರ್ಗ: ತಾಲ್ಲೂಕಿನ ಹಂಪಯ್ಯನಮಾಳಿಗೆ ಗ್ರಾಮದ ಬಳಿ ಕಸ ವಿಲೇವಾರಿ ಘಟಕ ನಿರ್ಮಾಣವಾಗಿದ್ದರೂ ನಗರದ ಹೃದಯಭಾಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿ ಕಸ ವಿಂಗಡಣೆ ನಡೆಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ರಸ್ತೆಗೆ ಸಮೀಪದಲ್ಲಿರುವ ಹಂಪಯ್ಯನಮಾಳಿಗೆ ಗ್ರಾಮದ ಬಳಿ 36 ಎಕರೆ ಪ್ರದೇಶದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ನಗರದ 35 ವಾರ್ಡ್‌ಗಳಲ್ಲಿ ಉತ್ಪತ್ತಿಯಾಗುವ ಹಸಿ–ಒಣ ಕಸವನ್ನು ಘಟಕದಲ್ಲೇ ವಿಂಗಡಣೆ ಹಾಗೂ ವಿಲೇವಾರಿ ಮಾಡಬೇಕು. ಆದರೆ, ಕಸ ವಿಂಗಡಣೆ ಹೆಸರಿನಲ್ಲಿ ನಗರದ ಮಧ್ಯಭಾಗದಲ್ಲಿ ಕಸ ಸುರಿಯುತ್ತಿರುವುದು ಏಕೆ ಎಂಬ ಪ್ರಶ್ನೆ ನಿರ್ಮಾಣವಾಗಿದೆ.
ವಿವಿಧ ಬಡಾವಣೆಗಳಲ್ಲಿ ಕಸ ಸಂಗ್ರಹಿಸುವ ವಾಹನಗಳು ನೇರವಾಗಿ ಕಸ ವಿಲೇವಾರಿ ಘಟಕಕ್ಕೆ ತೆರಳುವುದಿಲ್ಲ. ಕಸವನ್ನು ಎಸ್.ಪಿ. ಕಚೇರಿ ಪಕ್ಕದ ಜಾಗದಲ್ಲಿ ಸುರಿಯಲಾಗುತ್ತದೆ. ಅಲ್ಲಿ ಕಸ ವಿಂಗಡಣೆ ಮಾಡಿ ದೊಡ್ಡ ಟ್ರಕ್‌ಗಳಿಗೆ ತುಂಬಲಾಗುತ್ತದೆ. ನಂತರ ಟ್ರಕ್‌ಗಳು ಹಂಪಯ್ಯನಮಾಳಿಗೆ ಘಟಕಕ್ಕೆ ಸಾಗಿಸುತ್ತವೆ. ನಗರದ ನಡುವಿನ ಜಾಗದಲ್ಲಿ ಕಸ ಸುರಿಯುತ್ತಿರುವ ಕಾರಣ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದೆ. ಕಸಕ್ಕೆ ಬೆಂಕಿ ಹೊತ್ತಿಕೊಂಡು ಎಲ್ಲೆಡೆ ಹೊಗೆ ಆವರಿಸುವ ವಾತಾವರಣ ಸಾಮಾನ್ಯವಾಗಿದೆ ಎಂಬುದು ಜನರ ದೂರು.
ಎಸ್.ಪಿ. ಕಚೇರಿ ಸಮೀಪದಲ್ಲೇ ಇರುವ ಈ ಜಾಗದ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣವಿದೆ. ವಕ್ಫ್ ಮಂಡಳಿ ಹಾಗೂ ಸರ್ಕಾರದ ನಡುವೆ ದಾವೆ ನಡೆಯುತ್ತಿದೆ. ಈ ಜಾಗದ ಸಮೀಪದಲ್ಲೇ ಲೋಕಾಯುಕ್ತ ಕಚೇರಿ, ಉಪ ವಿಭಾಗಾಧಿಕಾರಿ ನಿವಾಸ, ಹೆಚ್ಚುವರಿ ಜಿಲ್ಲಾಧಿಕಾರಿ ನಿವಾಸ ಸೇರಿ ಸರ್ಕಾರಿ ಅಧಿಕಾರಿಗಳ, ನೌಕರರ ವಸತಿಗೃಹಗಳಿವೆ. ಪ್ರತಿನಿತ್ಯ ಇಲ್ಲಿ ಕಸ ಸುರಿಯುತ್ತಿರುವ ಕಾರಣ ಅವರಿಗೆ ದುರ್ವಾಸನೆಯ ಕಾಟವೂ ಹೆಚ್ಚಿದೆ.
ಕಸ ಸುರಿಯುವ ಮೈದಾನಕ್ಕೆ ಹೊಂದಿಕೊಂಡಿರುವ ಸಿಮೆಂಟ್ ರಸ್ತೆ ಸುಂದರವಾಗಿದ್ದು, ಎರಡೂ ಕಡೆ ಅಲಂಕಾರಿಕ ವಿದ್ಯುತ್ ದೀಪ ಅಳವಡಿಸಲಾಗಿದೆ. ನೋಡಲು ಸುಂದರವಾಗಿ ಕಾಣುತ್ತದೆ, ಸಮೀಪದಲ್ಲೇ ಉದ್ಯಾನವೂ ಇದೆ. ಆದರೆ ದುರ್ವಾಸನೆಯ ಕಾರಣಕ್ಕೆ ಈ ರಸ್ತೆಯಲ್ಲಿ ಜನರೇ ಓಡಾಡುವುದಿಲ್ಲ. ಬೀದಿನಾಯಿಗಳ ಭಯವೂ ಕಾಡುತ್ತಿದೆ.
ಕಸ ವಿಂಗಡಣೆ, ವಿಲೇವಾರಿಗೆ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಸಂಗ್ರಹ ಘಟಕದಲ್ಲಿ ಕಸ ವಿಲೇವಾರಿಯ ಸಿಬ್ಬಂದಿಯೂ ಇದ್ದಾರೆ. ಆದರೆ, ‘ನಗರದೊಳಗೆ ಕಸ ಸುರಿಯುತ್ತಿರುವುದು ಏಕೆ?’ ಎಂಬ ಪ್ರಶ್ನೆಗೆ ಉತ್ತರ ದೊರೆಯದಾಗಿದೆ.
‘ಕಸದ ಜೊತೆಗೆ ಬರುವ ಗುಜರಿ ವಸ್ತುಗಳ ವಿಲೇವಾರಿ ಗುತ್ತಿಗೆ ನೀಡಲಾಗಿದೆ. ಅವರು ವಸ್ತುಗಳನ್ನು ವಿಲೇವಾರಿ ಘಟಕದಲ್ಲೇ ಆರಿಸಿಕೊಳ್ಳಬೇಕು. ಆದರೆ, ಅವರು ನಗರದೊಳಗಿನ ಮೈದಾನದಲ್ಲೇ ಆರಿಸಿಕೊಳ್ಳುತ್ತಾರೆ. ನಗರಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಸ ಸಂಗ್ರಹಿಸುವ ವಾಹನದ ಚಾಲಕರೊಬ್ಬರು ತಿಳಿಸಿದರು.
ವಿವಿಧ ಬಡಾವಣೆಗಳಿಂದ ಕಸ ತುಂಬಿಕೊಂಡು ಬರುವ ವಾಹನಗಳು ಎಸ್.ಪಿ. ಕಚೇರಿ ಪಕ್ಕದ ಮೈದಾನದಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತವೆ. 3–4 ಗಂಟೆ ಕಾದು ಕಸ ಸುರಿಯಲಾಗುತ್ತದೆ. ಇಲ್ಲಿ ಕಾಯುವುದರಿಂದ ನಗರದ ಹಲವು ಬಡಾವಣೆಗಳ ಕಸ ಸಂಗ್ರಹ ಕಾರ್ಯಕ್ಕೂ ತೊಡಕಾಗಿದೆ. ಈ ವ್ಯವಸ್ಥೆಯನ್ನು ಅಧಿಕಾರಿಗಳು ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಕಸ ಸಂಗ್ರಹಣೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಮೈದಾನದಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗುವುದು. ನೇರವಾಗಿ ವಿಲೇವಾರಿ ಘಟಕಕ್ಕೆ ಕಳುಹಿಸಲು ಕ್ರಮ ವಹಿಸಲಾಗುವುದು..– ಎಸ್.ಲಕ್ಷ್ಮಿ, ಪೌರಾಯುಕ್ತರು ನಗರಸಭೆ
ವಾಯುವಿಹಾರಕ್ಕೆ ಈ ಸ್ಥಳ ಉತ್ತಮವಾಗಿದೆ. ಆದರೆ ತ್ಯಾಜ್ಯದ ದುರ್ವಾಸನೆ ಸೊಳ್ಳೆ ನೊಣಗಳ ಕಾಟದಿಂದ ನಾಗರಿಕರು ವಾಯುವಿಹಾರ ಮಾಡಲು ಸಾಧ್ಯವಾಗುತ್ತಿಲ್ಲ.– ಎನ್. ಮಹಾಂತೇಶ್, ಸ್ಥಳೀಯ ನಿವಾಸಿ
ಕೆಟ್ಟು ನಿಂತ ಕಸ ಸಂಗ್ರಹ ವಾಹನಗಳು
ನಗರದ ವಿವಿಧ ಬಡಾವಣೆಗಳಲ್ಲಿ ಕಸ ಸಂಗ್ರಹಿಸುವ ಹಲವು ವಾಹನಗಳು ಕೆಟ್ಟು ನಿಂತು ತಿಂಗಳುಗಳೇ ಕಳೆದಿವೆ. ಹಲವು ಬಡಾವಣೆಗಳಲ್ಲಿ ಕಸ ಸಂಗ್ರಹಣೆ ನಿಂತು ಹೋಗಿದ್ದು ಜನರು ಕಸವನ್ನು ರಸ್ತೆಗಳಲ್ಲಿ ಬಿಸಾಡುತ್ತಿದ್ದಾರೆ. ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಕುರಿತು ನಗರಸಭೆ ಅಧಿಕಾರಿಗಳಿಗೆ ದೂರು ಕೊಟ್ಟರೂ ವಾಹನ ರಿಪೇರಿ ಮಾಡಿಸಿಲ್ಲ ಕಸ ಸಂಗ್ರಹ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ಐದಾರು ವಾಹನಗಳು ಕೆಟ್ಟು ನಿಂತಿದ್ದು ಇಲ್ಲಿಯವರೆಗೂ ರಿಪೇರಿಯಾಗಿಲ್ಲ. ಆದರೆ ಅಧಿಕಾರಿಗಳು ವಾಹನಗಳ ಪೆಟ್ರೋಲ್ ಡೀಸೆಲ್ ಹಣವನ್ನು ಪಡೆಯುತ್ತಿದ್ದಾರೆ’ ಎಂದು ನಗರಸಭೆ ಸಿಬ್ಬಂದಿಯೊಬ್ಬರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.