ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಚಿತ್ರದುರ್ಗ: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಅಭಿವೃದ್ಧಿಗೆ ಸುಪ್ರೀಂ ಕೋರ್ಟ್ ನೀಡಿರುವ ಮೀಸಲಾತಿ ಉಪ ವರ್ಗೀಕರಣ ತೀರ್ಪು ದಿಕ್ಸೂಚಿಯಾಗಲಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸುಪ್ರೀಂ ಕೋರ್ಟ್ ಸೂಚಿಸಿರುವ ಮಾರ್ಗವನ್ನು ರಾಜ್ಯ ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಬೇಕಿದೆ’ ಎಂದು ಭೋವಿ ಗುರುಪೀಠದ ಪೀಠಾಧಿಪತಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
‘ಎಸ್‌ಸಿ, ಎಸ್‌ಟಿ ವರ್ಗದಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟ ನೀಡಲು ಅನುಮತಿ ನೀಡಲಾಗಿದೆ. ಪಂಜಾಬ್‌ನ ಪರಿಶಿಷ್ಟ ಜಾತಿಗಳು ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆಯಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 23 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ದೀರ್ಘಕಾಲ ವಿಚಾರಣೆ ನಡೆಸಿದ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ’ ಎಂದಿದ್ದಾರೆ.
‘ಈ ತೀರ್ಪಿನಿಂದ ಎಸ್‌ಸಿ, ಎಸ್‌ಟಿ ಸಮುದಾಯಗಳಲ್ಲಿ ತಾರತಮ್ಯ ಅನುಭವಿಸುತ್ತಿರುವ ಸದಸ್ಯರಿಗೆ ಮೀಸಲಾತಿಯಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಉಪ ವರ್ಗೀಕರಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದೊಳಗಿನ ತಾರತಮ್ಯ ಮಟ್ಟವನ್ನು ಆಧರಿಸಿ ಕಡುಬಡ ಕುಟುಂಬಗಳ ಅಭಿವೃದ್ಧಿಗೆ ಉಪ ವರ್ಗೀಕರಣದ ಮೂಲಕ ಅವಕಾಶಗಳನ್ನು ರಾಜ್ಯ ಸರ್ಕಾರ ನೀಡುವ ಮೂಲಕ ಮೀಸಲಾತಿಯ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.