ADVERTISEMENT

ಚಳ್ಳಕೆರೆ | ಎತ್ತಪ್ಪನ ಸಮಾಧಿಗೆ ಅನ್ನದಬಾನ ಅರ್ಪಣೆ

ಕಾಡುಗೊಲ್ಲರ ಕುಲಮೂಲ ದೈವದ ವಿಶಿಷ್ಟ ಆಚರಣೆ, ಸಂಭ್ರಮದ ವಾತಾವರಣ

ಶಿವಗಂಗಾ ಚಿತ್ತಯ್ಯ
Published 16 ಜುಲೈ 2024, 7:41 IST
Last Updated 16 ಜುಲೈ 2024, 7:41 IST
ಚಳ್ಳಕೆರೆ ತಾಲ್ಲೂಕಿನ ತಳಕು ಬಳಿ ಗುಡ್ಡದಲ್ಲಿ ಇರುವ ಎತ್ತಪ್ಪ ದೇವರ ಸಮಾಧಿ ಗೆ ಬಂಜಗೆರೆ ಈರಣ್ಣ, ಬತವಿನ ಪೆಟ್ಟಿಗೆ ದೇವರನ್ನು ಜನಪದ ವಾದ್ಯದ ಮೂಲಕ ಕೊಂಡೊಯ್ಯುತ್ತಿರುವ ಕಾಡುಗೊಲ್ಲರು
ಚಿತ್ರಗಳು: ನಿಸರ್ಗ ಗೋವಿಂದರಾಜು
ಚಳ್ಳಕೆರೆ ತಾಲ್ಲೂಕಿನ ತಳಕು ಬಳಿ ಗುಡ್ಡದಲ್ಲಿ ಇರುವ ಎತ್ತಪ್ಪ ದೇವರ ಸಮಾಧಿ ಗೆ ಬಂಜಗೆರೆ ಈರಣ್ಣ, ಬತವಿನ ಪೆಟ್ಟಿಗೆ ದೇವರನ್ನು ಜನಪದ ವಾದ್ಯದ ಮೂಲಕ ಕೊಂಡೊಯ್ಯುತ್ತಿರುವ ಕಾಡುಗೊಲ್ಲರು ಚಿತ್ರಗಳು: ನಿಸರ್ಗ ಗೋವಿಂದರಾಜು   

ಚಳ್ಳಕೆರೆ: ಕಾಡುಗೊಲ್ಲರ ಕಾಶಿ, ತಾಲ್ಲೂಕಿನ ತಳಕು ಗ್ರಾಮದ ಬಳಿ ಎತ್ತಪ್ಪನ ಸಮಾಧಿ ಇರುವ ಗುಡ್ಡವೇ ಎತ್ತಪ್ಪ ದೈವದ ಗುಡ್ಡ. ಮಳೆ ಬಂದು ಅಡವಿ ತುಂಬ ಹುಲ್ಲು ಬಿದ್ದು ಸಮೃದ್ಧಿಯಾದಾಗ ಎತ್ತಪ್ಪನಿಗೆ ಕೃತಜ್ಞತೆ ಸೂಚಿಸಲು ಗುಡ್ಡಕ್ಕೆ ಹೋಗಿ ಬರುವ ಸಂಪ್ರದಾಯ ಕಾಡುಗೊಲ್ಲರಲ್ಲಿ ಇದೆ. ಈಗ ಜಿಟಿಜಿಟಿ ಮಳೆಯ ನಡುವೆ, ಚಳಿಯ ವಾತಾವರಣದ ನಡುವೆ ಎತ್ತಪ್ಪ ದೈವಕ್ಕೆ ಪೂಜೆ ಸಲ್ಲಿಸುವ ಸಂಭ್ರಮ.

ಈಗಾಗಿ ತಾಲ್ಲೂಕಿನ ಬಂಜಗೆರೆ ಮತ್ತು ಚಳ್ಳಕೆರೆ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ನೂರಾರು ಭಕ್ತರು ಸೋಮವಾರ ಹಾಲುಗ್ಗಿ, ಹಾಲು-ಮೀಸಲು ಅನ್ನದಬಾನದ ಜತೆಗೆ ಸಾಂಸ್ಕತಿಕ ವೀರರಾದ ಎತ್ತಪ್ಪ, ರಂಗನಾಥ ಮತ್ತು ಈರಣ್ಣ, ಬತವಿನ ದೇವರ ಪೆಟ್ಟಿಗೆಯನ್ನು ಹೊತ್ತು ಗುಡ್ಡಕ್ಕೆ ಬರಿಗಾಲಲ್ಲಿ ಹೋಗಿ ಎತ್ತಪ್ಪನ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಆಚರಣೆ ಪ್ರತಿವರ್ಷ ಆಷಾಡ ಮಾಸದ ಕಾರಹುಣ್ಣಿಮೆಯ ಸೋಮವಾರ ಪ್ರಾರಂಭಿಸಿ ಶ್ರಾವಣ ಮಾಸದವರೆಗೂ ತಾಲ್ಲೂಕಿನಾದ್ಯಂತ ಕಾಡುಗೊಲ್ಲರ ಹಲವು ಹಟ್ಟಿಯಲ್ಲಿ ವಿಶಿಷ್ಟವಾಗಿ ಜರುಗುತ್ತದೆ. ಗುಡ್ಡಕ್ಕೆ ಹೋಗುವ ಒಂದು ದಿನ ಮುಂಚಿತವಾಗಿ ಗೊಲ್ಲರಹಟ್ಟಿಯ ಪ್ರತಿ ಮನೆಯಲ್ಲಿ ನೆಲಕಾರಣೆ ಮಾಡಿ, ಪರವು(ಹಬ್ಬ)ಕ್ಕಾಗಿ ಅಕ್ಕಿ, ಬೆಲ್ಲದ ಉಗ್ಗಿ ಎಡೆ ನೈವೇಧ್ಯ ಅರ್ಪಿಸಿದ ನಂತರ ಎತ್ತಪ್ಪ ಸಮಾಧಿಗೆ ಹಾಲಿನ ಅಭಿಷೇಕ ಮಾಡುವ ಪದ್ಧತಿ ಇದೆ.

ADVERTISEMENT

ಪೆಟ್ಟಿಗೆ ದೇವರ ಜತೆಗೆ ಘಂಟೆ, ದೂಪದಾರತಿ, ಬವನಾಶಿ, ಬಿದಿರ ಬೆತ್ತ, ಗಣೆ ತೆಗೆದುಕೊಂಡು ಹೋಗುತ್ತಾರೆ. ಗುಡ್ಡದ ಮೇಲೆ ಜುಂಜಪ್ಪನ ಕಲ್ಲಿಗೆ ಮತ್ತು ದೊಣೆಪೂಜೆ ಮಾಡುತ್ತಾರೆ.

ಗುಡ್ಡದಿಂದ ಆಯಾ ಗ್ರಾಮಕ್ಕೆ ಮರಳಿ ಬಂದು ಗುಡ್ಡದ ಕಡೆಗೆ ಮುಖ ಮಾಡಿ ಜಾಡಿ ಹಾಸಿ ಕಾಯಿ ಒಡೆದು ಪೂಜೆ ಮಾಡುವ ಮೂಲಕ ಪೂಜಾರಿ, ದಾಸಯ್ಯಗಳು ಒಂದತ್ತು ಬಿಡುತ್ತಾರೆ. ಗುಡ್ಡದಿಂದ ತಂದ ತೀರ್ಥ, ಬಾದೆಹುಲ್ಲು ಮತ್ತು ಬ್ಯಾಟೆಸೊಪ್ಪನ್ನು ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಹಾಲುಗ್ಗಿಯನ್ನು ದೇವರ ಪ್ರಸಾದವೆಂದು ಸಾಮೂಹಿಕವಾಗಿ ಸ್ವೀಕರಿಸುತ್ತಾರೆ.  ಎತ್ತಪ್ಪನ ಗುಡ್ಡದಿಂದ ತೀರ್ಥ ತಂದು ಚಿಮಕಿಸುವವರೆಗೂ ಮನೆಯಲ್ಲಿ ಯಾರೂ ಊಟ ಮಾಡುವಂತಿಲ್ಲ.

ಕಟ್ಟುನಿಟ್ಟಿನ ವ್ರತ: ಮೀಸಲು ಹಾಲು, ಬೆಲ್ಲ ಹಾಗೂ ಅಕ್ಕಿಯಿಂದ ಹಾಲುಗ್ಗಿ ನೇವೈದ್ಯ ತಯಾರು ಮಾಡಲು ಕಾಡುಗೊಲ್ಲರು ಕಟ್ಟು ನಿಟ್ಟಿನ ವ್ರತ ಆಚರಿಸುತ್ತಾರೆ.ಕುರಿಹಟ್ಟಿ ಉದಿಯಲ್ಲಿ ಕೈ ಕಾಲು, ಬಾಯಿ ತೊಳೆದು, ಮೂರು ಕಲ್ಲುಗುಂಡು ಹೂಡಿ, ಒಲೆಗೆ ನೀರು ಚಿಮಕಿಸಿ ಶುದ್ಧಿಮಾಡಿ, ಹೊಸ ಮಡಿಕೆ ತಂದು, ಬೆಳಗಿನ ಜಾವ ಕರೆದ ಕುರಿ ಹಾಲುನ್ನು ಆ ಮಡಿಕೆಯಲ್ಲಿ ಹಾಕಿ ಕಾಯಿಸಿ, ಹಾಲು ಚೆನ್ನಾಗಿ ಕಾದ ನಂತರ ಅಕ್ಕಿ, ಬೆಲ್ಲ ಹಾಕಿ ಹಾಲಡಿಗೆ ಮಾಡುತ್ತಾರೆ.
ಈ ಅಡಿಗೆಯನ್ನು ತೆಗೆದುಕೊಂಡು ಹೋಗಿ ದೇವರಿಗೆ ಅರ್ಪಿಸುವ ಸಂಪ್ರಾಯ ಈಗಲೂ ಕಾಡುಗೊಲ್ಲರಲ್ಲಿ ಇದೆ.

ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಬಳಿ ಗುಡ್ಡ ಮೇಲಿರುವ ಎತ್ತಪ್ಪನ ಸಮಾಧಿಗೆ ಹಾಲು-ಮೀಸಲು ಉಗ್ಗಿ ಬಾನದ ಹಂಡೇವು ಹೊತ್ತು ಬರಿಗಾಲಲ್ಲಿ ಹೋಗುತ್ತಿರುವ ಚ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಬಳಿ ಇರುವ ಕಾಡುಗೊಲ್ಲರ ಕುಲು ಮೂಲದ ಎತ್ತಪ್ಪ ದೇವರ ಸಮಾಧಿ.
ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಬಳಿ ಗುಡ್ಡ ಮೇಲಿರುವ ಎತ್ತಪ್ಪನ ಸಮಾಧಿಗೆ ಹಾಲು-ಮೀಸಲು ಉಗ್ಗಿ ಬಾನದ ಹಂಡೇವು ಹೊತ್ತು ಬರಿಗಾಲಲ್ಲಿ ಹೋಗುತ್ತಿರುವ ಚಳ್ಳಕೆರೆ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಭಕ್ತರು

ಹಾಲುಗ್ಗಿ ನೇವೈದ್ಯ ತಯಾರಿಸಲು ಕಟ್ಟಿನಿಟ್ಟಿನ ವ್ರತ ಗುಡ್ಡದಿಂದ ತಂದ ತೀರ್ಥ, ಬಾದೆಹುಲ್ಲು ಪೂಜೆ ಬರಿಗಾಲಿನಲ್ಲಿ ತೆರಳಿ ವಿಶೇಷ ಪೂಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.