ADVERTISEMENT

ಚಿತ್ರದುರ್ಗ | ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕೆ ಒತ್ತಾಯ

ರೈತ ಸಂಘ–ಹಸಿರು ಸೇನೆ ಸದಸ್ಯರ ಪ್ರತಿಭಟನೆ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 5:45 IST
Last Updated 11 ಅಕ್ಟೋಬರ್ 2025, 5:45 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘ– ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಮಾತನಾಡಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘ– ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಮಾತನಾಡಿದರು   

ಚಿತ್ರದುರ್ಗ: ‘ಕೋಟೆ ಜಿಲ್ಲೆ ಬಹಳ ವಿಚಿತ್ರವಾದ ಪರಿಸರ ಹೊಂದಿದ್ದು, ಕೆಲವು ಕಡೆ ಅತಿವೃಷ್ಟಿಯಿಂದ ಬೆಳೆ ಹಾನಿಯಾದರೆ ಇನ್ನೂ ಕೆಲವು ಕಡೆ ಅನಾವೃಷ್ಟಿಯಿಂದ ರೈತರಿಗೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಜಿಲ್ಲೆಯ ರೈತರಿಗೆ ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ಘೋಷಣೆ ಮಾಡಬೇಕು’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಒತ್ತಾಯಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘದ ಸದಸ್ಯರು ಶುಕ್ರವಾರ ಪ್ರವಾಸಿಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಬಸವರಾಜಪ್ಪ, ‘ಈರುಳ್ಳಿ ಬೆಳೆ ಅತಿ ಮಳೆಯಿಂದ ನಾಶವಾಗಿದೆ. ಇನ್ನೊಂದು ಕಡೆ ಬೆಳೆಗೆ ಬೆಲೆ ಇಲ್ಲದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಬಂದರೆ ಬೆಲೆ ಇರಲ್ಲ, ಬೆಲೆ ಇದ್ದರೆ ಬೆಳೆ ಇರಲ್ಲ. ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಬೇಕು. ಉಳಿದ ತಾಲ್ಲೂಕುಗಳಿಗೆ ಅತೀವೃಷ್ಟಿಯ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್‌ ಖುಷ್ಕಿ ಭೂಮಿಗೆ ₹ 6,800, ನೀರಾವರಿ ಜಮೀನಿಗೆ ₹ 17, 000, ತೋಟಗಾರಿಕೆ ಬೆಳೆಗಳಿಗೆ ₹ 21,000 ಪರಿಹಾಋ ನಿಗದಿ ಮಾಡಿದೆ. ಆದರೆ, ಎಲ್ಲ ಬೆಳೆಗಳಿಗೂ ಪ್ರತಿ ಹೆಕ್ಟೇರ್‌ಗೆ ₹ 75,000 ನೀಡಬೇಕು ಎಂಬುದು ನಮ್ಮ ಆಗ್ರಹ. ರೈತರು ನಡೆಸಿದ ಪ್ರತಿಭಟನೆಯ ಫಲವಾಗಿ ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ರದ್ದುಪಡಿಸಿತು. ಆದರೆ, ರಾಜ್ಯ ಸರ್ಕಾರ ಇನ್ನೂ ಈ ಕಾಯ್ದೆಗಳನ್ನು ರದ್ದುಪಡಿಸಿಲ್ಲ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದೇವೆ’ ಎಂದರು.

ADVERTISEMENT

‘ವಿದ್ಯುಚ್ಛಕ್ತಿಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಕ್ರಮವನ್ನು ಕೂಡಲೇ ಕೈಬಿಡಬೇಕು. ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ಕಾಲ ತ್ರಿ–ಪೇಸ್‌ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ ಸರ್ಕಾರ ಈಗ ಮಾತು ತಪ್ಪಿದೆ. 7 ಗಂಟೆಗಳ ಕಾಲ ವಿದ್ಯುಚ್ಛಕ್ತಿಯನ್ನು ಹಗಲು ಹೊತ್ತಲ್ಲೇ ನೀಡಬೇಕು’ ಎಂದು ಆಗ್ರಹಿಸಿದರು.

‘ರೈತರು ಹೊಸದಾಗಿ ಬೋರ್‌ವೆಲ್‌ ಕೊರೆಯಿಸಿದರೆ ಅದಕ್ಕೆ ಬೇಕಾದ ಕಂಬ, ಲೈನ್, ಟಿ.ಸಿಯನ್ನು ರೈತರೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿಸಿಕೊಳ್ಳಬೇಕಾಗಿದೆ. ಇದು ರೈತರ ಪಾಲಿಗೆ ಮರಣಶಾಸನವಾಗಿದೆ. ರೈತರಿಗೆ ಉಚಿತವಾಗಿ ಕಂಬ, ಲೈನ್‌ ನೀಡಬೇಕು ಎಂದು ಒತ್ತಾಯಿಸಿ ನ. 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜನ್ ಮಾತನಾಡಿ, ‘ರೈತರು ಬರಗಾಲಕ್ಕೆ ತುತ್ತಾಗಿದ್ದು, ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಕಂಗಾಲಾಗಿದ್ದಾರೆ. ಶೇಂಗಾ, ರಾಗಿ, ಮೆಕ್ಕೆಜೋಳ, ಈರುಳ್ಳಿ, ಸಾವೆ, ಸಜ್ಜೆ, ನವಣೆ ಮುಂತಾದ ಬೆಳೆಗಳು ಬರಗಾಲದ ಸುಳಿಗೆ ತುತ್ತಾಗಿವೆ. ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳನ್ನು ಅರ್ಥೈಸದೇ ಕಣ್ಣು ಮುಚ್ಚಿ ಕುಳಿತಿದೆ. ಜಿಲ್ಲೆಯಲ್ಲಿ ಬರಗಾಲ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಹೇಶ್, ಹೊನ್ನೂರು ಮುನಿಯಪ್ಪ, ಸಂಘಟನಾ ಕಾರ್ಯದರ್ಶಿ ಹಿಟ್ಟೂರು ರಾಜು, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ಮುಖಂಡರಾದ ಮಾರುತಿ, ವಿರೂಪಾಕ್ಷಪ್ಪ, ಕಬ್ಬಿಗೆರೆ ಕಾಂತರಾಜ್ ಬಾಗೇನಾಳ್ ಕೊಟ್ರಬಸಪ್ಪ, ಮರಳಸಿದ್ದಯ್ಯ, ನಿಂಗಪ್ಪ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಸಿದ್ದಪ್ಪ, ಜಿ.ಕೆ.ನಾಗರಾಜ್ ಇದ್ದರು.

7 ಗಂಟೆ ಹಗಲಿನಲ್ಲಿ ವಿದ್ಯುತ್‌ ನೀಡಲು ಒತ್ತಾಯ ಕಾಯ್ದೆಗಳನ್ನು ರದ್ದುಗೊಳಿಸದ ರಾಜ್ಯ ಸರ್ಕಾರ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.