ADVERTISEMENT

ಚಿತ್ರದುರ್ಗ | ಹತ್ತಾರು ಬಣಗಳಾಗಿ ಚೂರಾದ ರೈತಸಂಘ

ಶಕ್ತಿ ಕಳೆದುಕೊಳ್ಳುತ್ತಿದೆ ರೈತ ಹೋರಾಟ, ಜಾತ್ಯತೀತ ಸಂಘಟನೆಯಲ್ಲಿ ಜಾತೀಯತೆ, ಮಠಗಳ ನಿಯಂತ್ರಣ

ಎಂ.ಎನ್.ಯೋಗೇಶ್‌
Published 13 ಆಗಸ್ಟ್ 2025, 7:24 IST
Last Updated 13 ಆಗಸ್ಟ್ 2025, 7:24 IST
ಜಿಲ್ಲಾಧಿಕಾರಿ ಕಚೇರಿ ಎದುರು 2021ರಲ್ಲಿ ನಡೆದ ರೈತ ಹೋರಾಟ (ಸಂಗ್ರಹ ಚಿತ್ರ)
ಜಿಲ್ಲಾಧಿಕಾರಿ ಕಚೇರಿ ಎದುರು 2021ರಲ್ಲಿ ನಡೆದ ರೈತ ಹೋರಾಟ (ಸಂಗ್ರಹ ಚಿತ್ರ)   

ಚಿತ್ರದುರ್ಗ: ರಾಜ್ಯ ರೈತಸಂಘವು ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಬಣಗಳಾಗಿ ಒಡೆದು ಹೋಗಿದ್ದು ಕೋಟೆನಾಡಿನಲ್ಲಿ ರೈತ ಹೋರಾಟಕ್ಕೆ ಶಕ್ತಿ ಇಲ್ಲದಂತಾಗಿದೆ. ಮುಖಂಡರ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಹೆಚ್ಚುಹೆಚ್ಚು ಬಣಗಳು ಹುಟ್ಟಿಕೊಳ್ಳುತ್ತಿದ್ದು ರೈತರ ಹೋರಾಟವೆಂದರೆ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಅಸಡ್ಡೆ ಎಂಬಂತಾಗಿದೆ.

ಹಿಂದಿನಿಂದಲೂ ಮಧ್ಯಕರ್ನಾಟಕ ಭಾಗದ ಮುಖಂಡರು ರಾಜ್ಯ ರೈತ ಸಂಘಕ್ಕೆ ಶಕ್ತಿ ತುಂಬಿದ್ದಾರೆ. ಇತಿಹಾಸದುದ್ದಕ್ಕೂ ಹೋರಾಟಗಾರರು ರೈತರಿಗೆ ನ್ಯಾಯ ಕೊಡಿಸಿದ್ದಾರೆ. ಆದರೆ, ಇತ್ತೀಚೆಗೆ ಒಗ್ಗಟ್ಟಿನ ಕೊರತೆ ಇದ್ದು ಹೋರಾಟದ ಘನತೆಯನ್ನು ಹಾಳುಗೆಡವಿದ್ದಾರೆ. ಕೇವಲ ಸ್ಥಾನಕ್ಕಾಗಿ, ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಮುಖಂಡರು ಹೋರಾಟವನ್ನು ಬಲಿ ಕೊಟ್ಟಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ನಗರದಲ್ಲಿ ನಿತ್ಯ ಒಂದಲ್ಲಾ ಒಂದು ಧರಣಿ, ಪ್ರತಿಭಟನೆಗಳು ನಡೆಯುತ್ತವೆ. ಆದರೆ ‘ಒಗ್ಗಟ್ಟಿನ ಬಲ’ ಅರ್ಥ ಮಾಡಿಕೊಳ್ಳದ ಮುಖಂಡರು ಪ್ರತ್ಯೇಕವಾಗಿ ಬಂದು ಮನವಿ ಸಲ್ಲಿಸುತ್ತಾರೆ. ಪ್ರತಿಭಟನಕಾರರ ಸಂಖ್ಯೆ ಬೆರಳೆಣಿಕೆಯಷ್ಟೇ ಇರುತ್ತಿದ್ದು ಹೋರಾಟ ನೆಪಕ್ಕಷ್ಟೇ ಸೀಮಿತವಾಗಿದೆ. ‘ಮುಖಂಡರು ಸಲ್ಲಿಸುವ ಮನವಿ ಸರ್ಕಾರ ತಲುಪುವ ಬದಲು ಕಸದ ಬುಟ್ಟಿ ಸೇರುತ್ತಿದೆಯೇ?’ ಎಂಬ ಶಂಕೆ ಅಧಿಕಾರಿಗಳ ವಲಯದಿಂದ ಕೇಳಿಬರುತ್ತಿರುವುದು ಹೋರಾಟದ ವಿಭಿನ್ನ ಮುಖಗಳನ್ನು ಅನಾವರಣಗೊಳಿಸುತ್ತಿದೆ.

ADVERTISEMENT

‘2 ದಶಕದಿಂದೀಚೆಗೆ ರೈತಸಂಘದಲ್ಲಿ ಹುಟ್ಟಿಕೊಂಡ ಅಧಿಕಾರದ ದಾಹ ಸಂಘಟನೆಯನ್ನು ಹೋಳಾಗುವಂತೆ ಮಾಡಿತು. ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಜಾತ್ಯತೀತವಾದ ರೈತಸಂಘಗಳಲ್ಲಿ ಜಾತಿಯ ವಿಷ ಬೀಜ ಬಿತ್ತಲಾಗಿದೆ. ಮಠಾಧೀಶರು ಸಂಘಟನೆಯನ್ನು ನಿಯಂತ್ರಿಸುತ್ತಿದ್ದಾರೆ. ಇದು ಸಂಘಟನೆಯಲ್ಲಿ ಕಾವಲುಗಳು ಟಿಸಿಲೊಡೆಯಲು ಕಾರಣವಾಗಿದೆ. ಈ ರೀತಿಯ ಬಣ ಸಂಘಟನೆ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ’ ಎಂದು ಹಿರಿಯ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಪ್ರೊ.ನಂಜುಂಡಸ್ವಾಮಿ ಅವರು ಸ್ಥಾಪಿಸಿದ ರಾಜ್ಯ ರೈತಸಂಘ ಶಕ್ತಿಯುತವಾಗಿತ್ತು. 2000ನೇ ಇಸವಿವರೆಗೂ ರೈತ ಹೋರಾಟಕ್ಕೆ ಒಗ್ಗಟ್ಟಿನ ಕೊರತೆ ಕಾಡಿರಲಿಲ್ಲ. ದಕ್ಷಿಣದಲ್ಲಿ ಪುಟ್ಟಣ್ಣಯ್ಯ ಹೊರಬಂದು ಪ್ರತ್ಯೇಕ ಸಂಘ ಸ್ಥಾಪಿಸಿದರೂ ಜಿಲ್ಲೆಯಲ್ಲಿ ನಂಜುಂಡಸ್ವಾಮಿ ಸ್ಥಾಪಿತ ಸಂಘಟನೆ ರೈತರ ಪರವಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿತ್ತು. ಆದರೆ, ಇತ್ತೀಚೆಗೆ ನಂಜುಂಡಸ್ವಾಮಿ ಸ್ಥಾಪಿತ ರೈತಸಂಘದಲ್ಲಿದ್ದ ಹಲವು ಮುಖಂಡರು ಸಂಘಟನೆಯಿಂದ ಹೊರಬಂದು ತಮ್ಮದೇ ಆದ ರೈತಸಂಘ ಘೋಷಿಸಿಕೊಂಡಿದ್ದಾರೆ. ಒಂದು ಸಂಘಕ್ಕೆ ಇಬ್ಬಿಬ್ಬರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಸಂಘಟನೆಗಳನ್ನು ಕೆಲ ಮುಖಂಡರು ವ್ಯಕ್ತಿ ಕೇಂದ್ರಿತಗೊಳಿಸುತ್ತಿದ್ದಾರೆ ಎಂದು ಹಿರಿಯ ಮುಖಂಡರೊಬ್ಬರು ಆರೋಪಿಸಿದರು. 

ಸಂಘಟನೆಗಳು ತತ್ವ ಸಿದ್ಧಾಂತಗಳ ಮೇಲೆ ನಡೆಯಬೇಕು. ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ, ವಾಸುದೇವ ಮೇಟಿ ಬಣ, ಕೋಡಿಹಳ್ಳಿ ಚಂದ್ರಶೇಖರ್‌ ಬಣ ಸೇರಿದಂತೆ 10ಕ್ಕೂ ಅಧಿಕ ಬಣಗಳು ವ್ಯಕ್ತಿ ಕೇಂದ್ರಿತವಾಗಿವೆ. ಜೊತೆಗೆ ಅಖಂಡ ಕರ್ನಾಟಕ ರೈತಸಂಘ ಸೇರಿದಂತೆ ನಾಲ್ಕೈದು ಸಂಘಟನೆಗಳು ರೈತಸಂಘದ ಹೆಸರನ್ನು ಕೊಂಚ ಬದಲಾವಣೆ ಮಾಡಿಕೊಂಡು ಅಸ್ತಿತ್ವದಲ್ಲಿವೆ.

ಹಲವು ಸಂಘಟನೆಗಳಲ್ಲಿ 3–4 ಮಂದಿ ಜಿಲ್ಲಾ ಘಟಕದ ಅಧ್ಯಕ್ಷರಿದ್ದಾರೆ. ತಮ್ಮನ್ನು ತಾವೇ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಒಂದೇ ಸಂಘಟನೆ ಹೆಸರಿನಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಘಟನೆ, ಆಡಳಿತ ಮಂಡಳಿ, ಶಿಸ್ತು ಮಾಯವಾಗಿದೆ. ಲೆಟರ್‌ ಹೆಡ್‌, ಕಾರುಗಳಲ್ಲಿ ಫಲಕ ಅಳವಡಿಸಿಕೊಳ್ಳುವುದಕ್ಕೆ ಮಾತ್ರ ಸಂಘಟನೆ ಸೀಮಿತವಾಗಿದೆ.

‘ಜಿಲ್ಲೆಯ ಹೋರಾಟಗಾರರಲ್ಲಿ ಬದ್ಧತೆ ಇದ್ದಿದ್ದರೆ ಇಂದು ಭದ್ರಾ ನೀರು ನಮ್ಮ ನೆಲದ ಮೇಲೆ ಹರಿಯಬೇಕಾಗಿತ್ತು. ದಕ್ಷಿಣ ಕರ್ನಾಟಕದ ಕಾವೇರಿ ಹೋರಾಟ, ಉತ್ತರ ಕರ್ನಾಟಕದ ಮಹದಾಯಿ ಹೋರಾಟಕ್ಕಿರುವ ಶಕ್ತಿ ಮಧ್ಯ ಕರ್ನಾಟಕದ ಭದ್ರಾ ಹೋರಾಟಕ್ಕೆ ಇಲ್ಲದಾಗಿದೆ. ಜಿಲ್ಲೆಯ ಹೋರಾಟಗಾರರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಾಹಿತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಜೀವ ಕಳೆದುಕೊಳ್ಳುತ್ತಿವೆ ರೈತಸಂಘಟನೆಗಳು  ಸಿದ್ಧಾಂತದ ಬದಲು ವ್ಯಕ್ತಿ ಕೇಂದ್ರಿತವಾಗುತ್ತಿವೆ  ಗೌರವಿಸದ ಜನ, ಜನಪ್ರತಿನಿಧಿ, ಅಧಿಕಾರಿ ವರ್ಗ

‘ಒಂದುಗೂಡಿಸುವ ಪ್ರಯತ್ನ ಸಫಲವಾಗಿಲ್ಲ’  ‘ಪ್ರೊ.ನಂಜುಂಡಸ್ವಾಮಿ ಕೆ.ಎಸ್‌.ಪುಟ್ಟಣ್ಣಯ್ಯ ನೇತೃತ್ವದ ರೈತಸಂಘಗಳಿಂದ ಎಲ್ಲಾ ರೈತಸಂಘಗಳನ್ನು ಒಂದುಗೂಡಿಸುವ ಪ್ರಯತ್ನ ಹಲವು ಬಾರಿ ನಡೆದಿದೆ. ಆದರೆ ಮುಖಂಡರ ಸ್ವಾರ್ಥದಿಂದಾಗಿ ಪ್ರಯತ್ನ ಸಫಲವಾಗಿಲ್ಲ’ ಎಂದು ರೈತಸಂಘದ (ಕೆ.ಎಸ್‌.ಪುಟ್ಟಣ್ಣಯ್ಯ) ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಹೇಳಿದರು.  ‘ಪುಟ್ಟಣ್ಣಯ್ಯ ನಂಜುಂಡಸ್ವಾಮಿ ಅವರು ಜೀವಂತವಿದ್ದಾಗ ಸಂಘಟನೆಯಲ್ಲಿ ಶಿಸ್ತು ತರಬೇತಿ ಇರುತ್ತಿತ್ತು. ತರಬೇತಿ ಪಡೆದ ನಂತರವಷ್ಟೇ ಪದಾಧಿಕಾರಿ ನೇಮಕಾತಿ ನಡೆಯುತ್ತಿತ್ತು. ಈಗ ಶಿಸ್ತು ಸತ್ತು ಹೋಗಿದ್ದು ಸ್ವಾರ್ಥ ರಾರಾಜಿಸುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬೇಡ ಉದ್ದೇಶಕ್ಕೆ ಹೋರಾಟ ‘ರೈತರು ಸಮಸ್ಯೆಗಳ ಮೂಟೆಯನ್ನೇ ಹೊತ್ತು ನಿಂತಿದ್ದಾರೆ. ಅವರ ಸಮಸ್ಯೆ ಬಗೆಹರಿಸುವತ್ತ ರೈತ ಹೋರಾಟ ಸಾಗಬೇಕು. ಆದರೆ ವೈಯಕ್ತಿಕ ಉದ್ದೇಶಕ್ಕೆ ರೈತರಿಗೆ ಸಂಬಂಧವೇ ಇಲ್ಲದ ಉದ್ದೇಶಕ್ಕೆ ರೈತಸಂಘದ ಪ್ರತಿಭಟನೆಗಳು ನಡೆಯುತ್ತಿವೆ. ಅಧಿಕಾರಿ ವಿರುದ್ಧ ಅಧಿಕಾರಿ ವರ್ಗಾವಣೆ ಅಮಾನತು ಕೋರಿ ಪೊಲೀಸರ ವಿರುದ್ಧ ನೌಕರರ ಪರ– ವಿರುದ್ಧ ಹೋರಾಟ ಮಾಡುತ್ತಾರೆ. ಇದು ಬೇಡ ಎಂದು ಪ್ರಶ್ನಿಸಿದರೆ ಸಂಘಟನೆಯಿಂದ ಹೊರಬಂದು ಇನ್ನೊಂದು ಬಣ ರಚಿಸುತ್ತಾರೆ. ಇದು ರೈತ ಹೋರಾಟದ ಹಣೆಬರಹ’ ರೈತಸಂಘದ ಹಿರಿಯರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.