ADVERTISEMENT

ಚಿತ್ರದುರ್ಗ | 4ನೇ ಸುತ್ತಿನ ಕೋಟೆಯಲ್ಲಿ ಬಿರುಕು: ಉದುರುತ್ತಿವೆ ಕಲ್ಲು

ಜಿ.ಬಿ.ನಾಗರಾಜ್
Published 7 ನವೆಂಬರ್ 2019, 19:50 IST
Last Updated 7 ನವೆಂಬರ್ 2019, 19:50 IST
ನಾಲ್ಕನೇ ಸುತ್ತಿನ ಕೋಟೆಯಲ್ಲಿ ಉದುರಿದ ಕಲ್ಲುಗಳು
ನಾಲ್ಕನೇ ಸುತ್ತಿನ ಕೋಟೆಯಲ್ಲಿ ಉದುರಿದ ಕಲ್ಲುಗಳು   

ಚಿತ್ರದುರ್ಗ: ಈಚೆಗೆ ಸುರಿದ ಭಾರಿ ಮಳೆಗೆ ಏಳು ಸುತ್ತಿನ ಕೋಟೆಯ ಕಲ್ಲುಗಳು ಉದುರಲಾರಂಭಿಸಿವೆ. ಇದರಿಂದ ನಾಲ್ಕನೇ ಸುತ್ತಿನ ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಮದ್ದು ಬೀಸುವ ಕಲ್ಲುಗಳ ಹಿಂಭಾಗದ ಕೋಟೆಯ ಸುತ್ತು ಆತಂಕ ಮೂಡಿಸುವ ರೀತಿಯಲ್ಲಿ ಕಾಣಿಸುತ್ತಿದೆ. ಹೆಬ್ಬಂಡೆಗಳಿಂದ ನಿರ್ಮಾಣವಾಗಿರುವ ಕೋಟೆ ಚಿತ್ರದುರ್ಗದ ಮುಕುಟಪ್ರಾಯ. ಪಾಳೆಗಾರರ ಶೌರ್ಯ, ಪರಾಕ್ರಮ ಸಾರುವ ಉಕ್ಕಿನ ಕೋಟೆ ನಿಸರ್ಗದ ಸವಾಲುಗಳನ್ನು ಮೆಟ್ಟಿನಿಂತಿದೆ.

ಆದರೆ, ಈಚೆಗೆ ಇದು ಅವನತಿಯ ಹಾದಿ ಹಿಡಿದಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಹಿಂದೆ ಪೂರ್ವ ಮುಂಗಾರು ಮಳೆಗೆ ಅಗಳು ಗೋಡೆ ಕುಸಿದಿತ್ತು. ಬೃಹತ್ ಬಂಡೆಗಳ ಶಿಖರಗಳಲ್ಲಿ ಬುರುಜು, ಬತೇರಿಗಳಿವೆ. ಏಳು ಸುತ್ತಿನ ಕೋಟೆಯ ಆರಂಭದ ಎರಡು ಸುತ್ತು ಅವನತಿ ಹೊಂದಿವೆ. ರಂಗಯ್ಯನ ಬಾಗಿಲು, ಆನೆ ಬಾಗಿಲು ಪಳೆಯುಳಿಕೆಯ ರೀತಿಯಲ್ಲಿ ಕಾಣುತ್ತಿವೆ. ಬೃಹತ್ ಚಪ್ಪಡಿ ಕಲ್ಲುಗಳನ್ನು ಪೇರಿಸಿ ನಿರ್ಮಿಸಿದ ಗೋಡೆಗಳು ಮಳೆಗೆ ನೆಲಕಚ್ಚುತ್ತಿವೆ.

ADVERTISEMENT

ಕಾಮನಬಾವಿ ಸುತ್ತಿನ ಅಗಳು ದಾಟಿ ಮೇಲೆ ಸಾಗಿದರೆ ಸಿಗುವುದೇ ಮೇಲುದುರ್ಗ. ವಿಶಾಲವಾದ ಪ್ರದೇಶದಲ್ಲಿ ಇರುವ ಮದ್ದು ಬೀಸುವ ಕಲ್ಲುಗಳ ಹಿಂಭಾಗಕ್ಕೆ ತೆರಳಿ ಕೋಟೆಯ ಸುತ್ತು ಪರಿಶೀಲಿಸಿದರೆ ಕಲ್ಲು ಉದುರುತ್ತಿರುವುದು ಕಾಣಿಸುತ್ತಿದೆ. ಇದನ್ನು ನವಿಲು, ಅಳಿಲುಗಳಿಗೆ ನಿತ್ಯ ಆಹಾರ ನೀಡುವ ಪ್ರಾಣಿಪ್ರಿಯರು ಗಮನಿಸಿದ್ದಾರೆ.

ಮೇಲುದುರ್ಗದಿಂದ ಹರಿದುಬರುವ ನೀರು ಅಗಳು ಸೇರಲು ಸಾಧ್ಯವಾಗುತ್ತಿಲ್ಲ. ನೀರು ಹರಿಯುವ ಮಾರ್ಗಗಳು ಹೂತು ಹೋಗಿವೆ. ಇದು ಉಕ್ಕಿನ ಕೋಟೆಗೆ ಧಕ್ಕೆ ಉಂಟುಮಾಡುತ್ತಿದೆ. ನೀರಿನ ಮಾರ್ಗ ದುರಸ್ತಿಗೊಳಿಸಿದರೆ ಅಪಾಯ ತಡೆಯಲು ಸಾಧ್ಯ ಎಂಬುದು ಕೋಟೆ ವೀಕ್ಷಕರ ಸಲಹೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.