ಚಿತ್ರದುರ್ಗ: ‘ನಗರದ ಐತಿಹಾಸಿಕ ಕಲ್ಲಿನಕೋಟೆಗೆ ಪ್ರತಿ ತಿಂಗಳು 35,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ವಾಹನಗಳಲ್ಲಿ ತಲುಪಲು ಸೂಕ್ತ ರಸ್ತೆ ಇಲ್ಲ. ಕೋಟೆ ಮುಂಭಾಗದ ರಸ್ತೆಯೂ ಒತ್ತುವರಿಯಾಗಿದ್ದು ಪ್ರವಾಸಿಗರಿಗೆ ಸೌಲಭ್ಯ ಇಲ್ಲವಾಗಿದೆ. ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಿಗದಿ ಮಾಡಿ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ಕೋಟೆ ತಲುಪುವ ರಸ್ತೆಗಳು ಕೂಡ ಒತ್ತುವರಿಯಾಗಿರುವ ಕಾರಣ ಕಿರಿದಾಗಿವೆ. ವಾಹನಗಳ ಮೂಲಕ ಕೋಟೆಗೆ ತೆರಳುವುದು ತ್ರಾಸದಾಯಕವಾಗಿದೆ. ಕೋಟೆಯ ಮುಂಭಾಗದಲ್ಲಿಯೂ ವಾಹನಗಳನ್ನು ನಿಲ್ಲಿಸಲು ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಗಾಂಧಿ ವೃತ್ತದಿಂದ ಕೋಟೆಗೆ ತೆರಳುವ ರಸ್ತೆ, ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಿಂದ ಕೋಟೆಗೆ ತಲುಪುವ 3.5 ಕಿ.ಮೀ ರಿಂಗ್ ರಸ್ತೆ ನಿರ್ಮಿಸುವ ಯೋಜನೆ ಸಂಬಂಧ ಚರ್ಚಿಸಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಲೋಕೋಪಯೋಗಿ ಇಲಾಖೆಯು ಯೋಜನೆ ಜಾರಿ ಕುರಿತಂತೆ ಆಸಕ್ತಿ ತೋರಿಸಿಲ್ಲ’ ಎಂದರು.
‘ಚಿತ್ರದುರ್ಗದ ಕೋಟೆಯಲ್ಲಿ ₹ 28.40 ಕೋಟಿ ವೆಚ್ಚದಲ್ಲಿ ಧ್ವನಿ ಬೆಳಕು ವ್ಯವಸ್ಥೆ ರೂಪಿಸಲು ಕ್ರಮ ವಹಿಸಲಾಗಿದೆ. ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ವಿವಿಧ ಮೂಲ ಸೌಕರ್ಯ ಒದಗಿಸಿ ಅಬಿವೃದ್ಧಿಪಡಿಸಲಾಗುವುದು. ಕೋಟೆಯಲ್ಲಿ ಕೆಫೆಟೆರಿಯಾ ನಿರ್ಮಿಸಿ ಸೌಲಭ್ಯ ಒದಗಿಸುವುದು, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ವಸ್ತು ಸಂಗ್ರಹಾಲಯ ನಿರ್ಮಾಣ ಹಾಗೂ ಕೋಟೆಯೊಳಗೆ ಪ್ರಮುಖ ತಾಣಗಳಿಗೆ ಪ್ರವಾಸಿಗರು ತಲುಪಲು ಸಮಸ್ಯೆ ಇರುವ ಸ್ಥಳಗಳಲ್ಲಿ ರೈಲಿಂಗ್ಸ್ ಅಳವಡಿಸುವುದು ಸೇರಿದಂತೆ ₹ 5 ಕೋಟಿ ಮೊತ್ತದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸ್ಮಾರಕ ದತ್ತು ಸ್ವೀಕಾರ ಯೋಜನೆಯನ್ನು ರೂಪಿಸಿ, ಜಾರಿಗೊಳಿಸಲಾಗಿದೆ. ಸ್ಮಾರಕಗಳನ್ನು ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು, ಕಂಪನಿಗಳು ತಮ್ಮ ಸಿಎಸ್‍ಆರ್ ಚಟುವಟಿಕೆಗಳಡಿ ದತ್ತು ಪಡೆದು ಅಭಿವೃದ್ಧಿಪಡಿಸಬಹುದು. ಖಾಸಗಿ ಸಂಸ್ಥೆಯ ಹೆಸರು, ಜಾಹೀರಾತು ಪ್ರದರ್ಶಿಸಲು ಕೂಡ ಅವಕಾಶ ಇರುತ್ತದೆ’ ಎಂದರು.
‘ಚಂದ್ರವಳ್ಳಿ ಕೆರೆ, ಮಲ್ಲಾಪುರ ಕೆರೆ, ಚಳ್ಳಕೆರೆ ತಾಲ್ಲೂಕಿನ ಕೆರೆಕಲ್ ಕೆರೆ, ಮೊಳಕಾಲ್ಮುರು ತಾಲ್ಲೂಕು ರಂಗಯ್ಯನದುರ್ಗದಲ್ಲಿ ಸಾಹಸ ಪ್ರವಾಸೋದ್ಯಮ ಹಾಗೂ ಜಲಕ್ರೀಡೆಗಳನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಬಿವೃದ್ಧಿ ಪ್ರಾಧಿಕಾರವು ಕಳೆದ ವರ್ಷವೇ ಅನುಮತಿ ನೀಡಿದೆ. ಶೀಘ್ರ ಇದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಭದ್ರಾ ಮೆಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಚಂದ್ರಪ್ಪ ಬಾರಿಕರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.