ADVERTISEMENT

ಚಿತ್ರದುರ್ಗ | ಕೋಟೆಬಾಗಿಲು ಪರಿಶೀಲನೆ: ಸಂರಕ್ಷಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:26 IST
Last Updated 20 ಜೂನ್ 2025, 14:26 IST
ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್‌ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ಚಿತ್ರದುರ್ಗದ ಐತಿಹಾಸಿಕ ಲಾಲ್‌ಕೋಟೆ ಬಾಗಿಲು ಬಳಿಯ ನರಸಿಂಹದ್ವಾರವನ್ನು ಪರಿಶೀಲಿಸಿದರು
ರಾಜ್ಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್‌ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ಚಿತ್ರದುರ್ಗದ ಐತಿಹಾಸಿಕ ಲಾಲ್‌ಕೋಟೆ ಬಾಗಿಲು ಬಳಿಯ ನರಸಿಂಹದ್ವಾರವನ್ನು ಪರಿಶೀಲಿಸಿದರು   

ಚಿತ್ರದುರ್ಗ: ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್‌ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ನಗರದ ಐತಿಹಾಸಿಕ ಲಾಲ್‌ಕೋಟೆ ಬಾಗಿಲು ಬಳಿಯ ನರಸಿಂಹ ದ್ವಾರಕ್ಕೆ ಭೇಟಿ ನೀಡಿ ಅಲ್ಲಿಯ ಅವ್ಯವಸ್ಥೆಗಳನ್ನು ಪರಿಶೀಲಿಸಿದರು.

ಗುರುವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ಕುಡುಕರ ಕಾರ್ನರ್‌ ಆಯ್ತು ಐತಿಹಾಸಿಕ ಕೋಟೆದ್ವಾರ!’ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.  ಪತ್ರಿಕೆ ವರದಿಯು ರಾಜ್ಯದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಅಧಿಕಾರಿಗಳು ಭೇಟಿ ನೀಡಿ ಸ್ಮಾರಕವನ್ನು ಸಂರಕ್ಷಿಸುವ, ಸ್ವಚ್ಛಗೊಳಿಸುವ, ಪ್ರವಾಸಿಗರಿಗೆ ಮುಕ್ತಗೊಳಿಸುವ ಬಗ್ಗೆ ಚರ್ಚೆ ನಡೆಸಿದರು.

‘ಪ್ರಜಾವಾಣಿಯಲ್ಲಿ ಪ್ರಕಟಗೊಂಡ ವರದಿ ಮುಖ್ಯಮಂತ್ರಿ ಕಚೇರಿಗೂ ತಲುಪಿದೆ. ನಗರಸಭೆಯ ಸಹಕಾರ ಪಡೆದು ಸ್ಮಾರಕವನ್ನು ಸ್ವಚ್ಛಗೊಳಿಸುವಂತೆ ನಮ್ಮ ಇಲಾಖೆಯ ಉಪ ನಿರ್ದೇಶಕರು ಸೂಚನೆ ನೀಡಿದ್ದರು. ಹೀಗಾಗಿ ನಾನು ಹಾಗೂ ನಗರಸಭೆ ಸಿಬ್ಬಂದಿ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ್ದೇವೆ. ಶೀಘ್ರ ಲಾಲ್‌ಕೋಟೆ ಬಾಗಿಲು ಹಾಗೂ ಸಮೀಪದ ಎರಡು ಉಪ ದ್ವಾರಗಳನ್ನು ಸ್ವಚ್ಛಗೊಳಿಸಲಾಗುವುದು’ ಎಂದು ಜಿ.ಪ್ರಹ್ಲಾದ್‌ ತಿಳಿಸಿದರು.

ADVERTISEMENT

‘ನರಸಿಂಹಬಾಗಿಲು ಬಳಿ ಕೆಲವರು ಮದ್ಯ ಸೇವನೆ ಮಾಡುತ್ತಿರುವ, ಜೂಜಾಡುವ ವಿಷಯ ತಿಳಿದು ಬಂದಿದೆ. ಇನ್ನುಮುಂದೆ ಅಂಥವರ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗುವುದು. ನಗರಸಭೆ ಸಿಬ್ಬಂದಿಯ ಸಹಕಾರ ಪಡೆದು ಇಡೀ ಆವರಣವನ್ನು ಸ್ವಚ್ಛಗೊಳಿಸಲಾಗುವುದು’ ಎಂದರು.

‘ಕಲ್ಲಿನಕೋಟೆಯ ಮುಖ್ಯದ್ವಾರದಿಂದ ಲಾಲ್‌ಕೋಟೆಗೆ ಕೇವಲ 300 ಮೀಟರ್‌ ಅಂತರದಲ್ಲಿದೆ. ಹೀಗಾಗಿ ಈ ಸ್ಮಾರಕ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ವ್ಯಾಪ್ತಿಗೆ ಬರುತ್ತದೆ. ಸ್ಮಾರಕದ ಉಳಿವಿಗೆ ಕ್ರಮ ಕೈಗೊಳ್ಳುವಂತೆ ಎಎಸ್‌ಐ ಅಧಿಕಾರಿಗಳನ್ನೂ ಕೋರಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.