ADVERTISEMENT

ಚಿತ್ರದುರ್ಗ: ಸಿನಿ ಪ್ರಿಯರ ಮನಸೆಳೆದ ಗಫೂರ್‌, ಟೂರಿಸ್ಟ್‌ ಫ್ಯಾಮಿಲಿ

ಜಿಲ್ಲಾ ಸಾಂಸ್ಕೃತಿಕ ಜನೋತ್ಸವಕ್ಕೆ ತೆರೆ; ಚಲನಚಿತ್ರ ಪ್ರದರ್ಶನ ಮತ್ತು ಸಂವಾದ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:28 IST
Last Updated 17 ಡಿಸೆಂಬರ್ 2025, 6:28 IST
ಜಿಲ್ಲಾ ಸಾಂಸ್ಕೃತಿಕ ಜನೋತ್ಸವದ ಚಲನಚಿತ್ರ ಪ್ರದರ್ಶನ, ಸಂವಾದದಲ್ಲಿ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ರಾಮಚಂದ್ರರಾವ್‌ ಮಾತನಾಡಿದರು
ಜಿಲ್ಲಾ ಸಾಂಸ್ಕೃತಿಕ ಜನೋತ್ಸವದ ಚಲನಚಿತ್ರ ಪ್ರದರ್ಶನ, ಸಂವಾದದಲ್ಲಿ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ರಾಮಚಂದ್ರರಾವ್‌ ಮಾತನಾಡಿದರು   

ಚಿತ್ರದುರ್ಗ: ನಗರದ ರೋಟರಿ ಬಾಲಭವನದಲ್ಲಿ ಮೂರು ದಿನದಿಂದ ನಡೆಯುತ್ತಿದ್ದ ಚಿತ್ರದುರ್ಗ ಜಿಲ್ಲಾ ಸಾಂಸ್ಕೃತಿಕ ಜನೋತ್ಸವಕ್ಕೆ ಸೋಮವಾರ ಚಲನಚಿತ್ರ ಪ್ರದರ್ಶನ ಮತ್ತು ಸಂವಾದದೊಂದಿಗೆ ತೆರೆ ಬಿದ್ದಿತು. ಸಾಹಿತಿ ಶರತ್ ಚಂದ್ರ ಅವರ ‘ಮಹೇಶ’ ಕಾದಂಬರಿ ಆಧರಿತ ಕಿರುಚಿತ್ರ ‘ಗಫೂರ್‌’ ಮತ್ತು ಅಭಿಷಣ್ ಜೀವಿಂತ್ ನಿರ್ದೇಶನದ ‘ಟೂರಿಸ್ಟ್ ಫ್ಯಾಮಿಲಿ’ ಚಲನಚಿತ್ರಗಳು ಸಿನಿ ಪ್ರಿಯರ ಗಮನ ಸೆಳೆದವು. 

‘ಗಪೂರ್‌ ಕಿರುಚಿತ್ರವಾದರೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಬಡ ಮುಸ್ಲಿಂ ಕುಟುಂಬ ತಮ್ಮ ಮಗನಂತೆ ಸಾಕಿದ ಮಹೇಶನಿಗೆ ಆಹಾರ ಕೊಡಲಾಗದೆ ಒಂದು ಊರಿನಲ್ಲಿ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ. ಅದರಲ್ಲಿ ಬರುವ ಪುರೋಹಿತಶಾಹಿ ಮನಃಸ್ಥಿತಿಯ ವ್ಯಕ್ತಿಗಳು ಈಗಲೂ ಅದೇ ರೀತಿ ಬದುಕುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಲಾಗಿದೆ’ ಎಂದು ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ರಾಮಚಂದ್ರರಾವ್‌ ತಿಳಿಸಿದರು. 

‘ಬಡವರ ನಡುವಿನ ಸಂಘರ್ಷದಲ್ಲಿ ಉಳ್ಳವರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ತಾಯಿ ಇಲ್ಲದ ಗಫೂರನ ಮಗಳು ನೀರಿಗಾಗಿ ಮೈಲುಗಟ್ಟಲೆ ನಡೆದು ಬಂದರೂ ಮೇಲ್ವರ್ಗದವರು ದಯೆ ತೋರಿಸದೆ ಹೋದಾಗ ಆಕೆಗೆ ನೀರು ಸಿಗುವುದಿಲ್ಲ. ಈ ಸನ್ನಿವೇಶ ನಮ್ಮ ಮನಸ್ಸನ್ನು ಕಲಕುತ್ತದೆ. ಇಂತಹ ಸಾಕಷ್ಟು ಅಂಶಗಳನ್ನು ಈ ಚಿತ್ರ ಹೊಂದಿದೆ’ ಎಂದರು. 

ADVERTISEMENT

‘ಮನುಷ್ಯ ಸಂಘಜೀವಿ. ಆದರೆ, ಪ್ರಸ್ತುತ ವಿದ್ಯಮಾನದಲ್ಲಿ ಮನುಷ್ಯನ ಮೂಲ ಗುಣವನ್ನೇ ಮರೆಯುವ ಹಂತಕ್ಕೆ ನಾವು ತಲುಪಿದ್ದೇವೆ. ಮನುಷ್ಯ ಮಾನವ ಮೌಲ್ಯಗಳಿಂದ ದೂರ ಉಳಿಯುತ್ತಿರುವುದು ನಿಜಕ್ಕೂ ಮನುಷ್ಯನ ಸಾವಿಗಿಂತಲೂ ದುಃಖಕರದ ವಿಷಯವಾಗಿದೆ’ ಎಂದು ಉಪನ್ಯಾಸಕ ನಿಸಾರ್‌ ಅಹಮ್ಮದ್‌ ತಿಳಿಸಿದರು.

‘ಟೂರಿಸ್ಟ್ ಫ್ಯಾಮಿಲಿ ಚಲನಚಿತ್ರದಲ್ಲಿ ನಿರ್ದೇಶಕರು ತುಂಬಾ ಸರಳವಾಗಿ ಪ್ರಸ್ತುತ ಪರಿಸ್ಥಿತಿಯನ್ನು ತೋರಿಸುತ್ತಾ ಚಿತ್ರದ ನಾಯಕನಲ್ಲಿ ಉನ್ನತ ಗುಣಗಳನ್ನು ಚಿತ್ರಿಸಿದ್ದಾರೆ. ಜನರಲ್ಲಿ ಮರೆಯಾಗುತ್ತಿರುವ ಕೌಟುಂಬಿಕ ಸಂಬಂಧ, ಜೀವನ ಪ್ರೀತಿ ಹಾಗೂ ನೆರೆಹೊರೆಯರಲ್ಲಿ ಬಾಂಧವ್ಯದ ಮಹತ್ವವನ್ನು ಅದ್ಭುತವಾಗಿ ತೋರಿಸಿದ್ದಾರೆ’ ಎಂದರು. 

ಆವಿಷ್ಕಾರ ಜಿಲ್ಲಾ ಸಂಚಾಲಕ ವಿಜಯಕುಮಾರ್‌, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಂಚಾಲಕಿ ಡಿ.ಸುಜಾತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.