ADVERTISEMENT

ಹಿರಿಯೂರು: ಕಾಲುವೆಗಳನ್ನು ಸ್ವಚ್ಛ ಮಾಡಿದ ನಗರಸಭೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 5:10 IST
Last Updated 8 ಆಗಸ್ಟ್ 2025, 5:10 IST
<div class="paragraphs"><p><strong>ಹಿರಿಯೂರಿನ ಗಾಂಧಿ ಮತ್ತು ಸಿಎಂ ಬಡಾವಣೆ ನಡುವೆ ಹಾದು ಹೋಗಿರುವ ರಾಜಕಾಲುವೆಯನ್ನು ಗುರುವಾರ ಹಿಟಾಚಿ ಯಂತ್ರ ಬಳಸಿ ಸ್ವಚ್ಛಗೊಳಿಸುತ್ತಿರುವುದು.</strong></p></div>

ಹಿರಿಯೂರಿನ ಗಾಂಧಿ ಮತ್ತು ಸಿಎಂ ಬಡಾವಣೆ ನಡುವೆ ಹಾದು ಹೋಗಿರುವ ರಾಜಕಾಲುವೆಯನ್ನು ಗುರುವಾರ ಹಿಟಾಚಿ ಯಂತ್ರ ಬಳಸಿ ಸ್ವಚ್ಛಗೊಳಿಸುತ್ತಿರುವುದು.

   

ಹಿರಿಯೂರು: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ದಾಖಲೆಯ ಮಳೆಗೆ ಜಲಾವೃತವಾಗಿದ್ದ ಪ್ರದೇಶಗಳಲ್ಲಿನ ಕಾಲುವೆಗಳನ್ನು ನಗರಸಭೆ ಆಡಳಿತ ಗುರುವಾರ ಸ್ವಚ್ಛಗೊಳಿಸಿತು.

ಕಾಲುವೆ ವ್ಯವಸ್ಥೆ ಸರಿ ಇಲ್ಲದ ಕಾರಣಕ್ಕೆ ನಗರದ ಮಲ್ಲೇಶ್ವರ ಬಡಾವಣೆ, ಚಿಟುಗುಮಲ್ಲೇಶ್ವರ ಬಡಾವಣೆಯಲ್ಲಿನ ಅಂಬೇಡ್ಕರ್ ಶಾಲೆ ಸುತ್ತಮುತ್ತಲ ಪ್ರದೇಶ, ಅಂಗನವಾಡಿ ಸಮೀಪದ ಪ್ರದೇಶ, ತಾಹಾ ಕಲ್ಯಾಣ ಮಂಟಪದ ಕೆಳಭಾಗದಲ್ಲಿರುವ ಜೈಮಿನಿ ಶಾಲೆ ಹತ್ತಿರದ ಬಡಾವಣೆಗಳು ಮುಳುಗಡೆಯಾಗಿದ್ದವು.

ADVERTISEMENT

ಹುಳಿಯಾರ್ ರಸ್ತೆಯಲ್ಲಿ ಚರಂಡಿ ಗಳು ಕಟ್ಟಿಕೊಂಡಿದ್ದ ಪರಿಣಾಮ ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಲಕ್ಕವ್ವನಹಳ್ಳಿ ರಸ್ತೆಯಲ್ಲಿಯೂ ಮಳೆಯಿಂದಾಗಿ ಭಾರಿ ಪ್ರಮಾಣದ ನೀರು ರಸ್ತೆಯಲ್ಲಿ ಹರಿದಿದ್ದರಿಂದ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಬಂದ್ ಆಗಿತ್ತು.

ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರತ್ನಮ್ಮ, ಸಣ್ಣಪ್ಪ, ಮಮತಾ, ಪೌರಾಯುಕ್ತ ಎ. ವಾಸೀಂ, ಉಪಾಧ್ಯಕ್ಷರು, ಹಿರಿಯ ಆರೋಗ್ಯ ನಿರೀಕ್ಷಕರಾದ ಸುನಿಲ್, ಸಂಧ್ಯಾ ಮೊದಲಾದವರು ಗುರುವಾರ ಬೆಳಗಿನಿಂದಲೇ ಜೆಸಿಬಿ, ಹಿಟಾಚಿ ಯಂತ್ರಗಳೊಂದಿಗೆ ಪೌರಕಾರ್ಮಿಕರನ್ನು ಬಳಸಿಕೊಂಡು ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಪ್ರಧಾನ ರಸ್ತೆಯ ಎರಡೂ ಬದಿಯ ಚರಂಡಿಗಳ ಮೇಲೆ ಹೊದಿಸಿದ್ದ ಚಪ್ಪಡಿ ಕಲ್ಲುಗಳನ್ನು ತೆಗೆಸಿ ಶುಚಿಗೊಳಿಸಿದರು.

ಶಾಶ್ವತ ವ್ಯವಸ್ಥೆಗೆ ಆಗ್ರಹ: ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸದ ಬದಲು, 50 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಮುಳುಗುವ ಬಡಾವಣೆಗಳನ್ನು ಗುರುತಿಸಿ ಮನೆಗಳಿಗೆ ನೀರು ನುಗ್ಗದ ರೀತಿಯಲ್ಲಿ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು. ಚಿಟುಗುಮಲ್ಲೇಶ್ವರ ಬಡಾವಣೆ 12 ವರ್ಷದಲ್ಲಿ ನಾಲ್ಕನೇ ಬಾರಿಗೆ ಜಲಾವೃತವಾಗಿದ್ದು, ಮತ್ತೊಮ್ಮೆ ಜನರು ಜಲಕಂಟಕಕ್ಕೆ ಒಳಗಾಗದಂತೆ ತಡೆಯಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಎಲ್.ಗಿರಿಧರ್ ಒತ್ತಾಯಿಸಿದ್ದಾರೆ.

ನಂಜಯ್ಯನಕೊಟ್ಟಿಗೆ ಸಮೀಪದ ಆಶ್ರಯ ಕಾಲೊನಿಯಿಂದ ಆರಂಭವಾಗುವ ರಾಜಕಾಲುವೆಯನ್ನು ಇನ್ನಷ್ಟು ವಿಸ್ತರಣೆ  ಮಾಡಬೇಕು. ನಂಜಯ್ಯನಕೊಟ್ಟಿಗೆ, ಜೈಮಿನಿ ಶಾಲೆ, ರಾಷ್ಟ್ರೀಯ ಅಕಾಡೆಮಿ ಶಾಲೆ, ವಾಣಿವಿಲಾಸ ಬಲ ನಾಲೆ, ಮಲ್ಲೇಶ್ವರ ಬಡಾವಣೆ, ಗಾಂಧಿ ಬಡಾವಣೆ, ಸಿ.ಎಂ. ಬಡಾವಣೆಯಿಂದ ಲಕ್ಕವ್ವನಹಳ್ಳಿ ರಸ್ತೆ ಮೂಲಕ ಮಳೆ ನೀರು ವೇದಾವತಿ ನದಿ ಸೇರುವಂತೆ ಮಾಡುವುದರಿಂದ ಶಾಶ್ವತ ಪರಿಹಾರ ಸಿಗುತ್ತದೆ.

ರಾಜಕಾಲುವೆ ಸರಿಪಡಿಸಲು ಆಗ್ರಹ

‘ಪೌದಿಯಮ್ಮ ದೇವಸ್ಥಾನದಿಂದ ವಾಗ್ದೇವಿ ಶಾಲೆಯ ಪಕ್ಕ ಹಾದು ಹೋಗಿರುವ ಕಾಲುವೆ, ಸೂರ್ಯ ಹೋಟೆಲ್ ಹಿಂಭಾಗದ ಬಡಾವಣೆಯಿಂದ ವಿನಾಯಕ ಚಿತ್ರಮಂದಿರದ ಪಕ್ಕದಲ್ಲಿ ಹಾದು ಹೋಗಿರುವ ಕಟುಗರಹಳ್ಳವನ್ನು ವಿಸ್ತರಿಸಿದಲ್ಲಿ ಮಾತ್ರ ಮಳೆಯ ಅನಾಹುತಗಳನ್ನು ತಪ್ಪಿಸಲು ಸಾಧ್ಯ’ ಎಂದು ಗಿರಿಧರ್  ಸಲಹೆ ನೀಡಿದ್ದಾರೆ.

‘ರಾಜಕಾಲುವೆಗಳನ್ನು ಸರಿಪಡಿಸಬೇಕೆಂದು ಮಾಧ್ಯಮಗಳಲ್ಲಿ ಹಲವು ಬಾರಿ ವರದಿಯಾಗಿದ್ದರೂ ನಗರಸಭೆ ಭರವಸೆ ನೀಡಿದೆಯೇ ಹೊರತು ಕೆಲಸ ಮಾಡಲು ಆಸಕ್ತಿ ತೋರಿಸಿಲ್ಲ. ಈಗಲಾದರೂ ಮಳೆಯಿಂದ ಆಗುವ ಅನಾಹುತಗಳಿಂದ ನಾಗರಿಕರನ್ನು ಪಾರು ಮಾಡುವ ಕೆಲಸಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.