ಚಿತ್ರದುರ್ಗ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಸಿ.ಸಿ. ಟಿವಿ ಕ್ಯಾಮೆರಾಗಳು ಗುಣಮಟ್ಟದಿಂದ ಕೂಡಿಲ್ಲ. ವಿಡಿಯೊಗಳಲ್ಲಿ ವಾಹನದ ನಂಬರ್ ಕೂಡ ಗೋಚರಿಸುವುದಿಲ್ಲ. ಅಪಘಾತಗಳು ಸಂಭವಿಸಿದಾಗ ವಾಹನಗಳ ಮಾಹಿತಿ ಸರಿಯಾಗಿ ದೊರೆಯುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ‘ಗುಣಮಟ್ಟದ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸದ ಕಾರಣ ಸಮಸ್ಯೆಯಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಾವು ಹೇಳುವ ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಬೇಕು. ಜೊತೆಗೆ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ನಗರಸಭೆಯವರು ನಿರ್ವಹಣೆ ಮಾಡಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ ‘ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ ಗೊರ್ಲಡಕು ಗೇಟ್, ಜೆ.ಜೆ. ಹಳ್ಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸುಗಮ ಸಂಚಾರಕ್ಕೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಎರಡು ದಿನದೊಳಗೆ ರಸ್ತೆ ಕಾಮಗಾರಿ ಮುಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಎರಡು ದಿನದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಬಂಧಿಸಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.
‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ನಿಗದಿಯನುಸಾರ ಟೋಲ್ ಸಂಗ್ರಹಿಸಲಾಗುತ್ತಿದೆ. ಆದರೆ ಕೆಲವೆಡೆ ರಸ್ತೆಗಳು ಬಹಳಷ್ಟು ಹಾಳಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದರು.
‘ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ, ಜಂಕ್ಷನ್, ತಿರುವುಗಳಲ್ಲಿ ಅಗತ್ಯ ಮುಂಜಾಗ್ರತಾ ರಸ್ತೆ ಸುರಕ್ಷಾ ಕ್ರಮ ಕೈಗೊಳ್ಳಬೇಕು. ಬ್ಲಾಕ್ ಸ್ಪಾಟ್‍ಗಳಲ್ಲಿ ಸೂಚನಾ ಫಲಕ, ಹಂಪ್ಸ್, ರಂಬಲ್ ಸ್ಟ್ರೀಪ್ಸ್, ಕ್ಯಾಟ್ ಐಸ್ ಮತ್ತು ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.
ಶೀಘ್ರ ಕಾಮಗಾರಿ ಆರಂಭಿಸಿ:
ನಗರದ ಕೆಳಗೋಟೆ ಹೌಸಿಂಗ್ ಬೋರ್ಡ್ ಹತ್ತಿರ ಹೈಮಾಸ್ಟ್ ದೀಪ ಹಾಕಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಜೆಎಂಐಟಿ ಕಾಲೇಜು ಹತ್ತಿರ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬೇಗ ಪ್ರಾರಂಭ ಮಾಡಬೇಕು. ಕೆಳಗೋಟೆ ಹೌಸಿಂಗ್ ಬೋರ್ಡ್ ಹತ್ತಿರ ಸಾರ್ವಜನಿಕ ಸುಗಮ ಸಂಚಾರಕ್ಕೆ ಕ್ಯಾಟ್ ಐ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಜೆಎಂಐಟಿ ಹತ್ತಿರ ಪಾದಾಚಾರಿಗಳಿಗೆ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಗುತ್ತಿಗೆದಾರರನ್ನು ನಿಗದಿಪಡಿಸಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಸೂಚಿಸಿದರು.
‘ನಗರದ ಗಾಂಧಿ ವೃತ್ತದ ಬಳಿ ಇರುವ ನಗರಸಭೆಗೆ ಸೇರಿದ ಜಾಗದಲ್ಲಿ ಬಹು ಹಂತದ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಸರ್ಕಾರದಿಂದ ಅನುಮೋದನೆ ದೊರೆತ ಬಳಿಕ ಇಲ್ಲಿ ಸುಸಜ್ಜಿತ ಬಹುಹಂತದ ಪಾರ್ಕಿಂಗ್ ಸ್ಥಳ ನಿರ್ಮಾಣವಾಗಲಿದೆ. ಸಂತೆಹೊಂಡ ಪಕ್ಕದಲ್ಲಿ ನಿರ್ಮಾಣಗೊಂಡು, ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ, ಇಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್‍ಗೆ ಹಾಗೂ ಮೇಲ್ಭಾಗದಲ್ಲಿ ತರಕಾರಿ ಅಂಗಡಿಗಳಿಗೆ ಮಳಿಗೆ ನಿರ್ಮಾಣ ಮಾಡಿಕೊಡಲಾಗುವುದು’ ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ತಿಳಿಸಿದರು.
‘ಟ್ರ್ಯಾಕ್ಟರ್‌ಗಳಿಗೆ ಪ್ರತಿಫಲನ (ರಿಫ್ಲೆಕ್ಟರ್) ಸ್ಟಿಕರ್ ಅಳವಡಿಸದೇ ಇರುವುದರಿಂದ ರಾತ್ರಿ ವೇಳೆ ಟ್ರ್ಯಾಕ್ಟರ್ ಗೋಚರಿಸದೇ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆಯೂ ಈ ಬಗ್ಗೆ ಕ್ರಮ ಕೈಗೊಳ್ಳುವುಂತೆ ತಿಳಿಸಲಾಗಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ’ ಎಂದು ಆರ್‌ಟಿಒ ವಿರುದ್ಧ ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಟಿಒ ಭರತ್ ಕಾಳಸಿಂಗೆ ಉತ್ತರಿಸಿ ‘ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 25,205 ಟ್ರ್ಯಾಕ್ಟರ್ ಹಾಗೂ 151 ವಾಣಿಜ್ಯ ಟ್ರ್ಯಾಕ್ಟರ್ ಇವೆ. ಆರ್‌ಸಿ ಅವಧಿ ಮುಗಿದಿರುವ ಹಳೆ ಟ್ರ್ಯಾಕ್ಟರ್‌ಗಳು ನವೀಕರಣಕ್ಕೂ ಬಾರದೇ ಸಂಚರಿಸುತ್ತಿವೆ. ಕೃಷಿ ಉಪಯೋಗಕ್ಕಾಗಿ ನೋಂದಣಿಯಾಗಿರುವ ಟ್ರಾಕ್ಟರ್‌ಗಳು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿರುವುದು ಕೂಡ ಕಂಡುಬಂದಿದೆ. ಹಂತ ಹಂತವಾಗಿ ಅವುಗಳನ್ನು ಪತ್ತೆ ಮಾಡಿ ಕ್ರಮ ವಹಿಸಲಾಗುತ್ತಿದೆ’ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಂಗಸ್ವಾಮಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಇದ್ದರು.
ರಸ್ತೆ ಬದಿ ಲಾರಿ; ವಶಕ್ಕೆ ಪಡೆಯಲು ಸೂಚನೆ
‘ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸುತ್ತಿರುವ ಲಾರಿಗಳಿಂದ ಅಪಘಾತ ಸಂಭವಿಸುತ್ತಿವೆ. ಪಾರ್ಕಿಂಗ್ ಮಾಡದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಉಪ ಸಮಿತಿ ರಚನೆ ಮಾಡಿ ಪಾರ್ಕಿಂಗ್ ಮಾಡುತ್ತಿರುವ ಲಾರಿಗಳನ್ನು ವಶಪಡಿಸಿಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ರಾಷ್ಟ್ರೀಯ ಹೆದ್ದಾರಿಯ ಟೋಲ್ ಸಂಗ್ರಹಣಾ ಸ್ಥಳಗಳ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ಗೂಡಂಗಡಿಗಳು ನಿರ್ಮಾಣಗೊಂಡಿವೆ. ವಾಹನಗಳ ಪಾರ್ಕಿಂಗ್ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿವೆ. ಈ ಅಂಗಡಿಗಳಿಗೆ ಯಾವುದೇ ಅನುಮತಿ ಇಲ್ಲ. ಹೀಗಾಗಿ ಕೂಡಲೇ ಇಂತಹ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.