ಹೊಸದುರ್ಗ: ಮಧ್ಯ ಕರ್ನಾಟಕದ ಜಲಪಾತ್ರೆ ಎಂದೇ ಖ್ಯಾತಿ ಪಡೆದಿರುವ ವಿವಿ ಸಾಗರ ಜಲಾಶಯಕ್ಕೆ ಸೋಮವಾರ ರಾತ್ರಿಯಿಂದಲೇ ಭದ್ರಾ ಜಲಾಶಯದಿಂದ ನೀರು ಹರಿಸಲಾಗಿದ್ದು, ಮಂಗಳವಾರ ಸಂಜೆ ಹೊತ್ತಿಗೆ ವೇದಾವತಿ ನದಿಯ ಒಡಲಿಗೆ ಭದ್ರಾ ನೀರು ಬಂದು ಸೇರಿದೆ. ಇದರಿಂದಾಗಿ ಕೋಟೆನಾಡಿನ ಜನರ ಮೊಗದಲ್ಲಿ ಸಂತಸ ಮೂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ನೀರನ್ನು ವಿವಿ ಸಾಗರ ಜಲಾಶಯಕ್ಕೆ ಹರಿಸಲು ಸರ್ಕಾರ ಆದೇಶಿಸಿದೆ. ಸೋಮವಾರ ರಾತ್ರಿ ಅಜ್ಜಂಪುರ ತಾಲ್ಲೂಕಿನ ಬೆಟ್ಟತಾವರೆಕೆರೆಯ ಬಳಿಯ ಪಂಪ್ ಹೌಸ್‌ನಿಂದ ಒಂದು ಕ್ರೆಸ್ಟ್ ಗೇಟ್ ಮೂಲಕ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಬಿಡುವ ಕಾರ್ಯವನ್ನು ನೀರಾವರಿ ನಿಗಮದ ಅಧಿಕಾರಿಗಳು ಯಶಸ್ವಿಗೊಳಿಸಿದ್ದಾರೆ.
ವಿವಿ ಸಾಗರ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 114.7 ಅಡಿ ಇದೆ. ಡ್ಯಾಮ್ ಭರ್ತಿಯಾಗಲು ಇನ್ನೂ 12 ಟಿಎಂಸಿ ಅಡಿ ನೀರು ಬೇಕಿದೆ. ಭದ್ರಾ ಜಲಾಶಯದಿಂದ ನಿತ್ಯವೂ 700 ಕ್ಯುಸೆಕ್ ನೀರು ಹರಿಸಿದರೆ 17 ದಿನಕ್ಕೆ ಒಂದು ಟಿಎಂಸಿ ಅಡಿಯಷ್ಟು ನೀರು ಬರಲಿದೆ. ಇದರ ಜೊತೆಗೆ ಉತ್ತಮ ಮಳೆಯಾದರೆ ಮತ್ತೊಮ್ಮೆ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಜಲಾಶಯಕ್ಕೆ ಇನ್ನೂ 12 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.