ಚಿತ್ರದುರ್ಗ: ‘ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತವಾಗಿದ್ದು, ಕೆಲವು ಸೇವೆಗಳಿಗೆ ಮಾತ್ರ ಕನಿಷ್ಠ ದರ ನಿಗಧಿಗೊಳಿಸಲಾಗಿದೆ. ರೋಗಿಗಳು ತಾವು ನೀಡಿದ ಹಣಕ್ಕೆ ಕಡ್ಡಾಯವಾಗಿ ರಶೀತಿ ಪಡೆಯಬೇಕು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.
‘ರೋಗಿಗಳು ಹಾಗೂ ಅವರ ಸಂಬಂಧಿಗಳು ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ವೈದ್ಯಕೀಯ ಸಿಬ್ಬಂದಿ ಹಾಗೂ ಮಧ್ಯವರ್ತಿಗಳಿಗೆ ಹಣ ನೀಡಬಾರದು. ಒಂದು ವೇಳೆ ಆಸ್ಪತ್ರೆಯಲ್ಲಿ ಯಾರಾದರೂ ಹಣಕ್ಕೆ ಒತ್ತಾಯಿಸಿದರೆ ಇಲ್ಲವೇ ನಿಗಧಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಕೇಳಿದರೆ ಕೂಡಲೇ ನನ್ನ ಗಮನಕ್ಕೆ ತರಬೇಕು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
‘ರೋಗಿಗಳು ಆಸ್ಪತ್ರೆಗೆ ಬರುವಾಗ ತಪ್ಪದೇ ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ತರಬೇಕು. ಯಾವುದೇ ತೊಂದರೆಯಾದಲ್ಲಿ ದೂರವಾಣಿ ಅಥವಾ ನೇರವಾಗಿ ನಮ್ಮನ್ನು ಭೇಟಿ ಮಾಡಬೇಕು’ ಎಂದು ತಿಳಿಸಿದರು.
‘ಕಳೆದ ಅಕ್ಟೋಬರ್‌ನಿಂದ ಈವರೆಗೂ ಆಯಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಅಡಿ 26,090 ಒಳರೋಗಿಗಳು ದಾಖಲಾಗಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಶಸ್ತ್ರಚಿಕಿತ್ಸಕರು ಹಾಗೂ ವೈದ್ಯರು ಬೇರೆಡೆಗೆ ರೋಗಿಗಳನ್ನು ಶಿಫಾರಸ್ಸು ಮಾಡುವುದನ್ನು ತಡೆಗಟ್ಟಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.
‘₹ 5 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ನವೀಕರಣ ಕಾರ್ಯಕೈಗೊಳ್ಳಲಾಗುತ್ತಿದೆ. 5 ರಿಂದ 6 ತಿಂಗಳಲ್ಲಿ ನವೀಕರಣ ಪೂರ್ಣಗೊಳಲ್ಲಿದೆ. ಹೆಚ್ಚುವರಿಯಾಗಿ 32 ಹಾಸಿಗೆಯ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಎಕ್ಸ್ ರೇ ವಿಭಾಗದಿಂದ ಒಂದು ವರ್ಷ ಅವಧಿಯಲ್ಲಿ 31,996 ಎಕ್ಸ್‌ರೇ ತೆಗೆಯಲಾಗಿದೆ’ ಎಂದು ತಿಳಿಸಿದರು.
‘ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ತಜ್ಞವೈದ್ಯರನ್ನು ನೇಮಕ ಮಾಡಲಾಗಿದೆ. ಯಾವುದೇ ವೈದ್ಯರ ಕೊರತೆಯಿಲ್ಲ. 38 ಹೆಚ್ಚುವರಿ ಶೂಶ್ರಷಕರನ್ನು ಒಂದು ವರ್ಷದ ಅವಧಿಯಲ್ಲಿ ನೇಮಕ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.