ಚಿತ್ರದುರ್ಗ: ಜೋಗಿಮಟ್ಟಿ ರಸ್ತೆ 3ನೇ ಕ್ರಾಸ್ ನಿವಾಸಿ ಮಲ್ಲೇಶಪ್ಪ ಅವರು ಸ್ಕೂಟರ್ ನಿಲ್ಲಿಸಿದರೆ ಸಾಕು, ಪ್ರಾಣಿ– ಪಕ್ಷಿಗಳು ಅವರನ್ನು ಮುತ್ತಿಕೊಳ್ಳುತ್ತವೆ. ಗಾಡಿ ಮುಂಬದಿಯ ಬ್ಯಾಗ್‌ನಲ್ಲಿರುವ ಬ್ರೆಡ್, ಬಿಸ್ಕೆಟ್, ಹಣ್ಣು ತಿನ್ನಲು ಮುಗಿ ಬೀಳುತ್ತವೆ. 15 ವರ್ಷಗಳಿಂದಲೂ ಪ್ರಾಣಿ– ಪಕ್ಷಿಗಳಿಗೆ ಆಹಾರ ಉಣಬಡಿಸುತ್ತಿರುವ ಅವರು ಅದರಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.
ಮಲ್ಲೇಶಪ್ಪ ಅವರು ಎಲ್ಲಿಗೇ ಹೊರಟರೂ ಜೊತೆಯಲ್ಲಿ ಪ್ರಾಣಿ– ಪಕ್ಷಿಗಳಿಗೆ ಬೇಕಾದ ಆಹಾರವನ್ನು ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಅವರ ಈ ಪ್ರಾಣಿಗಳ ದಾಸೋಹ ಸೇವೆ ನಗರದ ಎಲ್ಲಾ ಬೇಕರಿ ಮಾಲೀಕರಿಗೂ ಗೊತ್ತಿದೆ. ಅವರು ಬೇಕರಿಗಳಿಗೆ ಹೋದಾಗ ಅಳಿದುಳಿದ ಬ್ರೆಡ್, ಬಿಸ್ಕತ್, ರೋಸ್ಟ್, ಕೇಕ್ ಪೌಡರ್‌ಗಳನ್ನು ಕೊಟ್ಟು ಕಳುಹಿಸುತ್ತಾರೆ. ಅದನ್ನು ತರುವ ಅವರು ತಮ್ಮ ಮನೆಯ ತಿಂಡಿ, ತಿನಿಸುಗಳನ್ನು ಜೊತೆ ಮಾಡಿಕೊಂಡು ಪ್ರಾಣಿಗಳಿಗೆ ಹಂಚುತ್ತಾರೆ.
ರಸ್ತೆಯಲ್ಲಿ ಹೋಗುವಾಗ ನಾಯಿಗಳನ್ನು ಕಂಡರೆ ತಕ್ಷಣ ಗಾಡಿ ನಿಲ್ಲಿಸುವ ಅವರು ಬ್ಯಾಗ್‌ನಲ್ಲಿರುವ ತಿನಿಸು ಹಂಚುತ್ತಾರೆ. ಯಾವುದೇ ಸರ್ಕಲ್‌ಗಳಲ್ಲೂ ಮಲ್ಲೇಶಪ್ಪ ನಿಂತರೂ ನಾಯಿಗಳು ಬರುತ್ತವೆ. ಪ್ರೀತಿಯಿಂದ ನಾಯಿಗಳನ್ನು ಕರೆಯುವ ಕಲೆಯನ್ನು ಅವರು ಕಲಿತಿದ್ದಾರೆ. ಸುತ್ತಲೂ ಹತ್ತಾರು ನಾಯಿಗಳು ಬಂದು ನಿಲ್ಲುತ್ತವೆ. ಸ್ಟೇಡಿಯಂ ರಸ್ತೆ, ಜೋಗಿಮಟ್ಟಿ ರಸ್ತೆಯ ವಿವಿಧೆಡೆ ಹಲವರು ಹಸುಗಳನ್ನು ಸಾಕುತ್ತಾರೆ. ಕೆಲವು ದನಗಳು ಆಹಾರವಿಲ್ಲದೇ ಅಲೆಯುತ್ತವೆ. ಅಂತಹ ದನಗಳಿಗೂ ಮಲ್ಲೇಶಪ್ಪ ಅವರು ಆಹಾರ ಹಂಚುತ್ತಾರೆ.
‘15 ವರ್ಷದ ಹಿಂದೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿಹಾರ ಮಾಡುವಾಗ ನಿತ್ರಾಣ ಸ್ಥಿತಿಯಲ್ಲಿದ್ದ ಕಾಗೆ ನೆಲಕ್ಕೆ ಬಿತ್ತು. ನನಗೆ ಏನು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಪಕ್ಕದಲ್ಲೇ ಬಿದ್ದಿದ್ದ ಬಾಟಲ್‌ನಲ್ಲಿ ಸ್ವಲ್ಪ ನೀರು ಇತ್ತು. ಅದನ್ನು ಕಾಗೆಗೆ ಮೇಲೆ ಸುರಿದೆ, ಸ್ಪಲ್ಪ ಕುಡಿಸಿದೆ. ಇದಾಗ ಒಂದೆರಡು ನಿಮಿಷಕ್ಕೆ ಕಾಗೆ ಹಾರಿ ಹೋಯಿತು. ನಾನು ಅಂದೇ ನಿರ್ಧಾರ ಮಾಡಿ ಪಕ್ಷಿಗಳಿಗೆ ನೀರು ಕೊಡುವ ಕೆಲಸ ಮಾಡಿದೆ. ನಂತರ ಪ್ರಾಣಿಗಳಿಗೂ ಆಹಾರ ಕೊಡುವ ಕಾಯಕ ಆರಂಭಿಸಿದೆ. ಇದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ’ ಎನ್ನುತ್ತಾರೆ ಮಲ್ಲೇಶಪ್ಪ.
76 ವರ್ಷ ವಯಸ್ಸಿನ ಮಲ್ಲೇಶಪ್ಪ ಮೊದಲು ಕಿರಾಣಿ ಅಂಗಡಿ, ಹೋಟೆಲ್ ನಡೆಸುತ್ತಿದ್ದರು. ಈಗ ನಿವೃತ್ತ ಜೀವನ ನಡೆಸುತ್ತಾ ಪ್ರಾಣಿ, ಪಕ್ಷಿಗಳ ಸೇವೆಯಲ್ಲಿದ್ದಾರೆ.
ಕರೆದರೆ ಬರುವ ಕಾಗೆಗಳು
ಪ್ರತಿದಿನ ಬೆಳಿಗ್ಗೆ 7.30ಕ್ಕೆ ಮಲ್ಲೇಶಪ್ಪ ಜಿಲ್ಲಾ ಕ್ರೀಡಾಂಗಣದ ಫುಟ್‌ಬಾಲ್ ಅಂಕಣದ ಬಳಿಗೆ ತಪ್ಪದೇ ಬರುತ್ತಾರೆ. ಗಿಡಗಳ ನಡುವೆ ಅಲ್ಲೊಂದು ತಾಣವಿದ್ದು ನೆಲಹಾಸು ಹಾಸಿದ್ದಾರೆ. ಸುತ್ತಲೂ ಬಾಟಲ್ ತೊಟ್ಟಿ ಇಟ್ಟು ನೀರು ಸಂಗ್ರಹಿಸಿದ್ದಾರೆ. ಅಲ್ಲಿ ಬರುವ ಮಲ್ಲೇಶಪ್ಪ ಅವರು ‘ಬಾ ಬಾ’ ಎಂದು ಕರೆದರೆ ಕಾಗೆಗಳು ಬಂದು ಮುತ್ತಿಕೊಳ್ಳುತ್ತವೆ. ನೆಲ ಹಾಸಿನ ಮೇಲೆ ಅವರು ಬ್ರೆಡ್ ಕೇಕ್ ಕಾಳು ಬೆಲ್ಲ ಬಿಸ್ಕತ್ ಸುರಿಯುತ್ತಾರೆ. ಮಲ್ಲೇಶಪ್ಪ ಅವರು ಕಾಗೆಗಳನ್ನು ಕರೆಯುತ್ತಿದ್ದರೆ ವಾಯುವಿಹಾರಿಗಳು ಕುತೂಹಲದಿಂದ ನೋಡುತ್ತಾರೆ. ‘ತಿಥಿಯಲ್ಲಿ ಕಾಗೆಗಳು ಬಾರದೇ ಗಂಟೆಗಟ್ಟಲೇ ಕಾಡಿಸುತ್ತವೆ. ಆದರೆ ಮಲ್ಲೇಶಪ್ಪ ಕರೆದರೆ ಹೇಗೆ ಬರುತ್ತವೆ ನೋಡಿ’ ಎನ್ನುವ ಮಾತುಗಳು ಸಾಮಾನ್ಯವಾಗಿವೆ. ‘ಶನಿದೇವರ ಸೇವೆ’ ಎಂದೂ ಹಲವರು ಹೇಳುತ್ತಾರೆ. ಕಾಗೆಗಳು ಮಾತ್ರವಲ್ಲದೇ ಗುಬ್ಬಚ್ಚಿ ಕೊಕ್ಕರೆ ಮುಂತಾದ ಪಕ್ಷಿಗಳೂ ಆಹಾರ ಅರಿಸಿ ಬರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.