
ಚಿತ್ರದುರ್ಗ: ಗಣಿಬಾಧಿತ ಪ್ರದೇಶಗಳ ನಿವಾಸಿಗಳಿಗೆ ಗಣಿ ಕಂಪನಿಗಳು ಮೂಲ ಸೌಲಭ್ಯ ಕಲ್ಪಿಸದೆ ವಂಚಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಗಣಿ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೊಳಲ್ಕೆರೆ ತಾಲ್ಲೂಕಿನ ಮದಕರಿಪುರ, ಕಾಗಳಗೆರೆ, ಮುತ್ತುಗದೂರು, ತಣಿಗೆಹಳ್ಳಿ ಗ್ರಾಮಗಳ ನಿವಾಸಿಗಳು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಜತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ಗಣಿ ಕಂಪನಿಗಳು ನಿರಂತರವಾಗಿ ಅದಿರು ಸಾಗಿಸುತ್ತಿರುವುದರಿಂದ ಬೆಳೆಗಳು ನಾಶವಾಗುತ್ತಿವೆ. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿರುವ ಹಣವನ್ನು ಪ್ರಭಾವಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
‘ಇಲ್ಲಿನ ನಿವಾಸಿಗಳಿಗೆ ಮಂಜೂರಾಗಿರುವ ಮನೆಗಳು ಅನ್ಯರ ಪಾಲಾಗುತ್ತಿವೆ. ಆ ಭಾಗದ ಶಾಸಕರು ತಮಗೆ ಬೇಕಾದವರಿಗೆ ಮನೆಗಳನ್ನು ನೀಡಲು ಪಟ್ಟಿ ಮಾಡಿ ಜಿಲ್ಲಾಧಿಕಾರಿಗೆ ಕಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ನಿಜವಾಗಿಯೂ ಮೂಲ ಸೌಲಭ್ಯಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದು ಆಗ್ರಹಿಸಿದರು.
‘ಈ ನೆಲದ ಸಂಪನ್ಮೂಲ ಕೊಳ್ಳೆ ಹೊಡೆಯುತ್ತಿರುವ ಗಣಿ ಮಾಲೀಕರು ಸ್ಥಳೀಯರಿಗೆ ಉದ್ಯೋಗ ನೀಡದೆ ಹೊರ ರಾಜ್ಯಗಳಿಂದ ಕೆಲಸಗಾರರನ್ನು ಕರೆಯಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗಣಿ ಕಂಪನಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗವುದು’ ಎಂದು ಎಚ್ಚರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ, ಮುಖಂಡರಾದ ಜಿ.ಶಿವಣ್ಣ, ರಂಗಣ್ಣ, ಮದನ್, ಹರೀಶ್, ಸಿದ್ದೇಶ್, ಧನುನಾಯ್ಕ, ಅಜ್ಜಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.