ADVERTISEMENT

ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 6:59 IST
Last Updated 15 ಫೆಬ್ರುವರಿ 2026, 6:59 IST
ಚಿತ್ರದುರ್ಗದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ವಿಬಿ–ಜಿ ರಾಮ್‌ ಜೀ ಜಾಗೃತ ಅಭಿಯಾನ
ಚಿತ್ರದುರ್ಗದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ವಿಬಿ–ಜಿ ರಾಮ್‌ ಜೀ ಜಾಗೃತ ಅಭಿಯಾನ   

ಚಿತ್ರದುರ್ಗ: ‘ಕಾಂಗ್ರೆಸ್‌ ನಾಯಕರಿಗೆ ಸುಳ್ಳೇ ಮನೆ ದೇವರು. ಅವರು ಸುಳ್ಳನ್ನು ನೂರು ಬಾರಿ ಹೇಳುವುದರ ಮೂಲಕ ಅದನ್ನು ಸತ್ಯವನ್ನಾಗಿ ಮಾಡುತ್ತಿದ್ದಾರೆ. ಆದರೆ, ಅದು ಎಂದಿಗೂ ಸತ್ಯವಾಗುವುದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಕಿಡಿಕಾರಿದರು.

ನಗರದ ಜಗಳೂರು ಮಹಾಲಿಂಗಪ್ಪ ಕಂಫರ್ಟ್‍ನಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ವಿಬಿ–ಜಿ ರಾಮ್‌ ಜೀ (ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ ಯೋಜನೆ) ಜಾಗೃತ ಅಭಿಯಾನದಲ್ಲಿ ಮಾತನಾಡಿದರು.

‘ನೆಹರು ಕಾಲದಿಂದಲೂ ಅವರು ಸುಳ್ಳನ್ನು ಹೇಳುತ್ತಾ ಜನರನ್ನು ನಂಬಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿ–ಜಿ ರಾಮ್‌ ಜೀ ಬಗ್ಗೆ ರಾಜ್ಯ ಸರ್ಕಾರ ಅಪಪ್ರಚಾರ ಮಾಡುತ್ತಾ ಜನರನ್ನು ನಂಬಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ನಕಲಿ ಗಾಂಧಿ ಹೆಸರಿನಲ್ಲಿ 400ಕ್ಕೂ ಹೆಚ್ಚು ಯೋಜನೆಗಳಿವೆ. ಇದರ ಬಗ್ಗೆ ಯಾರು ಸಹ ಆಲೋಚನೆ ಮಾಡುತ್ತಿಲ್ಲ, ಆದರೆ, ಬಿಜೆಪಿ ಗಾಂಧೀಜಿ ಹೆಸರನ್ನು ತೆಗೆದು ಅಪಮಾನ ಮಾಡಿದೆ ಎಂದು ಎಲ್ಲಾ ಕಡೆ ಬೊಬ್ಬೆ ಹೊಡೆಯುತ್ತಿದ್ದಾರೆ. ಗಾಂಧೀಜಿ ಸಮಾಧಿಯ ಮೇಲೆ ಹೇ.. ರಾಮ ಎಂದು ಬರೆದಿದೆ, ಅಲ್ಲದೆ ಅವರು ಸಾಯುವ ಕ್ಷಣದಲ್ಲಿ ರಾಮ ಎಂದು ಹೇಳುತ್ತಾ ಪ್ರಾಣ ಬಿಟ್ಟಿದ್ದಾರೆ. ಗಾಂಧೀಜಿ ಅವರಿಗೆ ರಾಮನ ಮೇಲೆ ಇದ್ದ ನಂಬಿಕೆ ಕಾಂಗ್ರೆಸ್‌ ಪಕ್ಷದ ಮುಖಂಡರಿಗೆ ಇಲ್ಲವಾಗಿದೆ’ ಎಂದರು.

‘ವಿಬಿ–ಜಿ ರಾಮ್‌ ಜೀ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶಿವರಾತ್ರಿ ಬಳಿಕ ಯುಗಾದಿ ಬರುವುದರೊಳಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷದಿಂದ ಪಾದಯಾತ್ರೆ ನಡೆಸುವ ಮೂಲಕ ಜನತೆಗೆ ಸತ್ಯ ಏನು ಎನ್ನುವುದರ ಬಗ್ಗೆ ಅರಿವು ಮೂಡಿಸಬೇಕಿದೆ. ಹೊಸ ಕಾಯ್ದೆಯಿಂದ ಕೂಲಿ ಕಾರ್ಮಿಕರಿಗೆ ಉಪಯೋಗವಾಗಿದೆ. ಒಂದು ವಾರದಲ್ಲಿ ಕೂಲಿ ಹಣ ಬರುತ್ತದೆ. ಒಂದು ವೇಳೆ 15 ದಿನವಾದರೂ ಸಹ ಹಣ ಬರದಿದ್ದರೆ ಅದಕ್ಕೆ ಬಡ್ಡಿಯನ್ನು ಸೇರಿಸಿ ಕೂಡವಂತೆ ಕಾಯ್ದೆಯಲ್ಲಿ ಇದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿ–ಜಿ ರಾಮ್‌ ಜೀ ಬಗ್ಗೆ ರಾಜ್ಯ ಸರ್ಕಾರ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದೆ. ಗ್ರಾಮೀಣ ಜನರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ನೀಡುವುದರ ಮೂಲಕ ಕಾಂಗ್ರೆಸ್‌ ಅಪಪ್ರಚಾರಕ್ಕೆ ತಿರುಗೇಟು ನೀಡಬೇಕು’ ಎಂದು ಮಾಜಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

‘ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಉಪಯೋಗವಾಗಲಿ ಎಂದು ಮನರೇಗಾ ಯೋಜನೆಯಲ್ಲಿ ತಿದ್ದುಪಡಿ ತಂದು ಹೊಸ ರೂಪದೊಂದಿಗೆ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿದೆ. ಈ ಮೂಲಕ ಮನರೇಗಾದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದು ಕಾಂಗ್ರೆಸ್‌ ನಾಯಕರಿಗೆ ಸಮಸ್ಯೆಯಾಗಿದೆ. ಆ ಕಾರಣಕ್ಕೆ ಗಾಂಧೀಜಿ ಹೆಸರು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮನರೇಗಾದಲ್ಲಿ ಆಗುತ್ತಿದ್ದ ಹಣದ ಸೋರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಮ ರೂಪಿಸಿ ಹೊಸ ಕಾಯ್ದೆ ಜಾರಿಗೊಳಿಸಿದೆ. ಇದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ’ ಎಂದು ದೂರಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಮುಖಂಡರಾದ ಎ. ಮುರುಳಿ, ಎನ್‌.ಆರ್‌. ಲಕ್ಷ್ಮಿಕಾಂತ್‌, ವೆಂಕಟೇಶ್‌ ಯಾದವ್‌, ಅನಿಲ್‌, ಮಂಜುನಾಥ್‌ ಇದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ ಹಿಂದಿನ ಈ ಯೋಜನೆಯಲ್ಲಿ ಆದ ಭ್ರಷ್ಟಾಚಾರದಲ್ಲಿ ಚಿತ್ರದುರ್ಗ ಮೂರನೇ ಸ್ಥಾನದಲ್ಲಿತ್ತು. ಆಗ ಜಿಲ್ಲೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು ಬಿಜೆಪಿ ಸರ್ಕಾರ ಬಂದ ಮೇಲೆ ಇದನ್ನು ಸರಿಪಡಿಸಿತು.
ಕೆ.ಎಸ್‌.ನವೀನ್‌ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.