ADVERTISEMENT

ಚಿತ್ರದುರ್ಗ | ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು: ಸಂಸದ ಎ. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಮೇ 2020, 14:47 IST
Last Updated 23 ಮೇ 2020, 14:47 IST
ಎ. ನಾರಾಯಣಸ್ವಾಮಿ.
ಎ. ನಾರಾಯಣಸ್ವಾಮಿ.   

ಚಿತ್ರದುರ್ಗ: ‘ನೇರ ರೈಲು ಮಾರ್ಗ, ನೀರಾವರಿ, ವೈದ್ಯಕೀಯ ಕಾಲೇಜು, ಕೈಗಾರಿಕಾ ಬೆಳವಣಿಗೆ, ಪ್ರವಾಸೋದ್ಯಮ ಸೇರಿ ಕೋಟೆನಾಡಿನ ಸಮಗ್ರ ಅಭಿವೃದ್ಧಿಯ ಗುರಿ ಹೊಂದಲಾಗಿದ್ದು, ಅದಕ್ಕಾಗಿ 1 ವರ್ಷದಿಂದ ಶ್ರಮಿಸುತ್ತಿದ್ದೇನೆ’ ಎಂದು ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.

ಸಂಸದರಾಗಿ ಆಯ್ಕೆಯಾಗಿ 1 ವರ್ಷವಾದ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಆಗಬೇಕು ಎಂದು ಸಂಸತ್ತಿನಲ್ಲೂ ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ. ನೇರ ರೈಲು ಮಾರ್ಗಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ 50:50 ಅನುಪಾತದ ಬದಲು ಸಂಪೂರ್ಣ ವೆಚ್ಚವನ್ನು ರೈಲ್ವೇ ಇಲಾಖೆಯೇ ವಹಿಸಿಕೊಂಡು ಕಾಮಗಾರಿ ಆರಂಭಿಸಬೇಕು ಎಂದು ಸಚಿವರಲ್ಲಿ ಕೋರಿದ್ದೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸಚಿವ ಸಿ.ಟಿ. ರವಿ ಅವರ ಜತೆ, ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲು ಸಚಿವ ಜಗದೀಶ್ ಶೆಟ್ಟರ್ ಅವರ ಜತೆ ಚರ್ಚಿಸಿದ್ದೇನೆ. ಜತೆಗೆ ಸುಗಮ ರೈಲು ಮಾರ್ಗವಾದರೆ ಕೈಗಾರಿಕಾ ವಲಯ ಬೆಳವಣಿಗೆ ಕಾಣಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ’ ಎಂದು ತಿಳಿಸಿದರು.

ADVERTISEMENT

‘ಕೋವಿಡ್-19 ಕಾರಣಕ್ಕೆ ಸಂಸದರ ನಿಧಿ ಇಲ್ಲವೆಂಬ ಚಿಂತೆ ಇಲ್ಲ. ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ತುಂಬಾ ಆತ್ಮೀಯರು. ಅದಕ್ಕಾಗಿ ವಿವಿಧ ಭವನ ಮತ್ತಿತರೆ ಕಾಮಗಾರಿ ಕೈಗೊಳ್ಳಲು ₹ 50 ಕೋಟಿ ಅನುದಾನ ಕೇಳಿದ್ದೆ. ಅದು ಮಂಜೂರಾಗಿದೆ. ನಿಂತಿದ್ದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಚಾಲನೆ ನೀಡಲಾಗಿದ್ದು, 5 ವರ್ಷದಲ್ಲಿ 240 ಕಿ.ಮೀ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಹಿರಿಯೂರು ಹುಳಿಯಾರ್ ರಸ್ತೆ ಅಭಿವೃದ್ಧಿಗೂ ಒತ್ತು ನೀಡಿದ್ದೇನೆ’ ಎಂದರು.

‘ಜಿಲ್ಲೆಯಲ್ಲಿರುವ ಸೋಲಾರ್, ಗಣಿಗಾರಿಕೆ ಸಂಸ್ಥೆಗಳು, ವಿದ್ಯುತ್ ತಯಾರಿಸುವ ಪವನ ಯಂತ್ರಗಳು ಸೇರಿ ಹಲವು ಸಂಸ್ಥೆಗಳಿಂದ ಸಿಎಸ್‌ಆರ್ ನಿಧಿ ಸಮರ್ಪಕವಾಗಿ ಬಳಕೆ ಆಗುತ್ತಿರಲಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿದ್ದು, ವಿವಿಧ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ₹ 15 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಒಪ್ಪಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.