ADVERTISEMENT

ಬನ್ನಿ ನಗರಸಭೆ ಆಸ್ತಿ ಉಳಿಸೋಣ: ‌ಶಾಸಕರ ಬೆಂಬಲಿಗರಿಗೆ ಬಿ.ಕಾಂತರಾಜ್‌ ಆಹ್ವಾನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:26 IST
Last Updated 26 ಜನವರಿ 2023, 5:26 IST
ಬಿ.ಕಾಂತರಾಜ್‌
ಬಿ.ಕಾಂತರಾಜ್‌   

ಚಿತ್ರದುರ್ಗ: ‘ನಗರಸಭೆಯ 13ನೇ ವಾರ್ಡ್‌ ವ್ಯಾಪ್ತಿಯ ಪಂಪ್‌ಹೌಸ್‌ ಕಬಳಿಕೆಯಾಗಿರುವುದು ನಿಜ. ಒತ್ತುವರಿ ತೆರವುಗೊಳಿಸಿ ನಗರಸಭೆಯ ಆಸ್ತಿ ರಕ್ಷಣೆ ಮಾಡೋಣ ಬನ್ನಿ’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರ ಬೆಂಬಲಿಗರಿಗೆ ಜೆಡಿಎಸ್‌ ಮುಖಂಡ ಬಿ.ಕಾಂತರಾಜ್‌ ಆಹ್ವಾನ ನೀಡಿದರು.

‘ನಗರಸಭೆಯ ಈ ಆಸ್ತಿಯನ್ನು 1998ರಲ್ಲಿ ಕಬಳಿಕೆ ಮಾಡಲಾಗಿದೆ. ಆಗ ನಾನು ನಗರಸಭೆ ಸದಸ್ಯ ಕೂಡ ಆಗಿರಲಿಲ್ಲ. ಸಾರ್ವಜನಿಕ ಆಸ್ತಿಯನ್ನು ಯಾರು ಕಬಳಿಸಿದ್ದಾರೆ ಎಂಬುದು ಕ್ಷೇತ್ರದ ಜನರಿಗೆ ತಿಳಿಯಬೇಕಿದೆ. ಎರಡು ದಿನಗಳಲ್ಲಿ ನೀವು ಈ ಆಸ್ತಿ ರಕ್ಷಣೆಗೆ ಮುಂದಾಗದಿದ್ದರೆ ಜಿಲ್ಲಾಧಿಕಾರಿ ಗಮನ ಸೆಳೆಯಲಾಗುವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜನಪ್ರತಿನಿಧಿಯೊಬ್ಬರು ಉದ್ಯಾನ ಒತ್ತುವರಿ ಮಾಡಿಕೊಂಡ ಸಂಗತಿ ನಗರಸಭೆ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಗೊತ್ತಾಯಿತು. ಕ್ಷೇತ್ರದ ಶಾಸಕ, ಸಂಸದ ಹಾಗೂ ಸರ್ಕಾರವನ್ನು ಎದುರು ಹಾಕಿಕೊಂಡು ಸಾರ್ವಜನಿಕ ಆಸ್ತಿ ರಕ್ಷಣೆ ಮಾಡಿದ್ದೇನೆ. ಸಾರ್ವಜನಿಕ ಆಸ್ತಿಯನ್ನು ಕಬಳಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯ. ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹಾಗೂ ನಗರಸಭೆ ಸದಸ್ಯ ಶ್ರೀನಿವಾಸ್‌ ಪ್ರತಿನಿಧಿಸುವ ಬಿಜೆಪಿಯೇ ಅಧಿಕಾರದಲ್ಲಿದೆ. ಏಕೆ ಈವರೆಗೆ ಒತ್ತುವರಿ ತೆರವಿಗೆ ಮುಂದಾಗಲಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಶಿವ ಚಿತ್ರಕ್ಕೆ ಸ್ನೇಹಿತರೊಬ್ಬರು ಬಂಡವಾಳ ಹೂಡಿದ್ದರು. ಒಡನಾಟದ ಕಾರಣಕ್ಕೆ ನಿರ್ಮಾಪಕರಲ್ಲಿ ನನ್ನ ಹೆಸರೂ ಸೇರಿಸಿದ್ದರು. ಜೀವನದಲ್ಲಿ ಈವರೆಗೆ ಯಾವುದೇ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿಲ್ಲ. ಅಷ್ಟಕ್ಕೂ ಸತ್ಯ ತಿಳಿಯಬೇಕಾದರೆ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಮಾಪಕರ ದಾಖಲೆ ಪರಿಶೀಲಿಸಿ. ಸುಳ್ಳು ಹೇಳಿ ಮತದಾರರ ದಿಕ್ಕು ತಪ್ಪಿಸಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.