ಚಿತ್ರದುರ್ಗ: ‘ಬಸವಾದಿ ಶಿವಶರಣರ ಗುಣಸ್ವಭಾವಗಳು ಹಾಗೂ ಅವರ ಘನ ವ್ಯಕ್ತಿತ್ವವು ಅಥಣಿ ಮುರುಘೇಂದ್ರ ಶಿವಯೋಗಿಗಳವರಲ್ಲಿ ಅಡಕವಾಗಿತ್ತು. ಆ ಶರಣರ ಇಡೀ ಬದುಕನ್ನು ಶಿವಯೋಗಿಗಳವರು ಅನುಸರಿಸಿ ನಡೆದವರಾಗಿದ್ದರು’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮರುಘಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ190ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಗುರು, ಜಗದ್ಗುರು ಆಗುವುದು ಬಹುಶಃ ಸುಲಭದ ಕೆಲಸ. ಆದರೆ ಶಿವಯೋಗಿಯಾಗುವುದು ಕಠಿಣದ ಹಾದಿ. ಅದು ತ್ಯಾಗದ ಸ್ಥಾನ. ಅಂತಹ ಸವಾಲನ್ನು ಎದುರಿಸಿ ಆ ಸ್ಥಾನ ಪಡೆದಿದ್ದರು’ ಎಂದರು.
‘ಪತ್ರಿ-ಪುಷ್ಪಗಳನ್ನು ಕೀಳಬಾರದು. ಅದಕ್ಕೂ ಜೀವವಿದೆ. ಆದ್ದರಿಂದ ಅವು ಬಿದ್ದಾಗ ತಂದು ಶಿವನ ಮುಡಿಗೇರಿಸುವುದು ಅಂದರೆ ಯಾರಿಗೂ ನೋವುಂಟು ಮಾಡಬಾರದೆಂಬ ಮಾನವೀಯ ಗುಣ ಅವರಲ್ಲಿತ್ತು’ ಎಂದು ಸ್ಮರಿಸಿದರು.
‘ಮುರುಘೇಂದ್ರ ಶಿವಯೋಗಿಗಳ ಚಾರಿತ್ರ್ಯವನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ಅಂತಹ ಶಿವಯೋಗ ಸಾಧನೆಯ ಮೂಲಕ ಎತ್ತರಕ್ಕೆ ಹೋಗಿದ್ದರು’ ಎಂದು ಬಸವ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.
ಎಸ್‌ಜೆಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ನಾಗರಾಜ್, ಶಿಕ್ಷಕರಾದ ಕೊಟ್ರಮ್ಮ ಗಡ್ಡೆಪ್ಪನವರ್, ಗಿರೀಶಾಚಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.