ನಾಯಕನಹಟ್ಟಿ: ಸಮೀಪದ ಮನುಮೈನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸುವಾಗ ಕುಕ್ಕರ್ ಸಿಡಿದು ಮುಖ್ಯ ಅಡುಗೆ ತಯಾರಕಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ನೀರುಬಾಯಿ (45) ಗಾಯಗೊಂಡವರು.
ಘಟನೆ ವಿವರ: ಮನುಮೈನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 173 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬುಧವಾರ ಎಂದಿನಂತೆ ಶಾಲೆಯ ಹಿರಿಯ ಅಡುಗೆ ತಯಾರಕಿ ನೀರುಬಾಯಿ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸಲು ಮುಂದಾಗಿದ್ದರು.
ಕುಕ್ಕರ್‌ನಲ್ಲಿ ಬೇಳೆಕಾಳುಗಳನ್ನು ಬೇಯಿಸಲು ಇಟ್ಟಿದ್ದರು. ತುಂಬ ಹೊತ್ತಾದರೂ ಕುಕ್ಕರ್ ಸೀಟಿ ಹೊಡೆಯದಿರುವುದನ್ನು ಗಮನಿಸಿದ ನೀರುಬಾಯಿ ಅದರ ಲೆಡ್ ತೆರೆದಿದ್ದಾರೆ. ತಕ್ಷಣವೇ ಕುಕ್ಕರ್ ಸ್ಪೋಟಗೊಂಡಿದೆ. ಅವರ ಎದೆ, ಕೈಗಳು ಸೇರಿ ದೇಹದ ಹಲವು ಭಾಗಗಳಲ್ಲಿ ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿವೆ. ತಕ್ಷಣವೇ ಶಾಲೆಯ ಮುಖ್ಯಶಿಕ್ಷಕ ವಿಜಯ್ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮರಳಿ ಶಾಲೆಗೆ ಕರೆತಂದಿದ್ದಾರೆ. ನಂತರ ನೀರುಬಾಯಿ ಅವರ ಪತಿ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ನೀರುಬಾಯಿ 20 ವರ್ಷಗಳಿಂದ ಶಾಲೆಯಲ್ಲಿ ಹಿರಿಯ ಅಡುಗೆ ತಯಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮೂವರು ಅಡುಗೆ ತಯಾರಕರಿದ್ದು, ಬುಧವಾರ ಇಬ್ಬರು ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.