ಹೊಸದುರ್ಗ: ಎಸ್.ನಿಜಲಿಂಗಪ್ಪ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಮೇ 14ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ತಿಳಿಸಿದರು.
ಪಟ್ಟಣದ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮಾನ ಮನಸ್ಕರು ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದರು. ಪರಿಪೂರ್ಣ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಸುಮಾರು 60ರಿಂದ 70 ಗ್ರಾಮಗಳ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಡಿಜಿಟಲ್ ತರಗತಿಗಳನ್ನು ಆರಂಭಿಸಲಾಗಿದ್ದು, ನುರಿತ ಶಿಕ್ಷಕರಿದ್ದಾರೆ. ಅರಳಿಹಟ್ಟಿ ಗೇಟ್ ಸಮೀಪ ಐ.ಸಿ.ಎಸ್.ಇ ಪಠ್ಯಕ್ರಮದ ಶಾಲೆ ಆರಂಭಿಸುವ ಉದ್ದೇಶವಿದೆ ಎಂದರು.
ಪಿಯುಸಿ ಹಾಗೂ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ₹ 6 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಇಷ್ಟಲಿಂಗ ಪೂಜೆ ನಡೆಯಲಿದೆ. ಬಾಳೆಹೊನ್ನೂರು ಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಹುಣಸಘಟ್ಟ ಗುರುಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು.
ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜು ನೂತನ ಕಟ್ಟಡದ ಲೋಕಾರ್ಪಣೆಯನ್ನು ಶಾಸಕ ಬಿ.ಜಿ. ಗೋವಿಂದಪ್ಪ ನೇರವೇರಿಸುವರು. ಎಂ.ಪಿ. ಪ್ರಕಾಶ್ ಪ್ರೌಢಶಾಲಾ ವಿಭಾಗದ ನೂತನ ಕಟ್ಟಡವನ್ನು ಶಾಸಕರಾದ ಲತಾ ಮಲ್ಲಿಕಾರ್ಜುನ್, ವಿಜಯಾನಂದ ಎಸ್. ಕಾಶಪ್ಪ ಉದ್ಘಾಟಿಸುವರು. ಸಂಸದ ಗೋವಿಂದ ಕಾರಜೋಳ ಕಾರ್ಯಕ್ರಮ ಉದ್ಘಾಟಿಸುವರು. ಎಸ್‌ಎನ್ಇಆರ್‌ಡಿ ಟ್ರಸ್ಟ್ ಅಧ್ಯಕ್ಷ ಎಂ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸುವರು. ನಿರ್ದೇಶಕ ಎಂ.ಬಿ.ತಿಪ್ಪೇಸ್ವಾಮಿ, ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸುವರು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.