ADVERTISEMENT

ಚಿತ್ರದುರ್ಗ: ಚಂದ್ರದರ್ಶನದಿಂದ ಪುಳಕಗೊಂಡ ಜನರು

ಎರಡು ದಿನ ಹಬ್ಬದ ಸಂಭ್ರಮ, ಕುಟುಂಬದ ಜತೆ ಕಾಲಕಳೆದ ಜನರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 6:03 IST
Last Updated 24 ಮಾರ್ಚ್ 2023, 6:03 IST
ಚಿತ್ರದುರ್ಗದಲ್ಲಿ ಯುಗಾದಿ ಆಚರಿಸಿದ ಜನರ ಗುರುವಾರ ಸಂಜೆ ಚಂದ್ರದರ್ಶನ ಮಾಡಿ ಪುಳಕಗೊಂಡರು.
ಚಿತ್ರದುರ್ಗದಲ್ಲಿ ಯುಗಾದಿ ಆಚರಿಸಿದ ಜನರ ಗುರುವಾರ ಸಂಜೆ ಚಂದ್ರದರ್ಶನ ಮಾಡಿ ಪುಳಕಗೊಂಡರು.   

ಚಿತ್ರದುರ್ಗ: ಶೋಭಕೃತ್‌ ಸಂವತ್ಸರದ ‘ಯುಗಾದಿ’ ಹಬ್ಬವನ್ನು ಕೋಟೆನಾಡಿನ ಜನರು ಎರಡು ದಿನ ಸಡಗರದಿಂದ ಆಚರಿಸಿದರು. ಹಬ್ಬದಲ್ಲಿ ಕುಟುಂಬದ ಜತೆ ಕಾಲಕಳೆದ ಜನರು, ಗುರುವಾರ ಸಂಜೆ ಆಗಸದಲ್ಲಿ ಚಂದ್ರನನ್ನು ಕಣ್ತುಂಬಿಕೊಂಡರು.

ಬುಧವಾರ ಮುಂಜಾನೆಯೇ ಮನೆಗಳ ಆವರಣವನ್ನು ಶುಭ್ರಗೊಳಿಸಿ ಬಣ್ಣದ ರಂಗೋಲಿ ಹಾಕಿ ಅಲಂಕಾರಗೊಳಿಸಿದರು. ಬಳಿಕ ಮನೆಯ ಮುಂಬಾಗಿಲು, ದೇವರ ಮನೆ ಬಾಗಿಲಿಗೆ ತಳಿರು ತೋರಣ ಕಟ್ಟಿ ಹೂವಿನ ಹಾರಗಳನ್ನು ಹಾಕಿದರು. ಎಣ್ಣೆ ನೀರಿನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಸ್ವಾಗತಿಸಿದರು.

ಗುರು ಹಿರಿಯರ ಮಾರ್ಗದರ್ಶನದಲ್ಲಿ ಮನೆಯಲ್ಲಿ ಪೂಜಾ ಕಾರ್ಯಗಳು ನೆರವೇರಿದವು. ಬಹುತೇಕ ಮನೆಗಳಲ್ಲಿ ಮುಂಜಾನೆಯಿಂದ ಪ್ರಾರಂಭವಾದ ಪೂಜಾ ಕಾರ್ಯಗಳು ಮಧ್ಯಾಹ್ನ ಸಮೀಪಿಸುವ ಹೊತ್ತಿಗೆ ಪೂರ್ಣಗೊಂಡವು. ದೇವರಿಗೆ ಹಣ್ಣು ಹಾಗೂ ಬೇವು–ಬೆಲ್ಲದ ನೈವೇದ್ಯ ಅರ್ಪಿಸಿದರು. ಬಳಿಕ ತಾವು
ಬೇವು-ಬೆಲ್ಲವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಶುಭಾಶಯ ವಿನಿಮಯ
ಮಾಡಿಕೊಂಡರು.

ADVERTISEMENT

ಗುರುವಾರ ಸಂಜೆ ಜನರು ಚಂದ್ರ ದರ್ಶನಕ್ಕೆ ಸಿದ್ಧತೆ ನಡೆಸಿದರು. ಹೊಸ ಬಟ್ಟೆ ತೊಟ್ಟು ಮನೆಗಳ ಅಂಗಳಕ್ಕೆ ಆಗಮಿಸಿದವರ ಚಿತ್ತ ಆಕಾಶದತ್ತ ಹೊರಳಿತು. ಮನೆಗಳ ಮಹಡಿ ಮೇಲೆ ನಿಂತವರು ಚಂದ್ರನ ದರ್ಶನಕ್ಕೆ ಕುತೂಹಲದಿಂದ ಆಗಸದತ್ತ ಮುಖ ಮಾಡಿದ್ದರು. ಆಗಸದಲ್ಲಿ ತಿಳಿಯಾಗಿ ಚಂದ್ರನ ದರ್ಶನವಾಗುತ್ತಿದ್ದಂತೆ ನಿಂತ ಜಾಗದಲ್ಲೇ ಭಕ್ತಿಯಿಂದ ನಮಸ್ಕಾರ ಮಾಡಿದರು. ಬಳಿಕ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಪೋಷಕರು ಮತ್ತು ಗುರು-ಹಿರಿಯರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು ಪುನೀತರಾದರು.

ಚಂದ್ರ ದರ್ಶನದ ಬಳಿಕ ನಗರದ ನೀಲಕಂಠೇಶ್ವರ, ಬರಗೇರಮ್ಮ, ಕಣಿವೆ ಮಾರಮ್ಮ, ಏಕನಾಥೇಶ್ವರಿ, ಉತ್ಸವಾಂಬ, ಕೋಟೆ ಗಣೇಶ ಸೇರಿ ಹಲವು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ದೇವಸ್ಥಾನಗಳ ವಿಶೇಷ ಅಲಂಕಾರಗಳು ಭಕ್ತರ ಗಮನ ಸೆಳೆದವು.

‌‌ತಾಲ್ಲೂಕಿನ ಗೋನೂರು ಸಮೀಪದಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಕೇಂದ್ರದಲ್ಲಿನ ನಿರಾಶ್ರಿತರು ಬುಧವಾರ ಬೆಳಿಗ್ಗೆ ಎಣ್ಣೆ ನೀರಿನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಆಚರಿಸಿದರು. ಹಬ್ಬದ ಅಂಗವಾಗಿ ಕೇಂದ್ರದಲ್ಲಿ ಬೇವು ಬೆಲ್ಲ, ಹೋಳಿಗೆ ಸೇರಿದಂತೆ ವಿಶೇಷ ಖಾದ್ಯಗಳನ್ನು ಕೇಂದ್ರದ ಅಧೀಕ್ಷಕ ಎಂ. ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಳಿಸಲಾಗಿತ್ತು. ಪ್ರತಿಯೊಬ್ಬರೂ ಸಿಹಿ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.