ADVERTISEMENT

ಇಂಧನ ಸಚಿವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ

ಕೃಷಿ ಪಂಪ್‌ಸೆಟ್‌ಗೆ ಸ್ಮಾರ್ಟ್‌ ಕಾರ್ಡ್, ಡಿಜಿಟಲ್‌ ಮೀಟರ್‌ ಅಳವಡಿಕೆಗೆ ಶುಲ್ಕ ನಿಗದಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:33 IST
Last Updated 15 ಮೇ 2025, 14:33 IST
ಚಿತ್ರದುರ್ಗದ ಬೆಸ್ಕಾಂ ಕಚೇರಿ ಎದುರು ರಾಜ್ಯ ರೈತಸಂಘ ಹಾಗೂ ಹಸಿರಸೇನೆ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು
ಚಿತ್ರದುರ್ಗದ ಬೆಸ್ಕಾಂ ಕಚೇರಿ ಎದುರು ರಾಜ್ಯ ರೈತಸಂಘ ಹಾಗೂ ಹಸಿರಸೇನೆ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ ಕಾರ್ಡ್‌, ಡಿಜಿಟಲ್‌ ಮೀಟರ್‌ ಅಳವಡಿಕೆಗೆ ₹ 10,000 ಶುಲ್ಕ ನಿಗದಿ ಮಾಡಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಅಣಕು ಶವಯಾತ್ರೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಬೆಸ್ಕಾಂ ಕಚೇರಿವರೆಗೂ ಮೆರವಣಿಗೆ ನಡೆಸಿದ ಕಾರ್ಯಕರ್ತರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಘೋಷಣೆ ಕೂಗಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿವೆ. ಹೀಗಾಗಿ ರೈತರು ಕೃಷಿಗೆ ವಿದ್ಯುತ್‌ ಸಂಪರ್ಕ ಪಡೆಯಬೇಕಾದರೆ ಅಪಾರ ಶುಲ್ಕ ಪಾವತಿ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಕ್ರಮ ಸಕ್ರಮ ಯೋಜನೆಯಡಿ ವಿದ್ಯುತ್ ಪರಿಕರಗಳನ್ನು ಈ ಹಿಂದೆ ಉಚಿತವಾಗಿ ನೀಡುತ್ತಿದ್ದರು. ಈಗ ಶುಲ್ಕ ನಿಗದಿ ಮಾಡಿರುವುದು ಖಂಡನೀಯ. ಈ ಹಿಂದಿನಂತೆಯೇ ರೈತರಿಗೆ ಉಚಿತವಾಗಿ ವಿದ್ಯುತ್‌ ಸರಬರಾಜು ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು. ಬೆಸ್ಕಾಂ ಸಿಬ್ಬಂದಿ ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಮಾಡುತ್ತಿಲ್ಲ. ಮುಂದೆ ಶುಲ್ಕ ವಸೂಲಿ ಮಾಡಿದರೆ ರೈತರು ತೀವ್ರ ನಷ್ಟಕ್ಕೆ ಒಳಗಾಗುತ್ತಾರೆ. ಸರ್ಕಾರ ರೈತರ ಹೆಸರಲ್ಲಿ ಮರಣಶಾಸನ ಬರೆಯುತ್ತಿದೆ. ಹವಾಮಾನ್ಯ ವೈಪರೀತ್ಯದಿಂದ ಸದಾ ನಷ್ಟದ ಸುಳಿಯಲ್ಲಿರುವ ರೈತನಿಗೆ ವಿದ್ಯುತ್‌ ಶುಲ್ಕದ ಹೆಸರಿನಲ್ಲಿ ಬರೆ ಎಳೆಯಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಜಮೀನಿನಲ್ಲಿ 3–4 ಕೊಳವೆಬಾವಿಗಳು ಇವೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ರೈತರು ಒಂದಕ್ಕಿಂತ ಹೆಚ್ಚು ಕೊಳವೆಬಾವಿ ಕೊರೆಸುತ್ತಾರೆ. ಈಗ ಪ್ರತಿ ಬಾವಿಗೂ ನೀಡಿರುವ ವಿದ್ಯುತ್‌ಗೆ ಶುಲ್ಕ ವಸೂಲಿ ಮಾಡಿದರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ವಿದ್ಯುತ್‌ ಸಂಪರ್ಕಕ್ಕೆ ಸರ್ಕಾರ ವಿದ್ಯುತ್‌ ಪರಿವರ್ತಕ ಮಾತ್ರ ನೀಡುತ್ತಿದೆ. ಕಂಬ ಮತ್ತು ತಂತಿಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವೇ ಇಲ್ಲ. ಎಲ್ಲಾ ಪರಿಕರಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಸೌರಶಕ್ತಿ ಬಳಸಿ ಸಾವಿರ ಅಡಿಯ ಕೊಳವೆಬಾವಿಯಿಂದ ನೀರೆತ್ತಲು ಸಾಧ್ಯವೇ? ಸರ್ಕಾರದ ನೀತಿಗಳು ಅವೈಜ್ಞಾನಿಕವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜಮೀನಿನಲ್ಲಿ ವಾಸವಾಗಿರುವ ರೈತರ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು. ವಿದ್ಯಾರ್ಥಿಗಳಿಗೆ, ಹೈನುಗಾರಿಕೆ ಮಾಡುವವರಿಗೆ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಸಮರ್ಪಕ ವಿದ್ಯುತ್‌ ನೀಡಬೇಕು. ಸರಿಯಾಗಿ ವಿದ್ಯುತ್‌ ಪೂರೈಕೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

11 ಕೆ.ವಿ ಮತ್ತು ಎಲ್.ಟಿ. ಲೈನ್‌ಗಳಲ್ಲಿ ಬೆಳೆದಿರುವ ಗಿಡಗಳನ್ನು 15 ವರ್ಷಗಳಿಂದ ಬೆಸ್ಕಾಂ ಸಿಬ್ಬಂದಿ ತೆರವು ಮಾಡಿಲ್ಲ. ಮರಗಳು ಬೆಳೆದಿದ್ದು, ವಿದ್ಯುತ್ ತಾಗಿ  ತಂತಿಗಳು ಸುಟ್ಟುಹೋಗುತ್ತಿವೆ. ಇದರಿಂದ ಕೃಷಿ ಪಂಪ್‌ಸೆಟ್, ಟಿ.ಸಿ.ಮೋಟಾರ್, ಕೇಬಲ್‌ಗಳು ಸುಟ್ಟು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಶೀಘ್ರ ಗಿಡಗಳನ್ನು ತೆರವುಗೊಳಿಸಿ ರೈತರ ಬೆಳೆ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ್‌, ತಾಲ್ಲೂಕು ಘಟಕದ ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲೋಲಾಕ್ಷಮ್ಮ, ಮುಖಂಡರಾದ ಓಂಕಾರಪ್ಪ, ಸಿ.ಡಿ.ನಿಜಲಿಂಗಪ್ಪ, ನವೀನ್‌, ತಿಪ್ಪೇಸ್ವಾಮಿ, ನಾಗರಾಜ್‌, ಶ್ರೀನಿವಾಸ್‌, ರಂಗಸ್ವಾಮಿ, ಪವಿತ್ರಾ, ಜಯಲಕ್ಷ್ಮಿ, ಮಂಜುಳಾ ಇದ್ದರು.

ಪ್ರತಿಭಟನಕಾರರು ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರ ಅಣಕು ಶವಯಾತ್ರೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.