ADVERTISEMENT

ಚಿತ್ರದುರ್ಗ | ಶಿಥಿಲ ಕಟ್ಟಡದಲ್ಲೇ ಪಿಯುಸಿ ಪರೀಕ್ಷಾ ಕೇಂದ್ರ!

ದುರ್ವಾಸನೆ ನಡುವೆಯೇ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಕೆ.ಪಿ.ಓಂಕಾರಮೂರ್ತಿ
Published 1 ಮಾರ್ಚ್ 2026, 6:14 IST
Last Updated 1 ಮಾರ್ಚ್ 2026, 6:14 IST
ಶಿಥಿಲಗೊಂಡ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಕೊಠಡಿ
ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ
ಶಿಥಿಲಗೊಂಡ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಕೊಠಡಿ ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ   

ಚಿತ್ರದುರ್ಗ: ಕಿಟಕಗಳ ಮುರಿದ ಬಾಗಿಲು, ಅಲುಗಾಡುವ ಬೆಂಚ್‌, ಶಿಥಿಲಗೊಂಡ ಗೋಡೆ, ಕಿರಿದಾದ ಕೊಠಡಿಗಳು, ವಿದ್ಯುತ್‌ ದೀಪ, ಫ್ಯಾನ್‌ರಹಿತ ಕೊಠಡಿಗಳು, ಐದಾರು ಕೊಠಡಿಗಳಲ್ಲಿನ ಪರೀಕ್ಷಾರ್ಥಿಗಳಿಗೆ ಕುಡಿಯಲು ಒಂದೇ ನೀರಿನ ಕ್ಯಾನ್‌.. ಒಂದೇ ಲೋಟ... ಇದು ನಗರದ ಹೃದಯ ಭಾಗದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷಾ ಕೇಂದ್ರದ ದುಃಸ್ಥಿತಿಯ ನೋಟ.

ಸಮಸ್ಯೆಗಳ ಆಗರದಂತಿರುವ ಕಾಲೇಜಿನ ಮುಖ್ಯ ಕಟ್ಟಡದಲ್ಲೇ ವಿದ್ಯಾರ್ಥಿಗಳು ಶನಿವಾರ ಆತಂಕದಲ್ಲಿ ಪರೀಕ್ಷೆ ಬರೆದರು. ನಗರದಲ್ಲಿ 9 ಕೇಂದ್ರಗಳಿದ್ದು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹೊರತುಪಡಿಸಿದರೆ ಈ ಕೇಂದ್ರದಲ್ಲೇ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಕನ್ನಡ ಭಾಷಾ ಪರೀಕ್ಷೆ ಬರೆಯಬೇಕಿದ್ದ 637 ವಿದ್ಯಾರ್ಥಿಗಳ ಪೈಕಿ 10 ಜನ ಗೈರಾಗಿದ್ದರು.

ಕಾಲೇಜಿನ ಒಟ್ಟು 22 ಕೊಠಡಿಗಳನ್ನು ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ. ಇದರಲ್ಲಿ ಶಿಥಿಲಗೊಂಡ ಮುಖ್ಯ ಕಟ್ಟಡದ 13, ಕಾಲೇಜು ಹಿಂಭಾಗ 3 ಹಾಗೂ ಹೊಸ ಕಟ್ಟಡದ 6 ಕೊಠಡಿಗಳಲ್ಲಿ ಪರೀಕ್ಷೆ ನಡೆಯಿತು. ಒಂದು ಕೊಠಡಿಗೆ 30 ವಿದ್ಯಾರ್ಥಿಗಳಿದ್ದರು.

ADVERTISEMENT

ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು, ಕೊಠಡಿ ಹಾಗೂ ಮೂಲ ಸೌಲಭ್ಯವಿಲ್ಲದೆ ಹೈರಾಣಾದರು. ನೆಲ ಹಾಗೂ ಮೊದಲ ಮಹಡಿಯ ಒಂದೆರಡು ಕೊಠಡಿಗಳಲ್ಲಿ ಮಾತ್ರ ಫ್ಯಾನ್‌ ಹಾಗೂ ವಿದ್ಯುತ್‌ ದೀಪಗಳು ಕಂಡುಬಂದವು. ಗೋಡೆ ಹಾಗೂ ಛಾವಣಿಯಿಂದ ಸಿಮೆಂಟ್‌, ಬಣ್ಣದ ಪುಡಿ ಬೀಳುತ್ತಿದ್ದ ಕಾರಣ ಕೊಠಡಿಗಳು ವಾಸನೆಯಿಂದ ಕೂಡಿದ್ದವು. ಇನ್ನು ಇಡೀ ಕಾಲೇಜಿಗೆ ಇರುವ 2 ಶೌಚಾಲಯಗಳ ಸ್ಥಿತಿ ಭಿನ್ನವಾಗಿಲ್ಲ.

‘ಬೆಂಚ್‌ಗಳು ಹಾಳಾಗಿದ್ದರಿಂದ ಉತ್ತರ ಬರೆಯುವಾಗ ಸಮಸ್ಯೆ ಎದುರಾಯಿತು. ಕೊಠಡಿಗಳು ಕಿರಿದಾಗಿರುವ ಕಾರಣ ಅಂಟಿಕೊಂಡಂತೆ ಬೆಂಚ್‌ಗಳನ್ನು ಹಾಕಲಾಗಿತ್ತು. ಕೊಠಡಿಗಳಲ್ಲಿ ಸ್ವಚ್ಛತೆಯೂ ಇರಲಿಲ್ಲ, ಸಮಸ್ಯೆಗಳ ನಡುವೆಯೂ ಪರೀಕ್ಷೆ ಬರೆದೆವು’ ಎಂದು ವಿದ್ಯಾರ್ಥಿನಿಯರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಇತ್ತ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 23 ಕೊಠಡಿಗಳಲ್ಲಿ ಪರೀಕ್ಷೆ ನಡೆಯಿತು. ಕಾಲೇಜಿನ ಹಿಂಭಾಗದ ರಸ್ತೆ ಬಯಲು ಶೌಚಾಲಯದಂತಿರುವ ಕಾರಣ ಇದಕ್ಕೆ ಹೊಂದಿಕೊಂಡಿರುವ ಕೊಠಡಿಗಳ ವಿದ್ಯಾರ್ಥಿಗಳು ದುರ್ವಾಸನೆ ಸಮಸ್ಯೆ ಅನುಭವಿಸಿದರು. ಕೇಂದ್ರಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ವೈದ್ಯೋಪಚಾರಕ್ಕೆ ಅಗತ್ಯ ಸಿಬ್ಬಂದಿ ಎಲ್ಲಿಯೂ ಕಂಡು ಬರಲಿಲ್ಲ.

ಪರೀಕ್ಷೆಯ ಮೊದಲ ದಿನದ ಕಾರಣ ಬಹುತೇಕ ಪಾಲಕರು ಕೇಂದ್ರಕ್ಕೆ ಬಂದಿದ್ದರು. ಬೆಳಿಗ್ಗೆ 9ರ ವೇಳೆಗೆ ಬಹುತೇಕ ವಿದ್ಯಾರ್ಥಿಗಳು ಕೇಂದ್ರದ ಆವರಣಕ್ಕೆ ಆಗಮಿಸಿದ್ದರು.

ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಆವರಣದಲ್ಲಿ ಅಂತಿಮ ಹಂತದ ಸಿದ್ಧತೆ ನಡೆಸಿದ ವಿದ್ಯಾರ್ಥಿನಿಯರು
ಬಾಲಕರ ಪದವಿಪೂರ್ವ ಕಾಲೇಜಿನ ಮುಖ್ಯ ಕಟ್ಟಡ ಶಿಥಿಲಗೊಂಡಿರುವುದು ಗಮನದಲ್ಲಿದೆ. ಕನ್ನಡ ಇಂಗ್ಲಿಷ್‌ ಭಾಷಾ ಪರೀಕ್ಷೆಗೆ ಅಧಿಕ ವಿದ್ಯಾರ್ಥಿಗಳಿರುವ ಕಾರಣ ಅನಿವಾರ್ಯವಾಗಿ ಕೊಠಡಿಗಳನ್ನು ಬಳಸಿಕೊಳ್ಳಲಾಗಿದೆ
ಕೆ.ತಿಮ್ಮಯ್ಯ ಉಪನಿರ್ದೇಶಕ ಪದವಿಪೂರ್ವ ಶಿಕ್ಷಣ ಇಲಾಖೆ

ಸ್ಥೈರ್ಯ ತುಂಬಿದ ಸಂಸದ

ಬಾಲಕರ ಸರ್ಕಾರ ಪದವಿಪೂರ್ವ ಕಾಲೇಜು ಕೇಂದ್ರದ ಆವರಣಕ್ಕೆ ಆಗಮಿಸಿದ ಸಂಸದ ಗೋವಿಂದ ಕಾರಜೋಳ ಮೈಕ್‌ ಹಿಡಿದು ಆತ್ಮಸ್ಥೈರ್ಯದ ಭಾಷಣ ಮಾಡಿದರು. ಕೆಲ ವಿದ್ಯಾರ್ಥಿನಿಯರು ಸಂಸದರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಭಾಷಣ ಮುಗಿಸಿದ ಸಂಸದರು ಕೇಂದ್ರದ ಕೊಠಡಿಗಳೊಳಗೆ ಪ್ರವೇಶಿಸಿ ನೋಡಿದ್ದರೆ ವಸ್ತುಸ್ಥಿತಿ ಗೊತ್ತಾಗುತ್ತಿತ್ತು’ ಎಂದು ಶಿಥಿಲ ಕಟ್ಟಡದಲ್ಲಿ ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿನಿಯರು ಹೇಳಿದರು.

ಕೊಠಡಿ ಮೇಲ್ವಿಚಾರಕರಿಗಿಲ್ಲ ಆಸನ!

ಕೊಠಡಿ ಮೇಲ್ವಿಚಾರಕರಿಗೆ ಕುಳಿತುಕೊಳ್ಳಲು ಆಸನ ಟೇಬಲ್‌ ನೀಡದ ಕಾರಣ ಕರ್ತವ್ಯನಿರತ ಸಿಬ್ಬಂದಿ ಸಮಸ್ಯೆ ಅನುಭವಿಸಿದರು. ಸತತ 3 ಗಂಟೆ ನಿಂತು ಪರೀಕ್ಷಾ ಕಾರ್ಯ ನಿರ್ವಹಿಸುವಲ್ಲಿ ಹೈರಾಣಾದರು. ‘ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೇಂದ್ರದಲ್ಲಿ 6 ತಿಂಗಳ ಗರ್ಭಿಣಿಯಾಗಿರುವ ಉಪನ್ಯಾಸಕಿಯೊಬ್ಬರಿಗೆ ಮಧ್ಯಾಹ್ನದ ವೇಳೆಗೆ ಕಾಲುಗಳಲ್ಲಿ ಊತ ಕಾಣಿಸಿಕೊಂಡಿತು. ರಕ್ತದೊತ್ತಡ ಮಧುಮೇಹ ಸೇರಿದಂತೆ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿರುವವರು ಸಮಸ್ಯೆ ಅನುಭವಿಸಿದರು’ ಎಂದು ಉಪನ್ಯಾಸಕರು ತಿಳಿಸಿದರು.

291 ವಿದ್ಯಾರ್ಥಿಗಳು ಗೈರು

ದ್ವಿತೀಯ ಪಿಯುಸಿಯ ಕನ್ನಡ ವಿಷಯದ ಪರೀಕ್ಷೆಗೆ 291 ವಿದ್ಯಾರ್ಥಿಗಳು ಗೈರಾಗಿದ್ದಾರೆ. 11994 ವಿದ್ಯಾರ್ಥಿಗಳು ನೋಂದಣಿಯಾಗಿದ್ದು 11703 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಯಾವುದೇ ವಿದ್ಯಾರ್ಥಿ ಡಿಬಾರ್‌ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.