
ಚಿತ್ರದುರ್ಗ: ಜಿಲ್ಲೆಯಾದ್ಯಂತ ಏಕಬಳಕೆ ಪ್ಲಾಸ್ಟಿಕ್ ಮಾರಾಟ ಎಗ್ಗಿಲ್ಲದೆ ಸಾಗಿದೆ. ಹಲವು ಬಾರಿ ಅಧಿಕಾರಿಗಳ ತಂಡ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ದಾಸ್ತಾನು, ವಿತರಣೆ ಹಾಗೂ ಮಾರಾಟವನ್ನು ಸರ್ಕಾರ ದೇಶದಾದ್ಯಂತ ನಿಷೇಧಿಸಿದೆ. ಆದರೂ ಇದಕ್ಕೆ ಕಡಿವಾಣ ಹಾಕಲು ಇಂದಿಗೂ ಸಾಧ್ಯವಾಗಿಲ್ಲ.
ದೇಶದಾದ್ಯಂತ 19 ಬಗೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ 2016ರಿಂದ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗಿತ್ತು. ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ನಂತರ ಇದಕ್ಕೆ ಇನ್ನಷ್ಟು ಬಲ ಸಿಕ್ಕಿತ್ತು.
ಕರ್ನಾಟಕದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಹೊರರಾಜ್ಯದಲ್ಲಿ ಅದಕ್ಕೆ ಕಾನೂನಿನ ರಕ್ಷಣೆ ಇದೆ. ನಿಷೇಧಿತ ಪ್ಲಾಸ್ಟಿಕ್ ತಮಿಳುನಾಡು, ಗುಜರಾತ್, ಮಹಾರಾಷ್ಟ್ರ ಹಾಗೂ ಪಕ್ಕದ ಆಂಧ್ರಪ್ರದೇಶದಿಂದ ಚಿತ್ರದುರ್ಗಕ್ಕೆ ಬರುತ್ತಿದೆ. ಪಕ್ಕದ ಜಿಲ್ಲೆಗಳಲ್ಲಿಯೂ ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಹೀಗಾಗಿ, ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದು ನಗರಸಭೆಗೂ ಕಷ್ಟವಾಗುತ್ತಿದೆ.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ಸಾಗಿದೆ. ತರಕಾರಿ ಮಾರುಕಟ್ಟೆ, ಹೂ, ಹಣ್ಣು ಮಾರುಕಟ್ಟೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಲಭ್ಯವಾಗುತ್ತಿದೆ. ದಿನಸಿ ಅಂಗಡಿ, ಹೋಟೆಲ್, ಬೀದಿ ಬದಿ ವ್ಯಾಪಾರಸ್ಥರು ಯಾವ ಭಯವೂ ಇಲ್ಲದೇ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಆಗಾಗ ದಾಳಿ ನಡೆಸಿ, ದಂಡ ವಿಧಿಸುವ ಪ್ರಯತ್ನ ಮಾಡುತ್ತಿದೆ. ಆದರೂ, ಸಂಪೂರ್ಣ ನಿಷೇಧ ಸಾಧ್ಯವಾಗುತ್ತಿಲ್ಲ.
ಪ್ಲಾಸ್ಟಿಕ್ ಕವರ್, ಥರ್ಮಾಕೋಲ್ ಕಪ್, ಲೋಟ, ಬೌಲ್, ಚಮಚ, ಟೇಬಲ್ ಕವರ್, ಕೈಚೀಲ, ಬ್ಯಾನರ್, ಬಂಟಿಂಗ್ಸ್, ಸ್ಟಿಕ್‌ಗಳು, ಇಯರ್ ಬಡ್, ಬಲೂನ್‍ಗಳಿಗೆ ಬಳಸುವ ಸ್ಟಿಕ್, ಊಟದ ಟೇಬಲ್ ಮೇಲೆ ಹರಡುವ ಕವರ್, ಧ್ವಜ, ಕ್ಯಾಂಡಿ ಸ್ಟಿಕ್, ಐಸ್ ಕ್ರೀಮ್ ಸ್ಟಿಕ್, ಅಲಂಕಾರಕ್ಕಾಗಿ ಬಳಸುವ ಪಾಲಿಸ್ರೈರೀನ್ (ಥರ್ಮಾಕೋಲ್) ಫೋರ್ಕ್ ನಿರಂತರವಾಗಿ ಜನರ ಕೈ ಸೇರುತ್ತಿವೆ.
ಅಧಿಕಾರಿಗಳ ತಂಡ ಒಂದು ಅಂಗಡಿ ಮೇಲೆ ದಾಳಿ ಮಾಡಿದ ಕೂಡಲೇ ಇನ್ನಿತರೆ ಅಂಗಡಿಗಳಿಗೆ ಮಾಹಿತಿ ದೊರೆತು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿ ದಾಸ್ತಾನು ಮಾಡುತ್ತಾರೆ. ಜತೆಗೆ ಗ್ರಾಮೀಣ ಭಾಗದಲ್ಲಿನ ಕಿರಾಣಿ ಅಂಗಡಿಗಳಲ್ಲಿ ನಡೆಯುತ್ತಿರುವ ಏಕಬಳಕೆ ಪ್ಲಾಸ್ಟಿಕ್ ಮಾರಾಟಕ್ಕೆ ಕಡಿವಾಣ ಹಾಕುವುದೂ ಸವಾಲಿನ ಕೆಲಸವಾಗಿದೆ.
ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯುವ ಕೆಲಸ ನಿರಂತರವಾಗಿದೆ. ದಂಡ ಪ್ರಮಾಣ ಹೆಚ್ಚಿಸಲಾಗುತ್ತದೆಎಸ್.ಲಕ್ಷ್ಮಿ ಪೌರಾಯುಕ್ತೆ ಚಿತ್ರದುರ್ಗ
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬೀಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ವ್ಯಾಪಾರಸ್ಥರಿಗೆ ಮಾಹಿತಿ ನೀಡಿ ದಾಳಿ ನಡೆಸುವುದು ಮಾಮೂಲಿಯಾಗಿದೆ. ಈ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.ರಾಜೇಂದ್ರ ಚಕ್ರವರ್ತಿ ಸಮಾಜಸೇವಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.