ADVERTISEMENT

ಚಿತ್ರದುರ್ಗ: ಬಸ್‌ ಕೊರತೆ; ತಪ್ಪದ ವಿದ್ಯಾರ್ಥಿಗಳ ಗೋಳು

ಆಟೊ, ಖಾಸಗಿ ವಾಹನಗಳ ಹಾವಳಿ, ಕಾಲೇಜು ತೊರೆಯುತ್ತಿರುವ ಹೆಣ್ಣುಮಕ್ಕಳು

ಎಂ.ಎನ್.ಯೋಗೇಶ್‌
Published 6 ಅಕ್ಟೋಬರ್ 2025, 6:07 IST
Last Updated 6 ಅಕ್ಟೋಬರ್ 2025, 6:07 IST
ಚಿತ್ರದುರ್ಗ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
ಚಿತ್ರದುರ್ಗ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು   

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಗ್ರಾಮೀಣ ಭಾಗದಿಂದ ನಗರ, ಪಟ್ಟಣ ಪ್ರದೇಶಕ್ಕೆ ಸಾರಿಗೆ ಸಂಸ್ಥೆ ಬಸ್‌ಗಳ ಓಡಾಟ ಕಡಿಮೆಯಿರುವ ಕಾರಣ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀರಾ ತೊಂದರೆಯಾಗಿದೆ. ಶಕ್ತಿ ಯೋಜನೆ ಜಾರಿ ನಂತರ ವಿದ್ಯಾರ್ಥಿಗಳು ಓಡಾಡುವುದೇ ಕಷ್ಟವಾಗಿದ್ದು ಅವರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ.

ಶಕ್ತಿ ಯೋಜನೆ ಜಾರಿಯಾಗುವುದಕ್ಕೆ ಮೊದಲಿನಿಂದಲೂ ಜಿಲ್ಲೆಯಲ್ಲಿ ಬಸ್‌ ಹಾಗೂ ಬಸ್‌ ಓಡಾಡುವ ಮಾರ್ಗಗಳ ಸಂಖ್ಯೆ ಕಡಿಮೆಯೇ ಇದೆ. ಶಕ್ತಿ ಜಾರಿಯಾದ ನಂತರ ಸಮಸ್ಯೆ ಉಲ್ಭಣಗೊಂಡಿದ್ದು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರು ಸಂಜೆ ಮನೆಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗದ ಕಾರಣ ಕೆಲ ಪೋಷಕರು ಆತಂಕದಿಂದ ತಮ್ಮ ಹೆಣ್ಣುಮಕ್ಕಳನ್ನು ಕಾಲೇಜಿನಿಂದಲೇ ಬಿಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಎಸ್‌ಆರ್‌ಟಿಸಿ ಬಸ್‌ ಮುಖವನ್ನೇ ನೋಡದ ಹಲವು ಹಳ್ಳಿಗಳು ಜಿಲ್ಲೆಯಲ್ಲಿ ಈಗಲೂ ಇವೆ. ಚಿತ್ರದುರ್ಗ ಉಪವಿಭಾಗ ದಾವಣಗೆರೆ ವಿಭಾಗದಿಂದ 2018ರಲ್ಲಿ ಪ್ರತ್ಯೇಕಗೊಂಡಿತು. ಈಚೆಗೆ ಉದ್ಘಾಟನೆಗೊಂಡ ಹಿರಿಯೂರು ಡಿಪೊ ಸೇರಿ ಚಿತ್ರದುರ್ಗ ಉಪ ವಿಭಾಗದಲ್ಲಿ 5 ಡಿಪೋಗಳಿವೆ. ಆದರೆ ತುಮಕೂರು ಜಿಲ್ಲೆಯ ಪಾವಗಡ ಡಿಪೊ ಕೂಡ ಇದೇ ಉಪ ವಿಭಾಗಕ್ಕೆ ಸೇರಿರುವುದು ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ಮಾರ್ಗಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಜೊತೆಗೆ ಸಿಬ್ಬಂದಿ ಕೊರತೆಯೂ ಉಪ ವಿಭಾಗವನ್ನು ಕಾಡುತ್ತಿದೆ.

ADVERTISEMENT

ಉಪ ವಿಭಾಗ ವ್ಯಾಪ್ತಿಯಲ್ಲಿ 350 ಬಸ್‌ಗಳಿದ್ದು 334 ಮಾರ್ಗಗಳಲ್ಲಿ ಬಸ್‌ ಓಡಾಡುತ್ತಿವೆ. ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಪಾವಗಡ 5 ಡಿಪೋಗಳಿವೆ. ‘ಚಿತ್ರದುರ್ಗಕ್ಕೆ ಸಮೀಪದಲ್ಲಿರುವ ಕಲ್ಲೇನಹಳ್ಳಿ, ಬಚ್ಚಬೋರನಹಟ್ಟಿ, ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ ಮುಂತಾದ ಹಳ್ಳಿಗಳ ಜನರು ಇಲ್ಲಿಯವರೆಗೂ ಬಸ್‌ ನೋಡಿಲ್ಲ. ನಮ್ಮ ಗ್ರಾಮದ ಹಲವು ಹೆಣ್ಣುಮಕ್ಕಳು ಬಸ್‌ ಇಲ್ಲ ಎಂಬ ಕಾರಣದಿಂದಲೇ ಶಾಲಾ, ಕಾಲೇಜು ಬಿಟ್ಟು ಮನೆಯಲ್ಲಿ ಕುಳಿತಿದ್ದಾರೆ’ ಎಂದು ಕಲ್ಲೇನಹಳ್ಳಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಪ್ರಮುಖ ವಿದ್ಯಾಕೇಂದ್ರವಾದ ಸಿರಿಗೆರೆಯ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಅರಸಿ ಬರುವ ವಿದ್ಯಾರ್ಥಿಗಳು ಬಸ್‌ ಸಮಸ್ಯೆ ಕೊರತೆಯಿಂದ ಪರಿತಪಿಸುತ್ತಾರೆ. ಚಿಕ್ಕಬೆನ್ನೂರು, ಹಿರೇಬೆನ್ನ್ನೂರು, ಬ್ಯಾಲಹಾಳ್‌, ಬಸವನ ಶಿವನಕೆರೆ, ಬೇಡರ ಶಿವನಕೆರೆ, ಗೌರಮ್ಮನಹಳ್ಳಿ, ವಿಜಾಪುರ ಗೊಲ್ಲರಹಟ್ಟಿ, ಕಲ್ಲುಂಟೆ, ವಿಜಾಪುರ ಮುಂತಾದ ಹಳ್ಳಿಗಳ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ 48ಕ್ಕೆ ತಲುಪಿ ಅಲ್ಲಿಂದ ಬೇರೆ ಬಸ್‌ಗಳನ್ನು ಹಿಡಿಯಬೇಕು. ಅಲ್ಲಿಗೆ ಬಸ್‌ ಇಲ್ಲದ ಕಾರಣ ಆಟೊ, ಆಪೆ ವಾಹನಗಳಲ್ಲಿ ಅಪಾಯದ ನುಡುವೆ ಓಡಾಡುತ್ತಾರೆ.

ಬೊಮ್ಮೇನಹಳ್ಳಿ, ಕಡ್ಲೇಗುದ್ದು, ಕೋಣನೂರು, ಚಿಕ್ಕೇನಹಳ್ಳಿ ಮಾರ್ಗವಾಗಿ ಮಕ್ಕಳಿಗೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳೇ ಇಲ್ಲ. ಜೊತೆಗೆ ಕಾಲಗೆರೆ, ಡಿ. ಮೆದಿಕೇರಿಪುರ, ದೊಡ್ಡಿಗನಹಾಳ್‌, ಮಾರ್ಗವಾಗಿಯೂ ಮಕ್ಕಳಿಗೆ ಬಸ್‌ ಸೌಲಭ್ಯ ಇಲ್ಲ. ಹಳವುದರ, ಹಳವುದರ ಹಟ್ಟಿ, ಅರಬಗಟ್ಟೆ, ಹಳೆರಂಗಾಪುರ, ಹೊಸರಂಗಾಪುರ, ಸೀಗೇಹಳ್ಳಿ, ಅಳಗವಾಗಿ, ಪುಡುಕಲಹಳ್ಳಿ, ಬಾವಿಹಾಳ್ ಈ ಮುಂತಾದ ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಪಡುವ ಸಂಕಟ ಹೇಳತೀರದು.

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಭಾಗದಲ್ಲಿ ಸರಿಯಾದ ಬಸ್ ಸಂಪರ್ಕ ಇಲ್ಲದೆ ಆ ಭಾಗದ ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರದ ಕಾಲೇಜುಗಳಿಗೆ ಬರಲು ತೀವ್ರ ತೊಂದರೆ ಉಂಟಾಗಿದೆ. ಬಸಾಪುರ, ಆರ್.ನುಲೇನೂರು, ರಂಗಾಪುರ, ರಾಮಗಿರಿ, ತಾಳಿಕಟ್ಟೆ, ತುಪ್ಪದ ಹಳ್ಳಿ, ಕೆಂಚಾಪುರ, ಆರ್.ಡಿ.ಕಾವಲು, ಸಿಂಗೇನಹಳ್ಳಿ ಭಾಗದ ವಿದ್ಯಾರ್ಥಿಗಳು ಬಸ್‌ ಕೊರತೆ ಎದುರಿಸುತ್ತಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ-13 ರಿಂದ ಈಚಘಟ್ಟ, ನಗರ ಘಟ್ಟ, ನೆಲ್ಲಿಕಟ್ಟೆ, ಮತಿಘಟ್ಟ, ಹೊರಕೆರೆ ದೇವರಪುರ, ನಂದನ ಹೊಸೂರು, ಉಪ್ಪರಿಗೇನಹಳ್ಳಿ, ಕೆರೆಯಾಗಳ ಹಳ್ಳಿ, ತೇಕಲವಟ್ಟಿ, ಗೊಲ್ಲರಹಟ್ಟಿ, ಕೊಳಾಳು ಮಾರ್ಗದಲ್ಲಿಯೂ ದಿನಕ್ಕೆ ಎರಡು ಮೂರು ಬಸ್ ಮಾತ್ರ ಸಂಚರಿಸಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ.  ಕೆಎಸ್‌ಆರ್‌ಟಿಸಿ ಬಸ್ ಡಿಪೊ ಉದ್ಘಾಟನೆಗೊಳ್ಳದ ಕಾರಣ ವಿದ್ಯಾರ್ಥಿಗಳ ಸಮಸ್ಯೆ ಉಲ್ಭಣಗೊಂಡಿದೆ.

ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರ ಹಟ್ಟಿ, ಬಂಗಾರ ದೇವರಹಟ್ಟಿ, ಗಡ್ದಾರಹಟ್ಟಿ, ಕರೆಕಾಟ್ಲಹಟ್ಟಿ, ಪೆತ್ತಮನವರಹಟ್ಟಿ, ವರವಿನವರಹಟ್ಟಿ ಸೇರಿ ಒಟ್ಟು 25ಕ್ಕೂ ಹೆಚ್ಚು ಬುಡಕಟ್ಟು ಸಮುದಾಯದ ಹಟ್ಟಿಯ ಜನರು ಸಾರಿಗೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರತಿ ದಿನ ನಗರಪ್ರದೇಶದ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಬಾಡಿಗೆ ಆಟೊಗಳನ್ನೇ ಅವಲಂಬಿಸಿದ್ದಾರೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗ - ದಾವಣಗೆರೆ, ಹೊಸದುರ್ಗ -ಚಿತ್ರದುರ್ಗ, ಹೊಸದುರ್ಗ -ಶಿವಮೊಗ್ಗ ನಿತ್ಯ ಹತ್ತಾರು ಬಸ್ ಸಂಚರಿಸುತ್ತವೆ. ಈ ಎಲ್ಲಾ ಬಸ್ ಗಳು ಮಧುರೆ, ದೇವಿಗೆರೆ, ಮಾವಿನಕಟ್ಟೆ ಮಾರ್ಗವಾಗಿ ಸಂಚರಿಸುತ್ತವೆ. ಇಲ್ಲಿ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತೆರಳುತ್ತಾರೆ. ಕೋರಿಕೆ ನಿಲುಗಡೆಗೆ ಅವಕಾಶವಿದ್ದರೂ ಕೆಲ ಬಸ್ ಗಳನ್ನು ನಿಲ್ಲಿಸುವುದಿಲ್ಲ. ಈ ಬಗ್ಗೆ ಹಲವು ಬಾರಿ ಇಲಾಖೆಗೆ ಮನವಿ ಮಾಡಲಾಗಿದೆ. ಕೆಲವೊಮ್ಮೆ ಪ್ರತಿಭಟನೆ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ಬಸ್‌ ಇದ್ದರೂ ವಿದ್ಯಾರ್ಥಿಗಳ ಪಾಲಿಗೆ ಇಲ್ಲವಾಗಿದೆ.

ಪೂರಕ ಮಾಹಿತಿ: ಶಿವಗಂಗಾ ಚಿತ್ತಯ್ಯ, ಸಂದೇಶ್‌ಗೌಡ ಸಾಂತೇನಹಳ್ಳಿ, ತಿಮ್ಮಪ್ಪ ಜೆ, ಎಚ್‌.ಡಿ.ಸಂತೋಷ್‌, ಧನಂಜಯ

ಮೊಳಕಾಲ್ಮುರು ಪಟ್ಟಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಹತ್ತಲು ಶತಪ್ರಯತ್ನ
ಚಿಕ್ಕಜಾಜೂರು ಪಟ್ಟಣದಲ್ಲಿ ಖಾಸಗಿ ಬಸ್‌ ಟಾಪ್‌ನಲ್ಲಿ ಪ್ರಯಾಣ
ತೀರಾ ಕೊರತೆಯಿರುವ ಕಡೆ ಹೆಚ್ಚುವರಿ ಬಸ್‌ ಕಳುಹಿಸಲಾಗುತ್ತಿದೆ. ಇರುವ ಬಸ್‌ ಹಾಗೂ ಸಿಬ್ಬಂದಿಯನ್ನು ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು
ನಾಗರಾಜ್‌ ವಿಭಾಗೀಯ ನಿಯಂತ್ರಣಾಧಿಕಾರಿ

ಡಿಪೊ ಬಂದರೂ ಬಾರದ ಬಸ್‌

ಸುವರ್ಣಾ ಬಸವರಾಜ್‌ ಯೂರು:  ನಗರದಲ್ಲಿ ಕೆಎಸ್ಆರ್‌ಟಿಸಿ ಬಸ್ ಡಿಪೊ ಆರಂಭವಾಗಿ ಒಂದು ತಿಂಗಳು ಕಳೆದರೂ ಗ್ರಾಮೀಣ ಸಾರಿಗೆ ಪರಿಸ್ಥಿತಿ ಕೊಂಚವೂ ಸುಧಾರಿಸಿಲ್ಲ. ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಓಣಿಹಟ್ಟಿ ಕರಿಯಾಲ ಮೂಡಲಹಟ್ಟಿ ಬಿ.ಕೆ. ಹಟ್ಟಿ ಕೋಲಾಟದಹಟ್ಟಿ ಆನೆಸಿದ್ರಿ ಕಾಟನಾಯಕಹಳ್ಳಿ ಗಾಯಿತ್ರಿಪುರ ಓಬಳ್ಳಾಪುರ ಕಿಲಾರದಹಳ್ಳಿ ಮಾವಿನಮಡು ಶಿರಾ ತಾಲ್ಲೂಕಿನ ಹೇರೂರು ಹೊಸೂರು ಡ್ಯಾಗೇರಹಳ್ಳಿ ಕುಂಟನಹಟ್ಟಿ ದಂಡಿಕೆರೆ ಹುಣೆಸೆಹಳ್ಳಿಗಳ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಚಿತ್ರದುರ್ಗ ಹಾಗೂ ಶಿರಾ ನಗರಗಳಿಗೆ ಹೋಗಿ ಬರಲು ಪರದಾಡುತ್ತಿದ್ದಾರೆ.

ಬೆಂಗಳೂರು-ಚಿತ್ರದುರ್ಗ ನಡುವೆ ಸಂಚರಿಸುವ ಎಲ್ಲಾ ವೇಗಧೂತ ಬಸ್‌ ಜವನಗೊಂಡನಹಳ್ಳಿ ಸೇವಾ ರಸ್ತೆಗೆ ಇಳಿದು ಹೋಗಬೇಕೆಂದು ಕಟ್ಟಪ್ಪಣೆ ಮಾಡಿದ್ದರೂ ಬಹುತೇಕ ಬಸ್ಸುಗಳ ಚಾಲಕರು ಇದನ್ನು ಪಾಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ. ಡಿಪೊ ಆರಂಭವಾದರೆ ಬಸ್ಸಿನ ಸಮಸ್ಯೆ ಪರಿಹಾರವಾಗುತ್ತದೆ ಎಂದು ಕಾದಿದ್ದ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ.

ಮೊದಲೆರಡು ತರಗತಿ ಸಿಗಲ್ಲ

ಮೊಳಕಾಲ್ಮುರು: ತಾಲ್ಲೂಕಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾಭ್ಯಾಸಕ್ಕೆ ಹೆಚ್ಚಾಗಿ ಹೊರ ತಾಲ್ಲೂಕುಗಳಿಗೆ ಹೋಗುವ ಅನಿವಾರ್ಯವಿದೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಯಿಲ್ಲದ ಕಾರಣ ಖಾಸಗಿ ಬಸ್‌ಗಳಿಗೆ ಹಣ ತೆತ್ತು ಓಡಾಬೇಕಾಗಿದೆ. ಬೆಳಿಗ್ಗೆ ವೇಳೆ ಸರಿಯಾಗಿ ಬಸ್ಸು ಸಿಗದ ಕಾರಣ ಚಳ್ಳಕೆರೆ ಚಿತ್ರದುರ್ಗ ಬಳ್ಳಾರಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮೊದಲ ಒಂದು ಎರಡು ತರಗತಿಗಳನ್ನು ಕಳೆದುಕೊಳ್ಳುವ ಅನಿವಾರ್ಯವಿದೆ. ಸಂಜೆ ಸರ್ಕಸ್‌ ಮಾಡಿ ಬಸ್‌ ಹಿಡಿದು ಮರಳಬೇಕು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಗೊತ್ತಿದ್ದರೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಸ್ಥಳೀಯವಾಗಿ ಡಿಪೊ ಬಸ್‌ನಿಲ್ದಾಣ ಆದಲ್ಲಿ ಸಮಸ್ಯೆ ಸ್ವಲ್ಪ ನೀಗುವ ಆಸೆ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಸಂಜಯ್‌ ನಾಗರಾಜ್‌. 150 ಎ ಹೆದ್ದಾರಿಯಲ್ಲಿರುವ ರಾಂಪುರ ಹಾನಗಲ್‌ ರಾಯಾಪುರ ಬಿ.ಜಿ.ಕೆರೆ ಹಿರೇಹಳ್ಳಿ ತಳಕು ಗ್ರಾಮಗಳಿಗೆ ಬೆಳಿಗ್ಗೆ ಭೇಟಿ ನೀಡಿದರೆ ದೇಶದ ಭವಿಷ್ಯ ಎಂದು ಕರೆಸಿಕೊಳ್ಳುವ ನೂರಾರು ವಿದ್ಯಾರ್ಥಿಗಳು ಗಂಟೆಗಟ್ಟಲೆ ಬಸ್‌ಗಳಿಗೆ ಕಾಯುವುದು ಬರುವ ಬಸ್‌ಗಳನ್ನು ನಿಲ್ಲಿಸಿ ಎಂದು ರಸ್ತೆಗಿಳಿಯುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.