ADVERTISEMENT

ಚಿತ್ರದುರ್ಗ | ಪಾಳುಬಿದ್ದಿದೆ ತಿಮ್ಮಣ್ಣನಾಯಕ ಕಟ್ಟಿಸಿದ ಕೆರೆ!

ಎಂ.ಎನ್.ಯೋಗೇಶ್‌
Published 24 ಮೇ 2025, 7:37 IST
Last Updated 24 ಮೇ 2025, 7:37 IST

ತಿಮ್ಮಣ್ಣನಾಯಕ ಕೆರೆಗೆ ತೆರಳುವ ದಾರಿ ಬದಿಯಲ್ಲಿ ತ್ಯಾಜ್ಯ ಸುರಿದಿರುವುದು

ತಿಮ್ಮಣ್ಣನಾಯಕ ಕೆರೆಗೆ ತೆರಳುವ ದಾರಿ ಬದಿಯಲ್ಲಿ ತ್ಯಾಜ್ಯ ಸುರಿದಿರುವುದು

ಚಿತ್ರದುರ್ಗ: ಜೋಗಿಮಟ್ಟಿ ಗಿರಿಧಾಮಗಳ ನಡುವಿನ ಸುಂದರ ಪರಿಸರದಲ್ಲಿ ಇರುವ ತಿಮ್ಮಣ್ಣ ನಾಯಕನ ಐತಿಹಾಸಿಕ ಕೆರೆ ನಿರ್ವಹಣೆಯ ಕೊರತೆಯಿಂದ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ ದೋರಣೆಯಿಂದ ಕೆರೆಯಂಗಳ ಪಾಳು ಬಿದ್ದ ಸ್ಥಿತಿಯಲ್ಲಿದೆ.

ADVERTISEMENT

ನಾಯಕ ವಂಶದ ಮೊದಲ ಪಾಳೇಗಾರ ಮತ್ತಿತಿಮ್ಮಣ್ಣ ನಾಯಕ ಸಾಮಾಜಿಕ ಕಾರ್ಯಗಳಿಂದ ಹೆಸರುವಾಸಿಯಾಗಿದ್ದರು. 16ನೇ ಶತಮಾನದಲ್ಲಿ ಅವರೇ ಕಲ್ಲಿನಕೋಟೆ, ಜೋಗಿಮಟ್ಟಿ ಬೆಟ್ಟಗಳ ತಪ್ಪಲಿನಲ್ಲಿ ಕೆರೆ ಕಟ್ಟಿಸಿದ್ದರು. ಇಲ್ಲಿಯವರೆಗೂ ತಿಮ್ಮಣ್ಣನಾಯಕರ ಹೆಸರಿನಲ್ಲೇ ಕೆರೆ ಪ್ರಸಿದ್ಧಿ ಪಡೆದಿದೆ. 1984ರವರೆಗೂ ಈ ಕೆರೆಯ ನೀರು ಕೋಟೆನಗರಿ ಜನರ ಕುಡಿಯುವ ನೀರಿನ ಆಸರೆಯಾಗಿತ್ತು.

100 ಹೆಕ್ಟೇರ್‌ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಕೆರೆಯನ್ನು ಸಮರ್ಪಕವಾಗಿ ನಿರ್ವಹಿಸದೆ ಸದ್ಯ ಅಲ್ಲಿಯ ವಾತಾವರಣ ಹಾಳಾಗಿದೆ. ಕೆರೆ ಪರಿಸರ ಸುಧಾರಿಸಲು ಅರಣ್ಯ ಇಲಾಖೆ ಮುಂದಾಗದ ಕಾರಣ ಅಲ್ಲಿಯ ಆವರಣ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕೆರೆಯ ಏರಿಯ ಮೇಲೆ ಚೌಡೇಶ್ವರಿ ದೇವಾಲಯ, ಕೆರೆಯ ಅಕ್ಕಪಕ್ಕದಲ್ಲಿ ಬಾಳೇಕಾಯಿ ಸಿದ್ದಪ್ಪ, ಉಗ್ರ ನರಸಿಂಹ ದೇವಾಲಯಗಳಿದ್ದು ಪೂಜೆಗಾಗಿ ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಆದರೆ ಕುಡುಕರ ಹಾವಳಿಯಿಂದ ಅವರು ಕಿರಿಕಿರಿ ಅನುಭವಿಸುತ್ತಾರೆ.

2012ರಲ್ಲಿ ಅರಣ್ಯ ಇಲಾಖೆ ಕೆರೆಗೆ ಹೊಸ ರೂಪ ನೀಡಿತ್ತು. ‘ಅಡವಿ ಮಲ್ಲೇಶ್ವರ ನಗರವನ’ ಎಂದು ಹೆಸರಿಸಿ ಉದ್ಯಾನದ ರೂಪ ನೀಡಿತ್ತು. ಕೆರೆಯ ನಡುವೆ ನಡುಗಡ್ಡೆ, ಕೆರೆಯಂಚಿನ ಗುಡ್ಡದ ಮೇಲೆ ವೀಕ್ಷಣಾ ಕೇಂದ್ರ (ವ್ಯೂ ಪಾಯಿಂಟ್‌),  ಮಂಟಪ ನಿರ್ಮಾಣ ಮಾಡಿತ್ತು. ವೀಕ್ಷಣಾ ಕೇಂದ್ರದಲ್ಲಿ ನಿಂತರೆ ಜೋಗಿಮಟ್ಟಿ ಗಿರಿಧಾಮ, ಕಲ್ಲಿನಕೋಟೆ, ಕೆರೆಯ ಪರಿಸರ ಮನಸೂರೆಗೊಳ್ಳುತ್ತಿತ್ತು. ಕೆರೆನಡುವಿನ ನಡುಗಡ್ಡೆಗಳು ಪಕ್ಷಿಗಳ ವಾಸಸ್ಥಾನವೂ ಆಗಿದ್ದವು. ಆ ರಮಣೀಯ ದೃಶ್ಯ ಪ್ರವಾಸಿಗರನ್ನೂ ಆಕರ್ಷಿಸಿತ್ತು.

ಆದರೆ ಕ್ರಮೇಣ ಅರಣ್ಯ ಇಲಾಖೆ ಕೆರೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿತು. ಕಳೆದ ವರ್ಷ ಸೇರಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದರೂ ಸದ್ಯ ಕೆರೆಯೊಡಲು ಖಾಲಿಯಾಗಿದ್ದು ಗಿಡಗಂಟಿಗಳು ಬೆಳೆದುನಿಂತಿವೆ. ಎಲ್ಲೆಡೆ ಮುಳ್ಳುಗಿಡಗಳೇ ತುಂಬಿರುವ ಕಾರಣ ವ್ಯೂವ್ ಪಾಯಿಂಟ್‌ಗೆ ತೆರಳಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲೂ ಕುಡುಕರ ಹಾವಳಿ ತೀವ್ರಗೊಂಡಿದ್ದು ಭಯದ ವಾತಾವರಣವಿದೆ.

‘ಕುಡಾ’ದಿಂದಲೂ ಅಭಿವೃದ್ಧಿ: 2021ರಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಕೆರೆ ಅಭಿವೃದ್ಧಿ ಶುಲ್ಕದ ಹಣದಲ್ಲಿ ಕೆರೆಯ ಏರಿಯನ್ನು ಅಭಿವೃದ್ಧಿಗೊಳಿಸಿತ್ತು. ಏರಿಯ ಮೇಲೆ ವಾಕಿಂಗ್‌ ಟ್ರ್ಯಾಕ್‌, ಉದ್ದಕ್ಕೂ 50ಕ್ಕೂ ಹೆಚ್ಚು ಅಲಂಕಾರಿಕ ದೀಪ ಅಳವಡಿಸಿತ್ತು.  ಕಲ್ಲು ಬೆಂಚುಗಳನ್ನು ಅಳವಡಿಸಿ ವಾಯುವಿಹಾರಿಗಳ ವಿಶ್ರಾಂತಿಗೆ ಅನುಕೂಲ ಕಲ್ಪಿಸಿತ್ತು.

ಆದರೆ ಅದನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಕೆರೆಯ ಪರಿಸರ ಪಾಳುಬಿದ್ದ ಸ್ಥಿತಿಗೆ ತಲುಪಿದೆ. ಕುಡಾ ವತಿಯಿಂದ ಅಳವಡಿಸಲಾಗಿದ್ದ ಅಲಂಕಾರಿಕ ದೀಪಗಳು ಹಾಳಾಗಿದ್ದು ಅವು ಬೆಳಗುತ್ತಿಲ್ಲ. ವಾಕಿಂಗ್‌ ಟ್ರ್ಯಾಕ್‌ನಲ್ಲೂ ಗಿಡಗಂಟಿಗಳು ಬೆಳೆದಿದೆ. ಒಂದು ಬಾರಿ ಕೆರೆ ಅಭಿವೃದ್ಧಿ ಮಾಡಿ ಕುಡಾ ಅಧಿಕಾರಿಗಳು ಕೈತೊಳೆದುಕೊಂಡಿದ್ದು ನಿರ್ವಹಣೆ ಮಾಡುವವರು ಯಾರೂ ಇಲ್ಲವಾಗಿದ್ದಾರೆ. ಹೀಗಾಗಿ ಅಲ್ಲಿಯ ಪರಿಸರ ಕುಡುಕರ ಮೋಜಿನ ತಾಣವಾಗಿ ರೂಪಗೊಳ್ಳುವಂತಾಗಿದೆ.

‘ತಿಮ್ಮಣ್ಣನಾಯಕನ ಕೆರೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಜನರು ಕುಟುಂಬ ಸದಸ್ಯರೊಂದಿಗೆ ಬಂದು ಸುಂದರ ಪರಿಸರವನ್ನು ಅನುಭವಿಸುತ್ತಾರೆ. ಟಿಕೆಟ್‌ ಇಟ್ಟರೂ ಸ್ಥಳೀಯರು, ಪ್ರವಾಸಿಗರು ಹಣ ಕೊಟ್ಟು ಬರುತ್ತಾರೆ. ಆದರೆ ಕೆರೆ ಅಭಿವೃದ್ಧಿಗೆ ಅರಣ್ಯ ಇಲಾಖೆ, ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿರುವ ಕಾರಣ ಕುಡುಕರಿಗೆ ಸ್ಪರ್ಗವಾಗಿದೆ’ ಎಂದು ಸ್ಥಳೀಯರಾದ ಬಿ.ಜಗದೀಶ್‌ ಹೇಳಿದರು.

ಹಾದಿ ಬದಿಯಲ್ಲಿ ತ್ಯಾಜ್ಯದ ಹಾವಳಿ

ಮತ್ತಿ ತಿಮ್ಮಣ್ಣನಾಯಕ ಕೆರೆಗೆ ತೆರಳುವ ರಸ್ತೆ ಬದಿಯೇ ತ್ಯಾಜ್ಯ ಸುರಿಯುವ ತಾಣವಾಗಿ ಮಾರ್ಪಾಡಾಗಿದೆ. ಬುದ್ಧನಗರ, ಜಟ್‌ಪಟ್‌ನಗರ, ಕೋಟೆಯ ಜೋಡಿ ಬತ್ತೇರಿ ಬಾಗಿಲು (ಕತ್ರಿ ಬಾಗಿಲು) ದಾಟಿ ಮುಂದೆ ಸಾಗಿದರೆ ಕೆರೆ ಸಿಗುತ್ತದೆ. ಅರ್ಧ ರಸ್ತೆಗೆ ಡಾಂಬರ್‌ ಹಾಕಿದ್ದರೆ ಇನ್ನರ್ಧ ಮಣ್ಣಿನ ರಸ್ತೆ. ಎರಡೂ ಕಡೆ ಮುಳ್ಳಿನ ಕಂಟಿಗಳು ರಸ್ತೆಗೆ ಚಾಚಿಕೊಂಡಿದ್ದು ಹಾವು– ಹಲ್ಲಿಗಳ ಭಯ ಕಾಡುತ್ತದೆ.

ರಸ್ತೆಯ ಇಕ್ಕೆಲಗಳನ್ನು ಖಾಸಗಿ ವ್ಯಕ್ತಿಗಳು ಕಸ ಸುರಿಯುವ ತಾಣ ಮಾಡಿಕೊಂಡಿದ್ದಾರೆ. ಹಳೆ ಮನೆ ಕೆಡವಿದಾಗ ಸಿಗುವ ಅವಶೇಷವನ್ನು ಟ್ರ್ಯಾಕ್ಟರ್‌ನಲ್ಲಿ ತುಂದು ಸುರಿದಿದ್ದಾರೆ. ಸಮೀಪದಲ್ಲಿ ಸ್ಮಶಾನವೂ ಇದ್ದು ಆ ಜಾಗದಲ್ಲೂ ತ್ಯಾಜ್ಯ ಸುರಿದಿದ್ದಾರೆ. ಹೀಗಾಗಿ ತಿಮ್ಮಣ್ಣನಾಯಕ ಕೆರೆಗೆ ತೆರಳುವವರಿಗೆ ದುರ್ವಾಸನೆ ಕಾಡುತ್ತದೆ.

‘ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿರುವ ಸುಂದರ ಪರಿಸರ ತಾಣವನ್ನೂ ಇಲಾಖೆಗಳು ಸರಿಯಾಗಿ ನೋಡಿಕೊಂಡಿಲ್ಲ. ಚಿತ್ರದುರ್ಗದ ಆಸುಪಾಸಿನಲ್ಲಿ ಸ್ವರ್ಗವಿದ್ದು ಪಾಳೇಗಾರರು ಹಿಂದೆಯೇ ನಿರ್ಮಿಸಿ ಹೋಗಿದ್ದಾರೆ. ಅದನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಆಡಳಿತಗಳು ಸೋತಿವೆ’ ಎಂದು ನಾಯಕ ಸಮುದಾಯದ ಮುಖಂಡ ಗೋಪಾಲಸ್ವಾಮಿ ನಾಯಕ ಬೇಸರ ವ್ಯಕ್ತಪಡಿಸಿದರು.

2018ರಲ್ಲಿ ಜೋಗಿಮಟ್ಟಿ ಅರಣ್ಯವನ್ನು ವನ್ಯಜೀವಿಧಾಮವಾಗಿ ಘೋಷಣೆ ಮಾಡಿದ ಕಾರಣ ಅಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವಂತಿಲ್ಲ. ಆದರೂ ಕೆರೆಯ ಹೂಳೆತ್ತಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
–ವಸಂತಕುಮಾರ್‌,ಆರ್‌ಎಫ್‌ಒ, ಅರಣ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.