ಚಿತ್ರದುರ್ಗ: ಕಣ್ಣು ಹಾಯಿಸಿದಲ್ಲೆಲ್ಲಾ ಕಸದ ರಾಶಿ. ಒಣಗಿರುವ ಹುಲ್ಲು ಹಾಸು. ಕಣ್ಣಿಗೆ ರಾಚುವ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕ್. ಮುರಿದು ಬಿದ್ದಿರುವ ಜಿಮ್ ಸಲಕರಣೆಗಳು ಹಾಗೂ ಕಬ್ಬಿಣದ ಗ್ರೀಲ್. ಕಾಲಿಡದಂತಿರುವ ನಡಿಗೆ ಪಥ. ಇಲ್ಲವಾದ ಕುಡಿಯವ ನೀರು, ವಿಶ್ರಾಂತಿ ಸ್ಥಳ ಹಾಗೂ ವಿದ್ಯುತ್ ದೀಪ...
ಇದು ಜಿಲ್ಲೆಯ ಉದ್ಯಾನಗಳ ದುಃಸ್ಥಿತಿಗೆ ಹಿಡಿದ ಕೈಗನ್ನಡಿ. ಜಿಲ್ಲೆಯ ಸೌಂದರ್ಯ ಹೆಚ್ಚಿಸಬೇಕಿದ್ದ ಈ ಉದ್ಯಾನಗಳು, ಕಪ್ಪುಚುಕ್ಕೆಯಾಗಿ ಪರಿಣಮಿಸಿವೆ!
ಹೆಸರಿಗೆ ಮಾತ್ರ ಜಿಲ್ಲೆಯ ಎಲ್ಲ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯಾನಗಳಿವೆ. ಇವೆಲ್ಲವನ್ನು ನಗರದ ಸೌಂದರ್ಯ ಹಾಳು ಮಾಡುವ ಉದ್ದೇಶದಿಂದಲೇ ನಿರ್ಮಿಸಿದಂತಿದೆ! ಚಿತ್ರದುರ್ಗ ನಗರದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದಿಂದ 60, ನಗರಸಭೆಯಿಂದ 83 ಉದ್ಯಾನ ನಿರ್ಮಿಸಲಾಗಿದೆ. ಇವುಗಳ ನಿರ್ವಹಣೆಯೇ ಈಗ ಸವಾಲಾಗಿದೆ.
ನಗರ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ಕುಡಾದಿಂದ ಒಟ್ಟು 60 ಉದ್ಯಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಪ್ರಾಧಿಕಾರ ರಚನೆಯಾದ ಬಳಿಕ ನಿಧಾನಗತಿಯಲ್ಲಿ ಸಾಗುತ್ತಿದ್ದ ಉದ್ಯಾನಗಳ ಅಭಿವೃದ್ಧಿ ಕಾರ್ಯ ಈಗ ವೇಗ ಪಡೆದಿದೆ.
ರೋಟರಿ ಬಾಲಭವನದ ಮುಂಭಾಗ, ತುರವನೂರು ರಸ್ತೆ, ಜೋಗಿಮಟ್ಟಿ ರಸ್ತೆ, ಜಿಲ್ಲಾ ಆಸ್ಪತ್ರೆ ಎದುರು, ತಮಟಕಲ್ಲು ರಸ್ತೆ, ಸರಸ್ವತಿಪುರಂ, ಮೆದೇಹಳ್ಳಿ, ವಿದ್ಯಾನಗರ, ಧವಳಗಿರಿ ಬಡಾವಣೆ, ಎಂ.ಕೆ.ಹಟ್ಟಿ, ಬ್ಯಾಂಕ್ ಕಾಲೊನಿ, ಚಳ್ಳಕೆರೆ ರಸ್ತೆ, ಕೆಳಗೋಟೆ, ಕೆಎಚ್‌ಬಿ ಕಾಲೊನಿ, ಪಿಳ್ಳೇಕೆರೆನಹಳ್ಳಿ ರಸ್ತೆ ಹೀಗೆ ಎಲ್ಲೆಡೆ ನಿರ್ಮಿಸಿರುವ ಉದ್ಯಾನಗಳು ಪ್ರಾರಂಭದಲ್ಲಿ ನಾಗರಿಕರ ನೆಚ್ಚಿನ ತಾಣಗಳಾಗಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಸರಸ್ವತಿಪುರಂ, ಐಯುಡಿಪಿ ಸೇರಿದಂತೆ ಕೆಲ ಬಡಾವಣೆಗಳಲ್ಲಿ ಸ್ಥಳೀಯರು, ಸಂಘ-ಸಂಸ್ಥೆಯವರು ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಬೇಸಿಗೆಯಲ್ಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಆದರೆ, ಇಲ್ಲಿಯೂ ಊಟ, ತಿಂಡಿ ಕವರ್‌ಗಳನ್ನು ಎಸೆಯಲಾಗುತ್ತಿದೆ. ಇದು ಸ್ಥಳೀಯರ ಬೇಸರಕ್ಕೂ ಕಾರಣವಾಗಿದೆ.
₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ಯೂನಿಯನ್ ಪಾರ್ಕ್ ಪುನಃ ಅವ್ಯವಸ್ಥೆಯ ಆಗರವಾಗಿದೆ. ಉದ್ಯಾನಗಳಲ್ಲಿ ಐದು ನಿಮಿಷ ಕುಳಿತುಕೊಳ್ಳಲೂ ಸಾಧ್ಯವಾಗದ ಸ್ಥಿತಿಯಿದೆ. ಸೊಳ್ಳೆ, ವಿಷಜಂತುಗಳ ಆವಾಸ ಸ್ಥಾನವಾಗಿದ್ದು, ಕೆಲವೆಡೆ ನಿರ್ಗತಿಕರು ಮಲಗುವ ಸ್ಥಳಗಳಾಗಿಯೂ ಪರಿವರ್ತನೆ ಹೊಂದಿವೆ. ಮೂಲ ಸೌಲಭ್ಯ ಇಲ್ಲದೇ ಉದ್ಯಾನಗಳು ಸೊರಗಿ ಹೋಗುತ್ತಿವೆ.
ಉದ್ಯಾನಕ್ಕೆ ಭೇಟಿ ನೀಡುವ ಜನರು ತಿನಿಸುಗಳನ್ನು ತಿಂದು ಅಲ್ಲೇ ಬಿಸಾಡುತ್ತಾರೆ. ಹೀಗಾಗಿ, ಕೆಲ ಉದ್ಯಾನಗಳಲ್ಲಿ ಕಸ ರಾರಾಜಿಸುತ್ತಿವೆ. ಎಲ್ಲೆಂದರಲ್ಲಿ ಬಿದ್ದ ಈ ಕಸವನ್ನು ಪುನಃ ನಗರಸಭೆ ಸಿಬ್ಬಂದಿಯೇ ಎತ್ತಿ ಹಾಕಬೇಕಿದೆ. ಹಸಿರು ಹೊದಿಕೆಗಾಗಿ ಲಾನ್ ಹಾಕಲಾಗುತ್ತದೆ. ಆದರೆ, ಅದಕ್ಕೆ ಸರಿಯಾದ ಸಮಯದಲ್ಲಿ ನೀರು ಬಿಡಬೇಕು. ಕಳೆ ಬೆಳೆಯದಂತೆ ನಿರ್ವಹಣೆ ಮಾಡಬೇಕು. ಇಂತಹ ಯಾವ ಕೆಲಸವೂ ನಗರ ವ್ಯಾಪ್ತಿಯ ಉದ್ಯಾನಗಳಲ್ಲಿ ನಡೆಯುತ್ತಿಲ್ಲ.
ಪ್ರಾಧಿಕಾರದಲ್ಲಿ ಗಾರ್ಡ್‌ಗಳು, ಸ್ಥಳೀಯ ಸಂಸ್ಥೆಯಲ್ಲಿ ಪೌರ ಕಾರ್ಮಿಕರ ಕೊರತೆ ಇರುವುದು ಉದ್ಯಾನಗಳ ಸ್ವಚ್ಛತೆಗೆ ತೊಡಕಾಗಿ ಪರಿಣಮಿಸಿದೆ. ಆದರೂ ಆದ್ಯತೆ ಅನುಸಾರ ಕೆಲವು ಕಡೆ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುತ್ತಿದೆ.
ನಗರದಲ್ಲಿ ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ ಎಂಬುದು ಗಮನದಲ್ಲಿದೆ. ಇದಕ್ಕೆ ಪೌರ ಕಾರ್ಮಿಕರ ಕೊರತೆ ಕಾರಣವಾಗಿದ್ದು ಇದು ನೀಗಿದ ಬಳಿಕ ಅವರಿಗೆ ಜವಾಬ್ದಾರಿವಹಿಸಲಾಗುತ್ತದೆ. ಅಲ್ಲಿಯವರೆಗೂ ಆದ್ಯತೆ ಅನುಸಾರ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ.ಬಿ.ಎನ್.ಸುಮಿತ ನಗರಸಭೆ ಅಧ್ಯಕ್ಷೆ
ಪೌರ ಕಾರ್ಮಿಕರ ಕೊರತೆಯಿಂದಾಗಿ ನಗರಸಭೆಯ ಉದ್ಯಾನಗಳ ನಿರ್ವಹಣೆ ಸವಾಲಾಗಿದೆ. ಕುಡಾದಿಂದ ಅಭಿವೃದ್ಧಿಪಡಿಸಿರುವ ಉದ್ಯಾನಗಳು ನಿರ್ವಹಣೆಯಿಲ್ಲದೆ ಸೊರಗಿವೆ. ಈ ಕಾರಣಕ್ಕೆ ಹಸ್ತಾಂತರ ಮಾಡಿಕೊಂಡಿಲ್ಲ. ಶೀಘ್ರ ಸಭೆ ನಡೆಸಿ ಇದಕ್ಕೆ ಪರಿಹಾರ ಕಲ್ಪಿಸಲಾಗುತ್ತದೆ.ಎಂ.ರೇಣುಕಾ ಪೌರಾಯುಕ್ತೆ
ಸರಿಯಾದ ಉದ್ಯಾನಗಳು ಇಲ್ಲದ ಕಾರಣ ವಾಯು ವಿಹಾರಿಗಳು ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಗಿಡಮರಗಳಂತೂ ಯಾವ ಬಡಾವಣೆಗಳಲ್ಲೂ ಇಲ್ಲ. ಇನ್ನಾದರೂ ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯತ್ತ ಗಮನಹರಿಸಿದರೆ ಉತ್ತಮ. ಲೋಹಿತ್ ವಿದ್ಯಾರ್ಥಿ ಹೊಸದುರ್ಗಸರಿಯಾದ ಉದ್ಯಾನಗಳು ಇಲ್ಲದ ಕಾರಣ ವಾಯು ವಿಹಾರಿಗಳು ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಗಿಡಮರಗಳಂತೂ ಯಾವ ಬಡಾವಣೆಗಳಲ್ಲೂ ಇಲ್ಲ. ಇನ್ನಾದರೂ ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯತ್ತ ಗಮನಹರಿಸಿದರೆ ಉತ್ತಮ. ಲೋಹಿತ್ ವಿದ್ಯಾರ್ಥಿ ಹೊಸದುರ್ಗ
ಸರಿಯಾದ ಉದ್ಯಾನಗಳು ಇಲ್ಲದ ಕಾರಣ ವಾಯು ವಿಹಾರಿಗಳು ಮಕ್ಕಳು ಸಮಸ್ಯೆ ಅನುಭವಿಸುವಂತಾಗಿದೆ. ಗಿಡಮರಗಳಂತೂ ಯಾವ ಬಡಾವಣೆಗಳಲ್ಲೂ ಇಲ್ಲ. ಇನ್ನಾದರೂ ಉದ್ಯಾನಗಳ ಅಭಿವೃದ್ಧಿ ನಿರ್ವಹಣೆಯತ್ತ ಗಮನಹರಿಸಿದರೆ ಉತ್ತಮ.ಲೋಹಿತ್ ವಿದ್ಯಾರ್ಥಿ ಹೊಸದುರ್ಗ
ಉದ್ಯಾನಕ್ಕೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ನಿರ್ವಹಣೆಯಿಲ್ಲದೆ ಹಾಳಾಗಿದ್ದು ವಿಷಜಂತು ಕಾಟ ಹೆಚ್ಚಾಗಿದೆ. ಓಪನ್ ಜಿಮ್ ಸಾಮಗ್ರಿಗಳು ಮುರಿದು ಬಿದ್ದಿವೆ. ಜೋಕಾಲಿ ಕೆಳಗೆ ಹಾಕಿದ್ದ ಮರಳು ಕಾಣೆಯಾಗಿದೆ.ಎಸ್.ಪ್ರಕಾಶ್ ಸ್ಥಳೀಯರು ಚಿತ್ರದುರ್ಗ
ಪ್ರತಿ ವರ್ಷ ಬಜೆಟ್‍ನಲ್ಲಿ ಉದ್ಯಾನಕ್ಕೆ ಮೀಸಲಿರಿಸುವ ಅನುದಾನ ಏನಾಗುತ್ತೊ ಗೊತ್ತಾಗುತ್ತಿಲ್ಲ. ಕಸ-ಕಡ್ಡಿ ಕೊಚ್ಚೆ ಮಲೀನಗೊಂಡ ನೀರು ತುಂಬಿಕೊಂಡ ಸ್ಥಿತಿಯಲ್ಲಿವೆ. ಹಸಿರು ಪರಿಸರವನ್ನು ಹುಡುಕಿಕೊಂಡು ಹೋಗುವಂತಾಗಿದೆ.ಜಿ.ವಿ.ರಾಜಣ್ಣ ಸ್ಥಳೀಯರು ಚಳ್ಳಕೆರೆ
ನಗರಸಭೆ ಸದಸ್ಯರು ಉದ್ಯಾನಗಳ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಇಡೀ ನಗರಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನ ಆಸರೆಯಾಗಿದೆ. ಆದರೆ ಅಲ್ಲಿಗೆ ಮಕ್ಕಳನ್ನು ಕರೆದೊಯ್ಯಲು ₹ 200 ಆಟೊ ಬಾಡಿಗೆ ನೀಡಬೇಕು.ರೇಖಾ ಸ್ಥಳೀಯರು ಚಳ್ಳಕೆರೆ
-ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ನಗರಸಭೆ ಆಡಳಿತದ ನಿರ್ಲಕ್ಷದಿಂದ ಇಲ್ಲಿನ ಉದ್ಯಾನಗಳು ಅಧೋಗತಿಗೆ ತಲುಪಿವೆ. ಈ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳು ಆಟೋಟಕ್ಕೆ ಪರದಾಡುವಂತಾಗಿದೆ. ಚಿತ್ರದುರ್ಗ ರಸ್ತೆಯ ಸಾಮಾಜಿಕ ಅರಣ್ಯ ಪ್ರದೇಶದ ಸಾಲುಮರದ ತಿಮ್ಮಕ್ಕ ಉದ್ಯಾನ ಹೇಳಿಕೊಳ್ಳುವಂತಿದೆ. ಆದರೆ ತ್ಯಾಗರಾಜನಗರ ಗಾಂಧಿನಗರ ಹಳೆಟೌನ್ ಚಿತ್ರಯ್ಯನಹಟ್ಟಿ ವಾಲ್ಮೀಕಿನಗರ ವಿಠ್ಠಲನಗರ ಚನ್ನಂಗಿ ಲೇಔಟ್ ಸೇರಿದಂತೆ ನಗರ ಪ್ರದೇಶದ ಉದ್ಯಾನಗಳು ದುಃಸ್ಥಿತಿಗೆ ತಲುಪಿವೆ.
ನೀರಿನ ವ್ಯವಸ್ಥೆ ಗಿಡ-ಮರ ಹೂವಿನ ಗಿಡಗಳು ಇಲ್ಲವಾಗಿವೆ. ಕನಿಷ್ಠ ಕುಳಿತುಕೊಳ್ಳಲೂ ಆಸನಗಳನ್ನು ಹುಡುಕುವಂತಾಗಿದೆ. ರಕ್ಷಣೆಗೆ ಹಾಕಿದ್ದ ಮುಳ್ಳುತಂತಿ ಬೇಲಿ ಕಿತ್ತು ಹೋಗಿದೆ. ಸುತ್ತಲೂ ನಿರ್ಮಿಸಿದ್ದ ತಡೆಗೋಡೆ ಬಿದ್ದು ಹೋಗಿವೆ. ಹೀಗಾಗಿ ಬೇಸಿಗೆ ರಜೆ ಬಂತೆಂದರೆ ನಗರದ ವಿದ್ಯಾರ್ಥಿಗಳು ರಸ್ತೆ ಹಾಗೂ ಖಾಲಿ ನಿವೇಶನದಲ್ಲಿ ಆಟ ಆಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಅಂಬೇಡ್ಕರ್ ನಗರ ಕುಬೇರ ನಗರ ಜನತಾ ಕಾಲೊನಿ ಮದಕರಿನಗರ ಇಂಜನಹಟ್ಟಿ ಶಾಂತಿನಗರ ಭಾಗದ ಉದ್ಯಾನಗಳ ಜಾಗದಲ್ಲಿ ಅಕ್ರಮ ವಸತಿ ನಿರ್ಮಾಣವಾಗಿವೆ. ತಿಪ್ಪಜ್ಜಿ ಲೇಔಟ್‌ನ ಮಾದರಿ ಉದ್ಯಾನದ ಗೇಟಿಗೆ ಸದಾ ಬೀಗ ಹಾಕಿರುತ್ತಾರೆ. ತ್ಯಾಗರಾಜನಗರದ ಉದ್ಯಾನದಲ್ಲಿ ಬೌದ್ಧ ಪಿರಮಿಡ್ ಧ್ಯಾನಕೇಂದ್ರ ನವಚೇತನ ಶಾಲೆ ಬಳಿ ಈಶ್ವರ ದೇವಸ್ಥಾನ ಗಾಂಧಿನಗರದಲ್ಲಿ ಸಾಯಿ ದೇವಸ್ಥಾನ ಭಜನಾ ಮಂದಿರ ಚಿತ್ರಯ್ಯನಹಟ್ಟಿಯಲ್ಲಿ ಶ್ರೀಗೌರಿದೇವಿ ದೇವಸ್ಥಾನ ಹಳೆಟೌನ್ ಓರಗಲ್ಲಮ್ಮ ದೇವಸ್ಥಾನ ನಿರ್ಮಿಸಲಾಗಿದೆ. ತ್ಯಾಗರಾಜ ನಗರದ ಉದ್ಯಾನಕ್ಕೆ ಅಳವಡಿಸಿದ್ದ ಕಬ್ಬಿಣದ ದ್ವಾರಬಾಗಿಲು ಮುರಿದು ಹೋಗಿದೆ. ಕಾಂಪೌಂಡ್ ಕುಸಿದು ಬಿದ್ದಿದೆ.
ಹಳೆ ಪ್ಲಾಸ್ಟಿಕ್ ಕಸ-ಕಡ್ಡಿಯಿಂದ ತುಂಬಿ ಹೋಗಿದೆ. ಪಾವಗಡ ರಸ್ತೆ ಬಳಿ ಇದ್ದ ನಗರಸಭೆ ಉದ್ಯಾನವನ್ನು ವಾರದ ಸಂತೆ ಮೈದಾನಕ್ಕೆ ಬಿಟ್ಟುಕೊಡಲಾಗಿದೆ. ಹಾಗಾಗಿ ನಗರದಲ್ಲಿ ಎಲ್ಲಿಯೂ ಹೇಳಿಕೊಳ್ಳುವಂತಹ ಸುಂದರ ಉದ್ಯಾನ ಇಲ್ಲದಿರುವುದು ಶೋಚನೀಯ ಸಂಗತಿ.
- ಬಿ.ಸುವರ್ಣ ಬಸವರಾಜ್
ಹಿರಿಯೂರು: ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನಾದರೂ ಹರಿಸಿದರೆ ಅಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಒಂದೆರಡು ಗಂಟೆ ಈಜಾಡಿಸಿ ಕರೆತರಬಹುದು. ಆಗ ಅವರು ಗಲಾಟೆ ಮಾಡದೆ ಸುಮ್ಮನಿರುತ್ತಾರೆ. ಆದರೆ ಹಿರಿಯೂರಿನಲ್ಲಿ ಮಕ್ಕಳಿಗೆ ಆಟಕ್ಕೆಂದು ಒಂದೇ ಒಂದು ಸರಿಯಾದ ಸ್ಥಳವೇ ಇಲ್ಲ. ಪ್ರೌಢಶಾಲಾ ಹಂತದವರೆಗಿನ ಮಕ್ಕಳಿರುವ ಪ್ರತಿ ಮನೆಯಲ್ಲೂ ಪೋಷಕರಿಂದ ಇಂತಹ ಮಾತುಗಳು ಕೇಳಿ ಬರುತ್ತವೆ.
ನಗರದಲ್ಲಿ ಬರೋಬ್ಬರಿ ನೂರು ಉದ್ಯಾನಗಳಿವೆ ಎಂದು ನಗರಸಭೆಯ ಅಧಿಕೃತ ದಾಖಲೆ ಹೇಳುತ್ತವೆ. ಆದರೆ ಅವೆಲ್ಲಾ ನಿರ್ವಹಣೆ ಕೊರತೆಯಿಂದ ನಲುಗಿವೆ. ಉದ್ಯಾನಗಳನ್ನು ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ನಗರಸಭೆ ಆಡಳಿತಕ್ಕೆ ಮಾಡಿರುವ ಮನವಿಗಳಿಗೆ ಲೆಕ್ಕವೇ ಇಲ್ಲ. ರಸ್ತೆಯ ಕಸ ಗುಡಿಸಿ ಚರಂಡಿ ಸ್ವಚ್ಛಗೊಳಿಸಿದರೆ ಸಾಕು ಎಂಬಂತಹ ಸ್ಥಿತಿಯಲ್ಲಿ ನಗರಸಭೆ ಇದೆ. ಇದಕ್ಕೆ ಕಾರಣ ಪೌರಕಾರ್ಮಿಕರ ಕೊರತೆ. ಸಾಯಿ ಬಡಾವಣೆಯಲ್ಲಿರುವ ಉದ್ಯಾನದಲ್ಲಿ ತಂತಿ ಬೇಲಿಯನ್ನು ಮೀರಿಸುವಷ್ಟು ಎತ್ತರಕ್ಕೆ ಹುಲ್ಲು ಬೆಳೆದು ನಿಂತಿದೆ. ಒಳಗೆ ನೆಟ್ಟಿದ್ದ ಗಿಡಗಳು ಹುಲ್ಲಿನ ಪೊದೆಯಲ್ಲಿ ಕಣ್ಮರೆಯಾಗಿ ಹೋಗಿವೆ. ಅಲೆಮಾರಿ ಜನಾಂಗದವರು ಉದ್ಯಾನದ ಒಂದು ಭಾಗವನ್ನು ತಮ್ಮ ವಾಸ ಸ್ಥಾನ ಮಾಡಿಕೊಂಡಿದ್ದಾರೆ.
ಪ್ರತಿ ಬಡಾವಣೆಯಲ್ಲೂ ಉದ್ಯಾನಗಳಿಗೆ ಮೀಸಲಿಟ್ಟಿರುವ ಜಾಗಗಳಿದ್ದರೂ ಅವೆಲ್ಲ ಖಾಲಿ ಬಿದ್ದಿವೆ. ಕೆಲವು ಹಳೆಯ ಉದ್ಯಾನಗಳಲ್ಲಿ ಕಾಡು ಜಾತಿಯ ಒಂದಿಷ್ಟು ಮರಗಳು ಜೀವ ಹಿಡಿದುಕೊಂಡು ಬದುಕುತ್ತಿವೆ. ‘ಖಾಸಗಿಯವರು ಅಭಿವೃದ್ಧಿ ಪಡಿಸಿರುವ ಬಡಾವಣೆಗಳಲ್ಲಿನ ಉದ್ಯಾನಗಳನ್ನು ನಗರಸಭೆಗೆ ಹಸ್ತಾಂತರಿಸಿದ ನಂತರ ಅವೆಲ್ಲ ಹುಲ್ಲುಗಾವಲುಗಳಂತಾಗಿವೆ. ಗಿಡ–ಮರಗಳು ಉದ್ಯಾನಗಳು ನಗರದ ಅಂದವನ್ನು ಹೆಚ್ಚಿಸುವ ಜತೆಗೆ ಜನರ ಆರೋಗ್ಯ ರಕ್ಷಣೆ ಮಾಡುತ್ತವೆ ಎಂಬ ಅರಿವು ನಗರಸಭೆ ಆಡಳಿತಕ್ಕೆ ಇದ್ದಂತಿಲ್ಲ’ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಬಿ.ಆರ್. ರಮೇಶ್. ‘ನಮ್ಮಲ್ಲಿ ನೀರಿನ ಕೊರತೆ ಇಲ್ಲ. ಪ್ರತಿ ಬಡಾವಣೆಯಲ್ಲೂ ನಾಗರಿಕರ ಸಮಿತಿ ರಚಿಸಿ ಉದ್ಯಾನಗಳ ನಿರ್ವಹಣೆಯ ಹೊಣೆಯನ್ನು ಅವರಿಗೆ ನೀಡಬೇಕು’ ಎನ್ನುತ್ತಾರೆ ಶಿಕ್ಷಕರ ಬಡಾವಣೆ ನಿವಾಸಿ ಎಂ.ಒ.ಮಂಜುನಾಥ್.
-ಎಚ್.ಡಿ.ಸಂತೋಷ್
ಹೊಸದುರ್ಗ: ಪಟ್ಟಣದಲ್ಲಿ ಹಲವು ಲೇಔಟ್‌ಗಳಿವೆ. ಆದರೆ ಉದ್ಯಾನಗಳಿಗೆ ಮಾತ್ರ ಹುಡುಕಾಟ ತಪ್ಪಿಲ್ಲ. ಅಲ್ಲಲ್ಲಿ ಒಂದೋ..ಎರಡೋ ಮಾತ್ರ ಕಾಣಸಿಗುತ್ತವೆ. ಅವು ಸಹ ನಿರ್ವಹಣೆ ಕೊರತೆಯಿಂದ ಹಾಳಾಗಿವೆ. ವಿದ್ಯಾನಗರ ಬಡಾವಣೆಯಲ್ಲಿ ಉದ್ಯಾನ ನಿರ್ಮಾಣಕ್ಕೆ ಸ್ಥಳ ಮೀಸಲಿರಿಸಲಾಗಿದೆ. ಆದರೆ ಇನ್ನೂ ಉದ್ಯಾನ ತಲೆ ಎತ್ತಿಲ್ಲ. ಪಟ್ಟಣದ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಉದ್ಯಾನವು ನಿರ್ವಹಣೆ ಕೊರತೆಯಿದ ಸೊರಗಿದೆ. ಕಲ್ಲೇಶ್ವರ ಬಡಾವಣೆಯ ಉದ್ಯಾನದ ಸ್ಥಿತಿಯೂ ಭಿನ್ನವಾಗಿಲ್ಲ.
‘ಮಕ್ಕಳಿಗೆ ಬೇಸಿಗೆ ರಜೆ ಇರುವ ಕಾರಣ ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಅವರು ಕೇಳುತ್ತಾರೆ. ಆದರೆ ಇಡೀ ಪಟ್ಟಣದಲ್ಲಿ ಒಂದು ಸುಸಜ್ಜಿತ ಸ್ಥಳವಿಲ್ಲ. ಇರುವ ಕಡೆ ಗಿಡ ಆಸನಗಳೇ ಇಲ್ಲ. ಈ ಬಗ್ಗೆ ಸ್ಥಳೀಯ ಸಂಸ್ಥೆ ಗಮನಹರಿಸಿದರೆ ಪಟ್ಟಣವೂ ಸುಂದರವಾಗಿ ಕಾಣುತ್ತದೆ’ ಎನ್ನುತ್ತಾರೆ ಕಲ್ಲೇಶ್ವರ ಬಡಾವಣೆ ನಿವಾಸಿ ರೂಪ. ‘ಪಟ್ಟಣದಲ್ಲಿ ಉದ್ಯಾನಗಳ ನಿರ್ವಹಣೆ ಜವಾಬ್ದಾರಿಯನ್ನು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ. ಅಮೃತ್ ಯೋಜನೆಯಡಿ ₹ 3 ಕೋಟಿ ವೆಚ್ಚದಲ್ಲಿ ಬೃಹತ್ ಉದ್ಯಾನ ನಿರ್ಮಿಸುವ ಸಂಬಂಧ ಸರ್ಕಾರಕ್ಕೆ ಯೋಜನಾ ವರದಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಜಿ.ವಿ.ತಿಮ್ಮರಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.