ADVERTISEMENT

ಚಿತ್ರದುರ್ಗ| ಪ್ರೇಕ್ಷಕರನ್ನು ಆಕರ್ಷಿಸುವ ವೃತ್ತಿ ರಂಗಭೂಮಿ: ಶಿವಾಚಾರ್ಯ ಸ್ವಾಮೀಜಿ

ನಾಟಕ ಪ್ರದರ್ಶನಕ್ಕೆ ಚಾಲನೆ; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:26 IST
Last Updated 23 ಜುಲೈ 2024, 16:26 IST
ತರಾಸು ರಂಗಮಂದಿರದಲ್ಲಿ ಶ್ರೀಗುರು ವಾದ್ಯವೃಂದ, ಸಂಚಾರಿ ಕೆಬಿಆರ್‌ ಡ್ರಾಮಾ ಕಂಪನಿ, ಕನ್ನಡ ಕಲಾವಿದರ ಸಂಘ ಆಯೋಜಿಸಿದ್ದ ‘ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನಕ್ಕೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಚಿಂದೋಡಿ ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ದಿನೇಶ್‌ ಗೌಡಗೆರೆ, ಗಣೇಶ್‌, ಮುರಾರ್ಜಿ ಇದ್ದರು
ತರಾಸು ರಂಗಮಂದಿರದಲ್ಲಿ ಶ್ರೀಗುರು ವಾದ್ಯವೃಂದ, ಸಂಚಾರಿ ಕೆಬಿಆರ್‌ ಡ್ರಾಮಾ ಕಂಪನಿ, ಕನ್ನಡ ಕಲಾವಿದರ ಸಂಘ ಆಯೋಜಿಸಿದ್ದ ‘ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನಕ್ಕೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಚಿಂದೋಡಿ ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ದಿನೇಶ್‌ ಗೌಡಗೆರೆ, ಗಣೇಶ್‌, ಮುರಾರ್ಜಿ ಇದ್ದರು   

ಚಿತ್ರದುರ್ಗ: ‘ಪ್ರೇಕ್ಷಕರನ್ನು ಆಕರ್ಷಿಸುವ ಗುಣ ವೃತ್ತಿರಂಗಭೂಮಿಯಲ್ಲಿದ್ದು ಹವ್ಯಾಸಿ ರಂಗ ತಂಡಗಳು ಈ ಗುಣವನ್ನು ತಮ್ಮ ಪ್ರಯೋಗಗಳಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿ ಹವ್ಯಾಸಿ ರಂಗಭೂಮಿಯಲ್ಲಿರುವ ಶಿಸ್ತನ್ನು ವೃತ್ತಿ ರಂಗ ತಂಡಗಳು ಅಳವಡಿಸಿಕೊಳ್ಳಬೇಕು’ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ನಗರದ ತರಾಸು ರಂಗಮಂದಿರದಲ್ಲಿ ಶ್ರೀಗುರು ವಾದ್ಯವೃಂದ, ಸಂಚಾರಿ ಕೆಬಿಆರ್‌ ಡ್ರಾಮಾ ಕಂಪನಿ, ಕನ್ನಡ ಕಲಾವಿದರ ಸಂಘ ಆಯೋಜಿಸಿದ್ದ ‘ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಒಂದುಗೂಡಿದರೆ ಒಟ್ಟಾರೆ ರಂಗಭೂಮಿಯನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ. ಒಂದು ಕಾಲದಲ್ಲಿ ವೃತ್ತಿ ರಂಗಭೂಮಿ ಕಂಪನಿ ಕ್ಯಾಂಪ್‌ ಹಾಕಿದರೆ ಜನರು ಸಾಲುಗಟ್ಟಿ ತೆರಳಿ ನಾಟಕ ನೋಡುತ್ತಿದ್ದರು. ನಾಟಕದಲ್ಲಿ ಸಾಮಾಜಿಕ ಸಂದೇಶ ಇರುತ್ತಿತ್ತು. ಸಮಸ್ಯೆಗಳನ್ನು ಎದುರಿಸುವ ಎಚ್ಚರಿಕೆ ಇರುತ್ತಿತ್ತು. ಆದರೆ ಇಂದು ವೃತ್ತಿ ರಂಗಭೂಮಿ ಹೊರಳು ಹಾದಿಯಲ್ಲಿದೆ’ ಎಂದರು.

ADVERTISEMENT

‘ಇತ್ತೀಚೆಗೆ ವೃತ್ತಿ ರಂಗಭೂಮಿ ನಾಟಕಗಳಲ್ಲಿ ದ್ವಂಧ್ವಾರ್ಥದ ಸಂಭಾಷಣೆ, ಕಿವಿಗಡಚುವ ಸಂಗೀತ, ವಿಚಿತ್ರ ನೃತ್ಯ ಹೆಚ್ಚುತ್ತಿದೆ. ಬಾದಾಮಿ ಜಾತ್ರೆಯಲ್ಲಿ ನಡೆಯುವ ನಾಟಕಗಳಲ್ಲಿ ಇಂತಹ ನಾಟಕಗಳೇ ನಡೆಯುವುದನ್ನು ನಾವು ನೋಡಿದ್ದೇವೆ. ಸಾಮಾಜಿಕ ಸಂದೇಶವುಳ್ಳ ನಾಟಕಗಳನ್ನು ಜನರು ನೋಡುವುದಿಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ವೃತ್ತಿ ಹಾಗೂ ಹವ್ಯಾಸಿ ನಾಟಕಗಳನ್ನು ಒಂದುಗೂಡಿಸು ಒಂದು ರೂಪ ನೀಡಬೇಕಾದ ಅವಶ್ಯಕತೆ ಇದೆ’ ಎಂದರು.

‘ನಾವು ಸಾಣೆಹಳ್ಳಿಯಲ್ಲಿ ಶಿವಸಂಚಾರ ರಂಗತಂಡ ಆರಂಭಿಸಿದಾಗ ಕೆಲವರು ಅದನ್ನು ಪ್ರಶ್ನಿಸಿದ್ದರು. ಹವ್ಯಾಸಿ ನಾಟಕಗಳನ್ನು ಯಾರು ನೋಡುತ್ತಾರೆ, ಜನರನ್ನು ಆಕರ್ಷಿಸಲು ಸಾಧ್ಯವೇ ಎಂಬೆಲ್ಲಾ ಪ್ರಶ್ನೆಗಳು ಬಂದಿದ್ದವು. ಆದರೆ ನಾಟಕಗಳು ಯಶಸ್ವಿಯಾದ ನಂತರ ಇಂತಹ ಪರಿಣಾಮಕಾರಿ ನಾಟಕಗಳ ಅವಶ್ಯಕತೆ ಸಮಾಜಕ್ಕೆ ಬೇಕಾಗಿದೆ ಎಂಬ ಸಂದೇಶ ಸಮಾಜದಲ್ಲಿ ಮೂಡಿತು’ ಎಂದರು.

‘ಸಾಣೆಹಳ್ಳಿಯಲ್ಲಿ ನಾವು ಪ್ರತಿ ವರ್ಷ ವೃತ್ತಿ ರಂಗಭೂಮಿಯ ನಾಟಕವನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ಆಯೋಜಿಸುತ್ತೇವೆ. ‘ಮುದುಕನ ಮದುವೆ’ ನಾಟಕ ಅಪರೂಪದ ಪ್ರಯೋಗವಾಗಿದ್ದು ಜನರ ಮೆಚ್ಚುಗೆ ಗಳಿಸಿತು. ವೃತ್ತಿರಂಗಭೂಮಿ ನಟರಿಗಿಂತಲೂ ನಮ್ಮ ಹವ್ಯಾಸಿ ನಟರು ಒಂದು ಕೈ ಮೇಲು ಎಂಬಂತೆ ಸಮರ್ಥವಾಗಿ ಅಭಿನಯಿಸಿದರು‘ ಎಂದರು.

‘ವೃತ್ತಿ ರಂಗಭೂಮಿ ಸದಾ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದೆ. ವೃತ್ತಿ ರಂಗ ಕಂಪನಿಗಳನ್ನು ನಡೆಸುವುದೇ ಕಷ್ಟವಾಗಿದೆ. ಕಂಪನಿಗಳ ಮಾಲೀಕರು ಸಾಕಷ್ಟ ಸಾಲ ಮಾಡಿ ಮುನ್ನಡೆಸುತ್ತಾ ಬರುತ್ತಿದ್ದಾರೆ. ಸರ್ಕಾರ ಇಂತಹ ರಂಗ ತಂಡಗಳ ಪೋಷಣೆಗೆ ಸಹಕಾರ ನೀಡಬೇಕು. ಕಂಪನಿ ನಾಟಕ ಕಲೆಯನ್ನು ಉಳಿಸುವ ಕೆಲಸ ಮಾಡಬೇಕು‘ ಎಂದು ಒತ್ತಾಯಿಸಿದರು.

ಸಮಾರಂಭದಲ್ಲಿ ಕೆಬಿಆರ್‌ ಡ್ರಾಮ ಕಂಪನಿ ಮಾಲೀಕ ಚಿಂದೋಡಿ ಶಂಭುಲಿಂಗಪ್ಪ, ವಕೀಲರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪತ್ರಕರ್ತರ ಅಧ್ಯಕ್ಷ ದಿನೇಶ್‌ ಗೌಡಗೆರೆ, ಕಲಾವಿದರ ಸಂಘದ ಅಧ್ಯಕ್ಷ ಕೆ.ಗಣೇಶ್‌,ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿಒ ಮುರಾರ್ಜಿ ಇದ್ದರು.

ವೃತ್ತಿ ರಂಗಭೂಮಿಯಲ್ಲಿ ಸಂಕಷ್ಟಗಳೇ ಹೆಚ್ಚು ಸರ್ಕಾರ ಕಂಪನಿ ನಾಟಕಗಳನ್ನು ಉಳಿಸಲಿ ರಂಗಭೂಮಿ ಶ್ರೀಮಂತಗೊಳಿಸುವ ಅವಶ್ಯಕತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.