ಎಂ.ಎನ್.ಯೋಗೇಶ್
ಚಿತ್ರದುರ್ಗ: ‘ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಅಧಿಕಾರಿಗಳು ಪ್ರತಿ ವರ್ಷ ಹೇಳುತ್ತಾರೆ. ಆದರೆ ಹಬ್ಬಕ್ಕೆ ಇನ್ನೊಂದು ದಿನವಿದೆ ಎನ್ನುವ ಹೊತ್ತಿಗೆ ಎಲ್ಲೆಲ್ಲೂ ಪಿಒಪಿ ಗಣೇಶ ಮೂರ್ತಿಗಳನ್ನೇ ಮಾರಾಟ ಮಾಡುತ್ತಾರೆ. ಇದರಿಂದ ಪ್ರಾಮಾಣಿಕವಾಗಿ ಮಣ್ಣಿನ ಮೂರ್ತಿ ತಯಾರಿಸಿದ ನಮಗೆ ನಷ್ಟವಾಗುತ್ತದೆ’ ಎಂದು ದೊಡ್ಡಪೇಟೆಯ ಗಣೇಶ ಮೂರ್ತಿ ತಯಾರಕ ಗುರುಮೂರ್ತಿ ನೋವಿನಿಂದ ನುಡಿದರು.
ಪ್ರತಿ ವರ್ಷದಂತೆ ಈ ವರ್ಷ ಕೂಡ ನಗರದ ವಿವಿಧೆಡೆ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಮಾಡಲು ಕೆಲ ವರ್ತಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಸಾಂಪ್ರದಾಯಿಕವಾಗಿ ಮಣ್ಣಿನ ಗಣಪತಿ ತಯಾರಿಸುವ ಕುಟುಂಬಗಳು ಒತ್ತಾಯಿಸಿವೆ. ಹಬ್ಬಕ್ಕೆ ಒಂದು ತಿಂಗಳು ಇರುವಾಗಲೇ ನಗರಸಭೆ ಅಧಿಕಾರಿಗಳು ಪಿಒಪಿ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸುತ್ತಾರೆ. ಆದರೆ, ಕಡೆಗೆ ಕೆಲವರು ಪಿಒಪಿ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರೋಪಿಸುತ್ತಾರೆ.
ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆಗೆ ಸರ್ಕಾರ 2016ರಲ್ಲಿ ನಿರ್ಬಂಧಿಸಿ ಆದೇಶಿಸಿದೆ. ಆದರೆ, ಎಲ್ಲವೂ ನೆಪ ಮಾತ್ರ ಎನ್ನುವಂತಾಗಿದೆ. ಸಾಂಪ್ರದಾಯಿಕವಾಗಿ ಜೇಡಿ ಮಣ್ಣು ತಂದು ಮೂರ್ತಿ ತಯಾರಿಸುವವರು ತಮ್ಮ ಬದುಕಿನ ಜೊತೆ ಬಂದಿರುವ ಕರಕುಶಲ ಕಲೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಮೂರ್ತಿ ತಯಾರಿಕೆ ಕಲೆಯೇ ಗೊತ್ತಿಲ್ಲದ ಕೆಲವು ವ್ಯಾಪಾರಿಗಳು ಹೊರರಾಜ್ಯಗಳಿಂದ ಪಿಒಪಿ ಗಣೇಶ ಮೂರ್ತಿಗಳನ್ನು ಕಡಿಮೆ ಬೆಲೆಗೆ ತಂದು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ.
‘ಹಬ್ಬಕ್ಕೂ ಆರು ತಿಂಗಳೂ ಮುನ್ನವೇ ಚಿಕ್ಕಜಾಜೂರು, ಕಡೂರು, ನೆಲ್ಲಿಕಟ್ಟೆ, ರಾಮಗಿರಿ, ಭರಮಸಾಗರ, ಹಂಪನೂರು, ಎಚ್.ಡಿ.ಪುರ ಸೇರಿದಂತೆ ಸುತ್ತಮುತ್ತಲಿನ ಕೆರೆಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತಂದು ಸಂಗ್ರಹಿಸುತ್ತೇವೆ. ಬಳಿಕ ಮಣ್ಣಿನ ಜೊತೆ ಹತ್ತಿ, ನಾರು ಮಿಶ್ರಣ ಮಾಡಿ ಹದಗೊಳಿಸಿ ಕೆಲ ದಿನ ಬಿಡುತ್ತೇವೆ. ಹಬ್ಬಕ್ಕೆ ಎರಡು ತಿಂಗಳು ಬಾಕಿ ಇರುವಂತೆ ಮೂರ್ತಿ ತಯಾರಿಕೆಗೆ ಕುಟುಂಬದವರು ಪ್ರಾರಂಭಿಸುತ್ತೇವೆ. ನಾವು ಪಡುವ ಕೆಲಸಕ್ಕೆ ಬೆಲೆ ಇಲ್ಲದಾಗಿದೆ. ವ್ಯಾಪಾರಿಗಳು ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುತ್ತಿರುವ ಕಾರಣ ನಮಗೆ ಬೆಲೆ ಇಲ್ಲದಾಗಿದೆ’ ಎಂದು ಮೂರ್ತಿ ತಯಾರಕರು ಬೇಸರ ವ್ಯಕ್ತಪಡಿಸುತ್ತಾರೆ.
ಹಬ್ಬದ 2 ದಿನ ಮುಂಚಿತವಾಗಿ ಮಣ್ಣಿನ ಗಣಪನ ಮೂರ್ತಿಗಳ ಜತೆ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ನಿಧಾನವಾಗಿ ಬರುತ್ತವೆ. ಇವುಗಳನ್ನು ಪತ್ತೆ ಮಾಡುವ ಸಂಬಂಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅಧಿಕಾರಿಗಳ ಕಣ್ಣು ತಪ್ಪಿಸಿ ಪಿಒಪಿ ಮೂರ್ತಿಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತದೆ. ಅವುಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಸುಸೂತ್ರವಾಗಿ ವಿಸರ್ಜನೆ ಕಾರ್ಯ ನಡೆದರೂ ಯಾರೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಕಲಾವಿದರು ಆರೋಪಿಸುತ್ತಾರೆ.
ನಗರದಲ್ಲಿ ನಾಲ್ಕೈದು ಕುಟುಂಬಗಳು ಸಂಪ್ರದಾಯಿಕ ಶೈಲಿಯಲ್ಲಿ ನೈಸರ್ಗಿಕ ಮೂರ್ತಿ ತಯಾರಿಸುತ್ತಾರೆ. ನಗರದ ದೊಡ್ಡಪೇಟೆಯಲ್ಲಿರುವ ಸಿದ್ದೇಶ್ ಕುಟುಂಬ 22 ವರ್ಷದಿಂದ ಜೇಡಿಮಣ್ಣಿನಲ್ಲಿ ಮೂರ್ತಿ ತಯಾರಿಸುತ್ತಿದೆ. ನವಿಲಿನ ಮೇಲಿರುವ ಗಣಪ, ಈಶ್ವರನ ಅವತಾರದ ಗಣಪ, ಇವರ ಕೈಯಲ್ಲಿ ನಂದಿಯ ಮೇಲೆ ಕುಳಿತಿರುವ ಗಣಪತಿ, ಇಲಿಯ ಮೇಲೆ ಸವಾರಿ ಹೊರಟಿರುವ ಏಕದಂತ, ಗದೆಯ ಮೇಲಿರುವ ವಿನಾಯಕ ಹೀಗೆ ಸುಮಾರು 20ರಿಂದ 25ಕ್ಕೂ ವಿವಿಧ ಶೈಲಿಯ ಒಂದಕ್ಕಿಂತ ಒಂದು ಭಿನ್ನವಾಗಿರುವ ಗಣಪತಿಗಳು ಅರಳಿವೆ.
ತ್ಯಾಗರಾಜ ಮಾರುಕಟ್ಟೆ ಬಳಿ 2ರಿಂದ 3 ಕುಟಂಬದ ಸದಸ್ಯರು ದೇಗುಲದ ಪ್ರಾಂಗಣದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಜೇಡಿಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಹೆಚ್ಚಾಗಿ ತಯಾರು ಮಾಡುವಲ್ಲಿ ನಿರತರಾಗಿದ್ದಾರೆ.
‘ಪಿಒಪಿ, ಹುಲ್ಲಿನಿಂದ ಸಿದ್ಧಗೊಳ್ಳುವ ಗಣಪತಿ ಮೂರ್ತಿಗಳು ಬೆಂಗಳೂರು, ಕಲ್ಕತ್ತಾ ಸೇರಿದಂತೆ ವಿವಿಧ ಭಾಗಗಳಿಂದ ಹಬ್ಬದ ಮುನ್ನ ದಿನ ಮಾರುಕಟ್ಟೆ ಪ್ರವೇಶಿಸುತ್ತವೆ. ಕಡಿಮೆ ದರಕ್ಕೆ ಮೂರ್ತಿಗಳನ್ನು ಮಾರಾಟ ಮಾಡುವುದರಿಂದ ತಿಂಗಳಿನಿಂದ ಕಷ್ಟಪಟ್ಟ ಇವರ ಶ್ರಮ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗಣೇಶ ಮೂರ್ತಿ ತಯಾರಕ ಸುಬ್ರಹ್ಮಣ್ಯ ಒತ್ತಾಯಿಸಿದರು.
ಪಿಒಪಿ ಗಣೇಶ ಮೂರ್ತಿ ಮಾರಾಟ ತಡೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ. ನಗರ ಪ್ರವೇಶಿಸುವ ಎಲ್ಲಾ ಗೂಡ್ಸ್ ವಾಹನಗಳನ್ನು ಪರಿಶೀಲನೆ ನಡೆಸಲಾಗುವುದು. ಪೊಲೀಸರ ಸಹಾಯ ಪಡೆದು ಕ್ರಮ ವಹಿಸಲಾಗುವುದುಎಂ.ರೇಣುಕಾ ನಗರಸಭೆ ಪೌರಾಯುಕ್ತೆ
ಶಕ್ತಿ ಗಣಪತಿ; ನಗರಸಭೆ ಪ್ರಾಯೋಜಿತ ಸುವರ್ಣಾ ಬಸವರಾಜ್ ಹಿರಿಯೂರು: ನಗರದ ನೆಹರೂ ಮೈದಾನದಲ್ಲಿ ಹಿಂದಿನ ವರ್ಷ ಪ್ರಥಮ ಬಾರಿಗೆ ಶಕ್ತಿಗಣಪತಿ ಪೂಜಾ ಸಮಿತಿ ಹಾಗೂ ನಗರಸಭೆ ಸಹಯೋಗದಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಈ ವರ್ಷ ಶಕ್ತಿ ಗಣಪತಿ ಪೂಜಾ ಸಮಿತಿಯವರು ಪೂಜೆಯಿಂದ ಹೊರಗೆ ಉಳಿದಿರುವ ಕಾರಣ ನಗರಸಭೆ ಪ್ರಾಯೋಜಕತ್ವದಲ್ಲಿ ಗಣಪತಿ ಉತ್ಸವ ನಡೆಯಲಿದೆ.
1972ರಲ್ಲಿ ನಗರದ ಎಂ.ಎಸ್. ರಾಘವೇಂದ್ರ ಎಸ್. ಸುಬ್ರಹ್ಮಣ್ಯಸ್ವಾಮಿ ಕೆ. ಆರುಗ್ಮಂ ಸಾರಥ್ಯದಲ್ಲಿ ಶ್ರೀಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಲಾಗಿತ್ತು. ಈಚೆಗೆ ಪೂಜಾ ಸಮಿತಿಯಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯದಿಂದಾಗಿ ಕೋವಿಡ್ ಸಮಯದಲ್ಲಿ ಗಣಪತಿ ಉತ್ಸವ ಸಾಂಕೇತಿಕ ಎಂಬಂತೆ ಆಗಿತ್ತು. ಕೋವಿಡ್ ನಂತರ ಗಣಪತಿ ಉತ್ಸವ ಸರಳ ಆಚರಣೆಗೆ ಸೀಮಿತಗೊಂಡಿತ್ತು.
ಹಿಂದಿನ ವರ್ಷ 53ನೇ ವರ್ಷದ ಶಕ್ತಿಗಣಪತಿ ಉತ್ಸವವನ್ನು ಸೌಹಾರ್ದ ರೀತಿಯಲ್ಲಿ ಆಚರಿಸಲು ನಗರಸಭೆ ಅಧ್ಯಕ್ಷರಾಗಿದ್ದ ಅಜಯ್ ಕುಮಾರ್ ಮುಂದಾಗಿದ್ದರು. ಶಕ್ತಿ ಗಣಪತಿ ಪೂಜಾ ಸಮಿತಿ ಹಾಗೂ ನಗರಸಭೆ ಸಹಯೋಗದಲ್ಲಿ ಉತ್ಸವ ನಡೆಸುವ ಷರತ್ತು ಹಾಕಿದ್ದರಿಂದ ಕಳೆದ ಬಾರಿ ಶಕ್ತಿ ಗಣಪತಿ ಉತ್ಸವ ಹೊಸರೂಪ ಪಡೆಯಿತು. ಈ ವರ್ಷ ಶಕ್ತಿ ಗಣಪತಿ ಪೂಜಾ ಸಮಿತಿಯ ಪ್ರಮುಖರು ನಗರಸಭೆ ಸಹಯೋಗದಲ್ಲಿ ನಡೆಸುವ ಉತ್ಸವಕ್ಕೆ ಸಹಮತ ತೋರದೆ ಹೊರಗೆ ಉಳಿದಿದ್ದಾರೆ. ನಗರಸಭೆ ಆಡಳಿತ ಕಾಂಗ್ರೆಸ್ ಕೈಯಲ್ಲಿದ್ದು ಗಣಪತಿ ಪೂಜೆಯನ್ನು ಸವಾಲಾಗಿ ಸ್ವೀಕರಿಸಿರುವ ನಗರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಅವರನ್ನು ಪೂಜಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯೋಜನೆ ರೂಪಿಸಿದ್ದಾರೆ.
ಪರಿಸರ ಸ್ನೇಹಿ ಮೂರ್ತಿ ಕೂರಿಸಲು ಸೂಚನೆ
ಚಳ್ಳಕೆರೆ: ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ನಗರದ ಬಿಇಒ ಕಚೇರಿ ಆವರಣದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ದಲಿತ ಸಮಾಜದ ವಿವಿಧ ಸಂಘಟನೆಗಳು ಬಿಎಂ ಸರ್ಕಾರಿ ಪ್ರೌಢಶಾಲೆ ಹಿಂಭಾಗದ ಆವರಣದ ಬನ್ನಿಮರದ ಕಟ್ಟೆ ಬಳಿ ಬೆಂಗಳೂರು ರಸ್ತೆ ದೂರವಾಣಿ ಇಲಾಖೆ ಹಮಾಲಿ ಸಂಘಟನೆಗಳು ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಮತ್ತು ಹಳೆಟೌನ್ ಕನ್ನಡ ಸಂಘಟನೆ ಸೇರಿದಂತೆ ನಗರಪ್ರದೇಶದಲ್ಲಿ 10ಕ್ಕೂ ಹೆಚ್ಚು ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ. ಗಣೇಶ ಆಚರಣೆ ಪ್ರಯುಕ್ತ ಈಗಾಗಲೇ ಶಾಮಿಯಾನ ಶೆಡ್ ಪೆಂಡಲ್ ತೆಂಗಿನ ಗರಿ ಚಪ್ಪರ ಹಾಕುವ ಮೂಲಕ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹಿಂದೂ ಮಹಾ ಗಣಪತಿ ಸಂಘಟನೆ ಪ್ರತಿದಿನ ಸಂಜೆ ಹರಿಕಥೆ ಭಜನೆ ಧಾರ್ಮಿಕ ಪ್ರವಚನ ಸುಗಮ ಸಂಗೀತ ಕರ‍್ಯಕ್ರಮ ಆಯೋಜಿಸಿದೆ. ಮತ್ತು ದಲಿತ ಪರ ಸಂಘಟನೆಗಳು ಗಣೇಶ ಉತ್ಸವದ ಅಂಗವಾಗಿ ಹಳೆಟೌನ್ ಹಾಗೂ ಬನ್ನಿಮರದ ಕಟ್ಟೆ ಬಳಿ ಪ್ರತಿದಿನ ಸಂಜೆ ಸಂಗೀತಾ ಗೋಷ್ಠಿ ಶಾಸ್ತ್ರೀಯ ಸುಗಮ ಸಂಗೀತ ಭರತನಾಟ್ಯ ಮತ್ತು ನೃತ್ಯ ಕರ‍್ಯಕ್ರಮ 30 ದಿನಗಳ ವರೆಗೆ ಆಯೋಜಿಸಿವೆ. ಎಲ್ಲರೂ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ನಗರಸಭೆ ಆಡಳಿತ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.