ADVERTISEMENT

ಚಿತ್ರದುರ್ಗ | ಅಪಾಯಕಾರಿ ಹತ್ತು ವೃತ್ತ; ಇಲ್ಲ ಪೊಲೀಸರ ಚಿತ್ತ

ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತ; ಜನರ ಸಮಸ್ಯೆ ಆಲಿಸದ ಪೊಲೀಸ್‌ ಇಲಾಖೆ

ಎಂ.ಎನ್.ಯೋಗೇಶ್‌
Published 14 ಜುಲೈ 2025, 5:13 IST
Last Updated 14 ಜುಲೈ 2025, 5:13 IST
ಅಪಘಾತಗಳ ತಾಣವಾಗುತ್ತಿರುವ ಜೆಸಿಆರ್‌ ಕೆಳಸೇತುವೆಯ ಚಿತ್ರಣ
ಅಪಘಾತಗಳ ತಾಣವಾಗುತ್ತಿರುವ ಜೆಸಿಆರ್‌ ಕೆಳಸೇತುವೆಯ ಚಿತ್ರಣ   

ಚಿತ್ರದುರ್ಗ: ಕೋಟೆನಗರಿಯೊಳಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ 10 ವೃತ್ತಗಳಿದ್ದು, ಇಲ್ಲಿ ಸವಾರರು ಭಯದಿಂದಲೇ ವಾಹನ ಚಾಲನೆ ಮಾಡಬೇಕಾಗಿದೆ. ಈ ಜಾಗಗಳಲ್ಲಿ ಪೊಲೀಸರ ನಿಗಾ ಇಲ್ಲದ ಕಾರಣ ನಿತ್ಯ ಅಪಘಾತ ನಡೆಯುತ್ತಿದ್ದು, ಜನರು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. 

ಮುಖ್ಯವಾಗಿ ಹಳೇ ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆಗಳು ಅಪಘಾತ ವಲಯವಾಗಿ ಗುರುತಿಸಿಕೊಂಡಿವೆ. ಗ್ರಾಮಾಂತರ ಪೊಲೀಸ್‌ ಠಾಣೆಯ ಕೂಗಳತೆ ದೂರದಲ್ಲಿರುವ ಜೆಸಿಆರ್‌ ಬಡಾವಣೆಯ ಕೆಳಸೇತುವೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕೊಂಚ ಎಚ್ಚರ ತಪ್ಪಿದರೂ ಅಪಘಾತ ಗ್ಯಾರಂಟಿ ಎನ್ನುವ ವಾತಾವರಣವಿದೆ. ನಾಲ್ಕು ಕಡೆ ಸರ್ವೀಸ್‌ ರಸ್ತೆ, ಇನ್ನೊಂದೆಡೆ ಜೆಸಿಆರ್‌ ಬಡಾವಣೆ ಮುಖ್ಯ ರಸ್ತೆ, ಮತ್ತೊಂದೆಡೆ ಬಳ್ಳಾರಿ ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿ ಇದ್ದು ವಾಹನಗಳ ಓಡಾಟ ಸದಾ ವಿಪರೀತವಾಗಿರುತ್ತದೆ. 

ಜೆಸಿಆರ್‌ ಕಡೆಯಿಂದ ಬಂದು ಬಲಕ್ಕೆ ತಿರುಗುವವರು ಸದಾ ಎಚ್ಚರಿಕೆಯಿಂದ ಸಾಗಬೇಕು. ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ವೇಗವಾಗಿ ಬರುವ ವಾಹನಗಳು, ಜೆಸಿಆರ್‌ ಕಡೆಯಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕನಿಷ್ಠ ಹಂಪ್ಸ್ ಇಲ್ಲದ ಕಾರಣ ಆ ಕಡೆಯಿಂದ ಬರುವ ವಾಹನಗಳಿಗೆ ವೇಗದ ಮಿತಿಯೇ ಇಲ್ಲದಂತಾಗಿದೆ. ಹೀಗಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. 

ADVERTISEMENT

ಇಲ್ಲಿ ಟ್ರಾಫಿಕ್‌ ಪೊಲೀಸರೂ ಇಲ್ಲದ ಕಾರಣ ಸಂಚಾರ ನಿಯಂತ್ರಣ ಮರೀಚಿಕೆಯಾಗಿದೆ. ಬೇಕಾಬಿಟ್ಟಿಯಾಗಿ ವಾಹನ ಓಡಿಸುವುದು ಇಲ್ಲಿಯ ಜನರಿಗೆ ಕರಗತವಾಗಿದೆ. ಹೆದ್ದಾರಿಯ ಎರಡೂ ಕಡೆ ಸರ್ವೀಸ್‌ ರಸ್ತೆ ಇದ್ದರೂ, ಏಕಮುಖ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.

ದಾವಣಗೆರೆ ಹಾಗೂ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ಜೆಎಂಐಟಿ ವೃತ್ತ ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲೇ ಬರುತ್ತದೆ. ಇಲ್ಲಿಯೂ ಟ್ರಾಫಿಕ್‌ ನಿರ್ವಹಣೆ ಇಲ್ಲದ ಪರಿಣಾಮ ಅಪಾಯಕಾರಿ ತಾಣವಾಗಿ ಮಾರ್ಪಟ್ಟಿದೆ. ಸಮೀಪದಲ್ಲೇ ಎಂಜಿನಿಯರಿಂಗ್‌ ಕಾಲೇಜಿದ್ದು ವಿದ್ಯಾರ್ಥಿಗಳಿಗೂ ಅಪಾಯ ಎದುರಾಗಿದೆ. ರಸ್ತೆ ಮಧ್ಯದ ತಂತಿ ಬೇಲಿಯನ್ನು ಕಿತ್ತು ಹಾಕಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಂತಿಯ ನಡುವೆಯೇ ನುಗ್ಗುತ್ತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಚಳ್ಳಕೆರೆ ವೃತ್ತ ಎಂಟು ರಸ್ತೆಗಳು ಕೂಡವ ಸ್ಥಳವಾಗಿದ್ದು, ಇಲ್ಲಿಯೂ ಟ್ರಾಫಿಕ್‌ ನಿರ್ವಹಣೆ ಇಲ್ಲವಾಗಿದೆ. ಸುತ್ತಲೂ ಶಾಲಾ, ಕಾಲೇಜುಗಳಿದ್ದು ವಿದ್ಯಾರ್ಥಿಗಳ ಪ್ರಾಣವೂ ಅಪಾಯದಲ್ಲಿದೆ. ಬೆಂಗಳೂರು, ಚಳ್ಳಕೆರೆಗೆ ತೆರಳಲು ಇದೇ ವೃತ್ತಕ್ಕೆ ವಾಹನಗಳು ಬರಬೇಕು. ಹಳೇ ರಾಷ್ಟ್ರೀಯ ಹೆದ್ದಾರಿಯ ಕೆಳಸೇತುವೆಯಲ್ಲಿ ಐದು ಕಡೆಗೆ ಏಕಕಾಲದಲ್ಲಿ ವಾಹನಗಳು ಚಲಿಸುತ್ತವೆ. ವಾಹನಗಳ ವೇಗ ಹೆಚ್ಚಾದರೆ ದೊಡ್ಡ ಅಪಾಯಗಳೇ ಇಲ್ಲಿ ಸಂಭವಿಸುತ್ತವೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಚಳ್ಳಕೆರೆ ವೃತ್ತದಲ್ಲಿ ವಿವಿಧೆಡೆಗೆ ತೆರಳುವ ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್‌ಗಾಗಿ ರಸ್ತೆಯಲ್ಲೇ ಕಾಯುವ ಪರಿಸ್ಥಿತಿ ಇದೆ. ಇಲ್ಲಿ ಬಸ್‌ ತಂಗುದಾಣ ನಿರ್ಮಾಣವಾಗಬೇಕು ಎಂದು ಜನರು ಹಲವು ವರ್ಷಗಳಿಂದಲೂ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಜನರ ಮನವಿಗೆ ಸ್ಪಂದಿಸುತ್ತಿಲ್ಲ. ಇಲ್ಲಿ ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸಿ ಜನರು ಸಮೀಪದ ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆಯ ಬಾಗಿಲು ಬಡಿಯುವುದು ಸಾಮಾನ್ಯವಾಗಿದೆ. 

ಮೆದೇಹಳ್ಳಿ ಕೆಳಸೇತುವೆ ಕೂಡ ಅಪಾಯದ ಸೇತುವೆಯಾಗಿ ಮಾರ್ಪಟ್ಟಿದೆ. ಮೆದೇಹಳ್ಳಿ ಕಡೆಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಸೇತುವೆ ಕೆಳಗೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಶಾಲೆಗೆ ತೆರಳುವ ವಾಹನಗಳು ಇಲ್ಲಿ ಹೆಚ್ಚಾಗಿ ಓಡಾಡುತ್ತಿವೆ. ಬೆಳಿಗ್ಗೆ 8.30ರಿಂದ 9 ಗಂಟೆ ವರೆಗೆ ಹೆಚ್ಚಾಗಿ ಶಾಲಾ ವಾಹನಗಳು ಓಡಾಡುತ್ತವೆ. ಟ್ರಾಫಿಕ್‌ ನಿರ್ವಹಣೆಯಿಲ್ಲದ ಕಾರಣ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತುರುವನೂರು ಕೆಳ ಸೇತುವೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಸರ್ವೀಸ್‌ ರಸ್ತೆ ಕಿರಿದಾಗಿರುವ ಕಾರಣ ವಾಹನ ಸವಾರರು ಓಡಾಡಲು ಪರದಾಡುತ್ತಾರೆ. ತುರುವನೂರು ಕಡೆಗೆ ತೆರಳುವ ಖಾಸಗಿ ಬಸ್‌ಗಳು ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತವೆ. ಈ ವೇಳೆ ಇಡೀ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಆಗಿ ಕಿರಿಕಿರಿ ಉಂಟಾಗುತ್ತದೆ. ಸಮೀಪದಲ್ಲೇ ಇರುವ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಮದುವೆಗಳು ಇದ್ದಾಗ ಕೆಳಸೇತುವೆಯಲ್ಲಿ ಟ್ರಾಫಿಕ್‌ ಜಾಮ್‌ ತೀವ್ರಗೊಳ್ಳುತ್ತದೆ.

ಮದಕರಿ ವೃತ್ತವು ನಗರದ ಹೃದಯಭಾಗವಾಗಿದೆ. ಇಲ್ಲಿ ಮದಕರಿ ನಾಯಕರ ಪ್ರತಿಮೆ ಇದ್ದು ನಗರದ ಜನರ ಸ್ವಾಭಿಮಾನದ ಪ್ರತೀಕವೂ ಆಗಿದೆ. ರಾಷ್ಟ್ರೀಯ ಹಬ್ಬಗಳಲ್ಲಿ ಪ್ರತಿಮೆಗೆ ಅಲಂಕಾರವನ್ನೂ ಮಾಡಲಾಗುತ್ತದೆ. ವೃತ್ತ ಸಾಕಷ್ಟು ದೊಡ್ಡದಿದ್ದರೂ ಟ್ರಾಫಿಕ್‌ ನಿರ್ವಹಣೆ ಕೊರತೆಯ ಕಾರಣದಿಂದ ಸಣ್ಣ ಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಸಮೀಪದಲ್ಲೇ ನಗರ ಪೊಲೀಸ್‌ ಠಾಣೆ ಇದ್ದರೂ ಟ್ರಾಫಿಕ್‌ ಸಮಸ್ಯೆಯ ನಿರ್ವಹಣೆ ಸಾಧ್ಯವಾಗಿಲ್ಲ. 

ಕಲ್ಲಿನಕೋಟೆ ಕಡೆಗೆ ತೆರಳುವ ಪ್ರವಾಸಿಗರ ವಾಹನಗಳು ಮದಕರಿ ವೃತ್ತದ ಮೂಲಕವೇ ತೆರಳುತ್ತವೆ. ಜೋಗಿಮಟ್ಟಿ ಕಡೆಗೆ ತೆರಳುವ ರಸ್ತೆ ಕಿರಿದಾಗಿರುವ ಕಾರಣ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ರಸ್ತೆಗೆ ಹೊಂದಿಕೊಂಡಂತೆ ಎಎಂಐ ಕಟ್ಟಡವಿದೆ. ರಸ್ತೆಗೆ ಹೊಂದಿಕೊಂಡಂತೆಯೇ ಇಲ್ಲಿ ವಾಣಿಜ್ಯ ಮಳಿಗೆಯನ್ನು ಈಚೆಗೆ ನಿರ್ಮಿಸಲಾಗಿದೆ. ಇದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.

ಇನ್ನು ಬಿ.ಡಿ. ರಸ್ತೆಯ ಗಾಂಧಿ ವೃತ್ತದಲ್ಲಿ ಪರಿಸ್ಥಿತಿ ಹೇಳತೀರದಾಗಿದೆ. ಇಲ್ಲಿ ಕೆಲವೇ ಗಂಟೆಗಳು ಮಾತ್ರ ಟ್ರಾಫಿಕ್‌ ಪೊಲೀಸರು ಟ್ರಾಫಿಕ್‌ ನಿರ್ವಹಣೆ ಮಾಡುತ್ತಾರೆ. ಮಧ್ಯಾಹ್ನವಾಗುತ್ತಲೇ ಇಲ್ಲಿ ಯಾವ ಟ್ರಾಫಿಕ್‌ ಪೊಲೀಸರೂ ಇರುವುದಿಲ್ಲ. ಆರು ಕಡೆ ತೆರಳುವ ವಾಹನಗಳು ಗಾಂಧಿ ವೃತ್ತದ ಮೂಲಕವೇ ಹೋಗಬೇಕು. ಖಾಸಗಿ ಬಸ್‌ಗಳ ಹಾವಳಿ ವಿಪರೀತವಾಗಿದೆ. ಹೊಳಲ್ಕೆರೆ ರಸ್ತೆ ಕಡೆಗೆ ತೆರಳುವ ವಾಹನ ಸವಾರರು ಇಲ್ಲಿ ಟ್ರಾಫಿಕ್‌ನಿಂದ ಪರಿತಪಿಸುತ್ತಾರೆ.

ಹೊಳಲ್ಕೆರೆ ರಸ್ತೆಯ ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲೂ ಟ್ರಾಫಿಕ್‌ ನಿರ್ವಹಣೆ ಮರೀಚಿಕೆಯಾಗಿದೆ. ಆನೆಬಾಗಿಲು, ರಂಗಯ್ಯನ ಬಾಗಿಲು ಬಳಿ ಓಡಾಡುವಾಗ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಜನರಿಗೆ ಟ್ರಾಫಿಕ್‌ ನಿಯಮಗಳ ಬಗ್ಗೆ ಜಾಗೃತಿಯೂ ಇಲ್ಲದ ಕಾರಣ ಅಪಘಾತಗಳು ಸಾಮಾನ್ಯವಾಗಿವೆ.

ಶೀಘ್ರ ರಸ್ತೆ ಸುರಕ್ಷತಾ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಹಳೇ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಕರೆಗಳಿಗೆ ಎಸ್‌ಪಿ ಸ್ಪಂದನೆ ಇಲ್ಲ

ನಗರ ತಾಲ್ಲೂಕು ಕೇಂದ್ರಗಳ ಟ್ರಾಫಿಕ್‌ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು  ಸ್ವೀಕರಿಸಲಿಲ್ಲ. ‘ಪೊಲೀಸರು ಜನರ ಸಮಸ್ಯೆ ಆಲಿಸದ ಕಾರಣ ನಗರದ ಹಲವು ತಾಣಗಳು ಅಪಾಯಕಾರಿಯಾಗಿ ಮಾರ್ಪಟ್ಟಿವೆ. ಹಳೇ ರಾಷ್ಟ್ರೀಯ ಹೆದ್ದಾರಿ ನಗರದ ಜನರಿಗೆ ಸಾವಿನ ರಸ್ತೆಯಾಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕೆಲಸ ಮಾಡಿಸಿಕೊಳ್ಳುವ ಛಾತಿ ಪೊಲೀಸರಿಗೆ ಇಲ್ಲವಾಗಿದೆ’ ಎಂದು ವಕೀಲ ಎನ್‌.ಮಂಜುನಾಥ್‌ ಆರೋಪಿಸಿದರು.

ಮೇಲ್ದರ್ಜೆಗೇರಿದರೂ ತಗ್ಗದ ಅಪಘಾತ

ಕೊಂಡ್ಲಹಳ್ಳಿ ಜಯಪ್ರಕಾಶ ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ಅಪಘಾತಗಳಿಗೆ ಕುಖ್ಯಾತಿ ಪಡೆದಿದೆ. 5 ವರ್ಷಗಳ ಹಿಂದೆ ಬೀದರ್-‌ ಶ್ರೀರಂಗಪಟ್ಟಣ ರಾಜ್ಯಹೆದ್ದಾರಿಯಾಗಿದ್ದ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಯಿತು. ರಾಜ್ಯ ಹೆದ್ದಾರಿಯಾಗಿದ್ದಾಗ ಸರಣಿ ಅಪಘಾತಗಳಿಗೆ ಖ್ಯಾತಿಯಾಗಿತ್ತು. ನೂರಾರು ಅಪಘಾತಗಳು ಇಲ್ಲಿ ಸಂಭವಿಸಿವೆ. ರಾಷ್ಟ್ರೀಯ ಹೆದ್ದಾರಿಯಾಗಿ 2021 ರಲ್ಲಿ ಉನ್ನತೀಕರಣವಾಯಿತು. ಚತುಷ್ಪಥವಾದ ನಂತರ ಅಪಘಾತ ಇಳಿಮುಖವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ಹಿರೇಹಳ್ಳಿ ಹಾನಗಲ್‌ ನಾಗಸಮುದ್ರ ಡಿ. ಹಿರೇಹಾಳ್‌ ಸಮೀಪ ಹೆಚ್ಚು ಅಪಘಾತವಾಗುತ್ತಿವೆ.  ಡಿವೈಡರ್‌ಗೆ ಕಾರು ಮತ್ತು ಬೈಕ್‌ ವೇಗವಾಗಿ ಬಂದು ಅಪ್ಪಳಿಸುತ್ತಿವೆ. ಜಾಗೃತಿ ಜತೆಗೆ ಹೆದ್ದಾರಿಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಫಲಕ ಹಾಕಬೇಕಿದೆ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.

3 ಗಂಭೀರ ಅಪಘಾತ ಸ್ಥಳ

ಸುವರ್ಣಾ ಬಸವರಾಜ್‌ ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದ ಕೆಳಸೇತುವೆ ಬೆಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 48ರ ಮೂಲಕ ಹಿರಿಯೂರು ನಗರಕ್ಕೆ ಪ್ರವೇಶ ಪಡೆಯುವ ಜಾಗ ಹಾಗೂ ಮೈಸೂರು ರಸ್ತೆಯಲ್ಲಿ ಉಡುವಳ್ಳಿ ಗ್ರಾಮದ ಸಮೀಪದ ಇಳಿಜಾರು ಪ್ರದೇಶಗಳು ಅಪಘಾತಗಳಿಗೆ ಕುಖ್ಯಾತಿ ಪಡೆದಿವೆ. ಬೆಂಗಳೂರು ಕಡೆಯಿಂದ ಹಿರಿಯೂರು ನಗರ ಪ್ರವೇಶಿಸುವ ಜಾಗದಲ್ಲಿ ನಿಲುಗಡೆ ಜಾಗ ಅಲ್ಲದೇ ಇದ್ದರೂ ರಸ್ತೆ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಹಿರಿಯೂರು ಕಡೆ ತಿರುವು ಪಡೆದುಕೊಳ್ಳುವ ಸ್ಥಳ ಕಾಣದೆ ಸೇವಾ ರಸ್ತೆಯಲ್ಲಿನ ವಾಹನಗಳು ಹೆದ್ದಾರಿಗೆ ಪ್ರವೇಶ ಪಡೆಯುವಾಗ ಅಪಘಾತಗಳು ಸಂಭವಿಸುತ್ತಿವೆ.  ಪ್ರವಾಸಿ ಮಂದಿರ ವೃತ್ತದ ಬಳಿ ಇರುವ ಕೆಳ ಸೇತುವೆಯ ಮೂಲಕವೇ ಬೆಂಗಳೂರು–ಮೈಸೂರು ಕಡೆಯಿಂದ ಬರುವ ವಾಹನಗಳು ಚಳ್ಳಕೆರೆ–ಬಳ್ಳಾರಿ ಕಡೆ ಸಾಗಬೇಕು. ಸೇವಾ ರಸ್ತೆಯ ಮೂಲಕ ತಿರುವು ಪಡೆಯುವಾಗ ಹಲವು ಬಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನಗಳು ಉರುಳಿ ಬೀಳುವುದುಂಟು. ಮೈಸೂರು ರಸ್ತೆಯಲ್ಲಿ ಹುಲುಗಲಕುಂಟೆ ಗ್ರಾಮವನ್ನು ದಾಟಿದ ಮೇಲೆ ಉಡುವಳ್ಳಿ ನವೋದಯ ಶಾಲೆಯ ಇಳಿಜಾರಿನಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.