
ಚಿತ್ರದುರ್ಗ: ಟ್ರಾಫಿಕ್ ಪೊಲೀಸರು ತಪಾಸಣೆ ನೆಪದಲ್ಲಿ ಕಿರುಕುಳ ನೀಡಿದ್ದಾರೆ, ದಂಡ ಕಟ್ಟುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ಆಟೊ ಚಾಲಕರೊಬ್ಬರು ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಾಳಪ್ಪನಹಟ್ಟಿಯ ತಿಪ್ಪೇಸ್ವಾಮಿ (35) ಆತ್ಮಹತ್ಯೆಗೆ ಯತ್ನಿಸಿದ ಆಟೊ ಚಾಲಕ. ಶನಿವಾರ ರಾತ್ರಿ ಪೊಲೀಸರು ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ತಿಪ್ಪೇಸ್ವಾಮಿ ನಡುವೆ ವಾಗ್ವಾದ ನಡೆದಿತ್ತು.
₹500 ದಂಡ ಕಟ್ಟುವಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದ ತಿಪ್ಪೇಸ್ವಾಮಿ ಏಕಾಏಕಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಜನರು ನೋಡನೋಡುತ್ತಿದ್ದಂತೆ ಬೆಂಕಿ ಹೊತ್ತಿಸಿಕೊಂಡಿದ್ದಾರೆ. ಅಲ್ಲಿಯೇ ಇದ್ದ ಜನರು ಬೆಂಕಿ ನಂದಿಸಿದ್ದಾರೆ. ಆದರೂ ತಿಪ್ಪೇಸ್ವಾಮಿ ದೇಹ ಶೇ 50ರಷ್ಟು ಸುಟ್ಟಿದೆ. ಸಾರ್ವಜನಿಕರು ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆಯ ನಂತರ ಆಟೊ ಚಾಲಕರು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ತಪಾಸಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ಧಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.