ADVERTISEMENT

ಚಿತ್ರದುರ್ಗ ಕಲುಷಿತ ನೀರು ಪ್ರಕರಣ: ನೀರಿನ ಮರು ಪರೀಕ್ಷೆಗೆ ಆಂಜನೇಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2023, 8:40 IST
Last Updated 4 ಆಗಸ್ಟ್ 2023, 8:40 IST
   

ಚಿತ್ರದುರ್ಗ: ನೈಸರ್ಗಿಕವಾಗಿ ನೀರು ಕಲುಷಿತಗೊಂಡಿದ್ದರೆ ಇಷ್ಟೊಂದು ಜನರಿಗೆ ಸಮಸ್ಯೆ ಆಗಲು ಸಾಧ್ಯವಿಲ್ಲ. ನೂರಾರು ಜನರು ಏಕಕಾಲಕ್ಕೆ ಅಸ್ವಸ್ಥರಾಗಿರುವುದು ಅನುಮಾನ ಮೂಡಿಸಿದೆ. ನೀರಿನ ಮರುಪರೀಕ್ಷೆ ಮಾಡುವುದು ಸೂಕ್ತ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.

ನೀರು ಕುಡಿದು ಯುವಕರು ಮೃತಪಟ್ಟಿದ್ದು ಅಘಾತ ಮೂಡಿಸಿದೆ. ಈವರೆಗೆ ಐವರು ಪ್ರಾಣ ಕಳೆದುಕೊಂಡಿರುವುದು ದೊಡ್ಡ ದುರಂತ. ಜಿಲ್ಲಾ ಸರ್ವೇಕ್ಷಣಾ ಘಟಕ ನೀಡಿದ ನೀರಿನ ಪರೀಕ್ಷಾ ವರದಿ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಂದಲ್ಲ ಇನ್ನೊಂದು ಕಡೆ ನೀರಿನ ಪರೀಕ್ಷೆ ನಡೆಸುವುದರಲ್ಲಿ ತಪ್ಪೇನಿದೆ ಎಂದು ಕವಾಡಿಗರಹಟ್ಟಿಗೆ ಭೇಟಿ ನೀಡಿದ ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಕವಾಡಿಗರಹಟ್ಟಿಯಲ್ಲಿ ಇರುವುದು ಬಹುತೇಕ ಪರಿಶಿಷ್ಟ ವರ್ಗದ ಜನರು. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ನೀರು ಕಲುಷಿತಗೊಂಡಿದೆಯೊ ಅಥವಾ ವಿಷ ಬೆರೆಸಲಾಗಿದೆಯೊ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಸ್ವಸ್ಥರಿಗೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿದೆ. ಆದರೂ, ತಜ್ಞ ವೈದ್ಯರ ತಂಡವೊಂದನ್ನು ಕವಾಡಿಗರಹಟ್ಟಿಗೆ ಕಳುಹಿಸಿಕೊಟ್ಟರೆ ಅನುಕೂಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜೊತೆ ಮಾತನಾಡುತ್ತೇವೆ ಎಂದರು.

ADVERTISEMENT

ಆರೋಗ್ಯ ಸಚಿವರ ಭೇಟಿ ನಾಳೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈಗಾಗಲೇ ಮಾಹಿತಿ ಪಡೆದಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಕವಾಡಿಗರಹಟ್ಟಿಗೆ ಭೇಟಿ ನೀಡಲಿದ್ದಾರೆ. ಆಡಳಿತ ಪಕ್ಷದ ಸ್ಥಾನದಲ್ಲಿ ಇರುವ ಕಾಂಗ್ರೆಸ್ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಸ್ಥಳದಲ್ಲಿಯೇ ಉಳಿದು ಸಮಸ್ಯೆ ಇತ್ಯರ್ಥಪಡಿಸಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಶೋಷಿತ ಸಮುದಾಯಕ್ಕೆ ಇಂತಹ ಸಂಕಷ್ಟಗಳು ಬರುತ್ತಿವೆ. ಸ್ವಚ್ಛತೆ, ನೀರಿನ ಶುದ್ಧತೆ ಬಗ್ಗೆ ಅರಿವು ಇರುವುದಿಲ್ಲ. ಇದೊಂದು ದುಃಖದ ಸಂದರ್ಭ. ಹಲವರು ಪ್ರಾಣ ಕಳೆದುಕೊಂಡಿರುವುದು ಮನ ಕಲಕಿದೆ. ಸಂತ್ರಸ್ತರೊಂದಿಗೆ ನಾವು ಇದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.