ADVERTISEMENT

ಚಿತ್ರದುರ್ಗ: ಭರವಸೆಯೊಂದಿಗೆ ಹೊಸ ವರ್ಷಕ್ಕೆ ಸ್ವಾಗತ

ಕೇಕ್‌ಗಳ ಖರೀದಿಗೆ ಮುಗಿಬಿದ್ದ ಜನತೆ – ಭರ್ಜರಿಯಾಗಿ ನಡೆದ ಸಂತೋಷ ಕೂಟಗಳು

ಕೆ.ಪಿ.ಓಂಕಾರಮೂರ್ತಿ
Published 1 ಜನವರಿ 2023, 6:12 IST
Last Updated 1 ಜನವರಿ 2023, 6:12 IST
ಚಿತ್ರದುರ್ಗ ನಗರದ ನ್ಯೂ ಕೃಷ್ಣ ಬೇಕರಿ ಮುಂದೆ ಕೇಕ್‌ ಖರೀದಿಸುತ್ತಿರುವ ಗ್ರಾಹಕರು
ಚಿತ್ರದುರ್ಗ ನಗರದ ನ್ಯೂ ಕೃಷ್ಣ ಬೇಕರಿ ಮುಂದೆ ಕೇಕ್‌ ಖರೀದಿಸುತ್ತಿರುವ ಗ್ರಾಹಕರು   

ಚಿತ್ರದುರ್ಗ: ಕೋವಿಡ್‌ನಿಂದ ಅನುಭವಿಸಿದ ನೋವು, ಸಂಕಟ, ದುಃಖದಲ್ಲೇ 2022 ಅನ್ನು ಬರಮಾಡಿಕೊಂಡಿದ್ದ ಜನತೆ ಪುನಃ ಅದೇ ಆತಂಕದ ನಡುವೆಯೂ ಭರವಸೆಯೊಂದಿಗೆ 2023 ಅನ್ನು ಸ್ವಾಗತಿಸಿದರು. ಇನ್ನೇನು ಎಲ್ಲವೂ ಮುಗಿಯಿತು ಹೊಸ ವರ್ಷದಿಂದ ನೆಮ್ಮದಿಯಾಗಿ ಇರಬಹುದು ಎಂಬ ಲೆಕ್ಕಚಾರದಲ್ಲಿದ್ದ ಜನರ ನೆಮ್ಮದಿಯನ್ನು ವರ್ಷಾಂತ್ಯದ ಕೊನೆಯ ಕ್ಷಣದ ಬೆಳವಣಿಗೆಗಳು ಕದಡಿದರೂ ಯಾವುದನ್ನೂ ಲೆಕ್ಕಿಸದೇ ಸಂಭ್ರಮಿಸಿದರು.

ದೀಪಾಲಂಕೃತಗೊಂಡಿದ್ದ ನಗರದ ಬೇಕರಿ, ಹೋಟೆಲ್‌ಗಳಲ್ಲಿ ಯುವ ಸಮುದಾಯ ಜಮಾಯಿಸಿದ್ದರು. ಸಂಜೆಯಾಗುತ್ತಿದ್ದಂತೆ ಹೊಸ ಬಟ್ಟೆಗಳನ್ನು ಧರಿಸಿ ಮಾರುಕಟ್ಟೆಗೆ ಹೆಜ್ಜೆ ಹಾಕಿದರು. ಬೇಕರಿಗಳಲ್ಲಿ ಸಿದ್ಧಪಡಿಸಿದ್ದ ಕೇಕ್‌ಗಳನ್ನು ಖರೀದಿಸಿ ಮನೆ ಹಾಗೂ ಪಾರ್ಟಿ ಸ್ಥಳಗಳಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂದವು.

ರಾತ್ರಿ 7ರಿಂದಲೇ ಆರಂಭವಾದ ಸಂತೋಷ ಕೂಟಗಳು ರಾತ್ರಿ 12ರವರೆಗೂ ನಡೆದವು. ಹಾಡು, ನೃತ್ಯ, ಅಂತ್ಯಾಕ್ಷರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾನ್ಯವಾಗಿದ್ದವು. ಯುವ ಸಮುದಾಯ ಹೋಟೆಲ್‌, ತೋಟದ ಮನೆಗಳಲ್ಲಿ ಆಯೋಜಿಸಿದ್ದ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರೆ ಇತ್ತ ಹಿರಿಯರು ಮನೆಗಳ ಟೆರೆಸ್‌ಗಳ ಮೇಲೆ ಸಂತೋಷ ಕೂಟ ನಡೆಸಿದರು.

ADVERTISEMENT

ರಾತ್ರಿ 12ಗಂಟೆ ಸಮೀಪಿಸುತ್ತಿದ್ದಂತೆ ಕಡೆಯ ಹತ್ತು ಸೆಕೆಂಡ್‌ಗಳನ್ನು ಕೌಂಟ್ ಡೌನ್ ಮಾಡುತ್ತ, 12 ಗಂಟೆಯಾದ ಕೂಡಲೇ ಹರ್ಷೋದ್ಗಾರದೊಂದಿಗೆ 2023ಅನ್ನು ಸ್ವಾಗತಿಸಿದರು. ಕೇಕ್‌ ಕತ್ತರಿಸಿ ಜತೆಯಲ್ಲಿದ್ದವರಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧ ಕಾರ್ಯಕ್ರಮಗಳಲ್ಲಿ ಯುವಕರು ಕುಣಿದು ಸಂಭ್ರಮಿಸಿದರು.

ನಗರದ ಬೇಕರಿಗಳಲ್ಲಿ ನಡೆಸಿದ್ದ ವಿಶೇಷ ಸಿದ್ಧತೆಗೆ ಯುವಕ– ಯುವತಿಯರು ಆಕರ್ಷಿತರಾದರು. ವಿವಿಧ ವರ್ಣಗಳಿಂದ ತಯಾರಿಸಿದ್ದ ಒಂದು, ಎರಡು ಮತ್ತು ಮೂರು ಕೆ.ಜಿ.ಯ ಕೇಕ್‌ಗಳು ಕಣ್ಮನ ತಣಿಸಿದವು. ‘ಹ್ಯಾಪಿ ನ್ಯೂ ಇಯರ್‌’ ಅಕ್ಷರಗಳನ್ನು ಜೋಡಿಸಿದ ಕೇಕ್‌ಗಳು ಆಕರ್ಷಿಸಿದವು. ಮುಂಗಡ ಬುಕಿಂಗ್‌ ಮಾಡಿದವರಿಗೆ ಕೇಕ್‌ಗಳನ್ನು ಕಾಯ್ದಿರಿಸಲಾಗಿತ್ತು.

ಬಹುತೇಕ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ಕೇಕ್‌, ತಂಪು ಪಾನೀಯ, ಚಾಕೊಲೆಟ್‌ಗಳನ್ನು ಖರೀದಿಸಿದರು. ಕೆಲವೆಡೆ ರಸ್ತೆಗೆ ಶಾಮಿಯಾನ ಹಾಕಿ ಕೇಕ್‌ ಬಾಕ್ಸ್‌ಗಳನ್ನು ಇಟ್ಟು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಬಾರ್‌ ಅಂಡ್‌ ರೆಸ್ಟೋರೆಂಟ್‌, ಡಾಬಾಗಳು ತುಂಬಿದ್ದವು. ಕೆಲವರು ಚಂದ್ರವಳ್ಳಿ, ಬೆಟ್ಟ ಸೇರಿದಂತೆ ಮತ್ತಿತರ ಪ್ರದೇಶಗಳ ಮುಂದೆ ಕೇಕ್ ಕತ್ತರಿಸಿದ್ದು ಸಾಮಾನ್ಯವಾಗಿತ್ತು. ಶನಿವಾರ ಮಧ್ಯರಾತ್ರಿ 12ರ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಸಂದೇಶಗಳು ಹರಿದಾಡಿದವು. ಪೊಲೀಸರು ಗಸ್ತು ತಿರುಗುತ್ತಾ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಿದ್ದರು.

.............

ಕೇಕ್‌ ಪ್ರಿಯರಿಗೆ ವಿಶೇಷ ಆಫರ್‌

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ಬೇಕರಿಗಳಲ್ಲಿ ಕೇಕ್‌ ಪ್ರಿಯರಿಗೆ ವಿಶೇಷ ಆಫರ್‌ಗಳನ್ನು ನೀಡಲಾಗಿತ್ತು. ಆಕರ್ಷಕ ಬ್ಯಾನರ್‌ಗಳನ್ನು ಹಾಕಿ ಗ್ರಾಹಕರನ್ನು ಸೆಳಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಒಂದೊಂದು ಬೇಕರಿಯವರು ಅಂದಾಜು 500 ರಿಂದ 600 ಕೆಜಿ ಕೇಕ್‌ಗಳನ್ನು ಸಿದ್ಧಗೊಳಿಸಿದ್ದರು. ಅದರಲ್ಲೂ ಐಸ್‌ ಕೇಕ್‌, ಕೋಲ್ಡ್ ಕೇಕ್‌, ರೆಡ್‌ಬುಲ್‌ ಕೇಕ್‌, ಚಾಕೊಲೆಟ್‌ ಕೇಕ್‌, ಬ್ರೆಡ್‌ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಒಂದು ಕೆಜಿ ಖರೀದಿಸಿದರೆ ಒಂದು ತಂಪು ಪಾನೀಯ ಉಚಿತ, 2 ಕೆ.ಜಿ ಗಿಂತಲೂ ಹೆಚ್ಚಿನ ಕೇಕ್‌ ಖರೀದಿಗೆ ₹ 50 ರಿಯಾಯಿತಿ ಹೀಗೆ ವಿವಿಧ ಆಫರ್‌ಗಳನ್ನು ನೀಡಲಾಯಿತು.

-------

ಹೊಸ ವರ್ಷಾಚರಣೆ ಸಂಭ್ರಮ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೊಸಬರನ್ನು ಸೆಳೆಯಲು ಹಾಗೂ ನಿತ್ಯ ಗ್ರಾಹಕರಿಗೆ ಉಡುಗೊರೆ ರೂಪದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.

-ದಿಲೀಪ್‌, ಮಾಲೀಕ, ಕೇಕ್‌ ಮನೆ

.........

ಮುಂಗಡವಾಗಿ ಕೇಕ್‌ ಬುಕಿಂಗ್‌ ಮಾಡಿದ್ದು ಅನುಕೂಲವಾಯಿತು. ಹಾಡು, ಹರಟೆ ನಡೆಸಿ ರಾತ್ರಿ 12 ಗಂಟೆಗೆ ಸರಿಯಾಗಿ ಕೇಕ್‌ ಕತ್ತರಿಸಿ ಕುಟುಂಬದ ಜತೆ 2022ಕ್ಕೆ ವಿದಾಯ ಹೇಳುತ್ತ 2023 ಹೊಸ ವರ್ಷವನ್ನು ಸ್ವಾಗತಿಸಿದ್ದು ನಿಜಕ್ಕೂ ಖುಷಿ ತಂದಿತು.

-ದಿವ್ಯಾ, ಚಿತ್ರದುರ್ಗ

.............

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.